ಪಿರಿಯಾಪಟ್ಟಣ: ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಹಾಗೂ ಇಲ್ಲಿನ ಹಮಾಲಿಗಳ ಭ್ರಷ್ಟಾಚಾರಕ್ಕೆ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವ ಆರೋಪಗಳು ಕೇಳಿ ಬಂದಿದ್ದು ಕೂಡಲೇ ತನಿಖೆ ನಡೆಸುವಂತೆ ರೈತರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಬೆಟ್ಟದಪುರದ ಎಪಿಎಂಸಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಜವಾಬ್ದಾರಿಯನ್ನು ವಹಿಸಿ ರಾಗಿ ಖರೀದಿ ಮಾಡಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟು ಫೆ. 1 ರಿಂದ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ಒಂದು ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು 1.83 ಲಕ್ಷ ಕ್ವಿಂಟಲ್ ರಾಗಿ ಖರೀದಿಗೆ ಅವಕಾಶ ಕಲ್ಪಿಸಿ 11 ಸಾವಿರ ರೈತರು ನೋಂದಣಿ ಮಾಡಿಸಿದ್ದರು. ಫೆಬ್ರವರಿ ತಿಂಗಳಿಂದ ರಾಗಿ ಖರೀದಿ ಆರಂಭವಾಗಿ ಏ.29 ರವರೆಗೆ 1.63 ಲಕ್ಷ ಕ್ವಿಂಟಲ್ ರಾಗಿ ಖರೀದಿ ಮಾಡಲಾಗಿದ್ದು, ಶನಿವಾರ ರಾಗಿ ಖರೀದಿಗೆ ತೆರೆ ಬಿದಿದ್ದೆ.
ಕಳಪೆ ಗುಣಮಟ್ಟದ ರಾಗಿ ಖರೀದಿ ಕೋಟ್ಯಂತರ ರೂ. ನಷ್ಟ: ಸರ್ಕಾರ ಹಲವು ಮಾನದಂಡ ಗಳೊಂದಿಗೆ ಸಣ್ಣ ಹಿಡುವಳಿದಾರರಿಗೆ ಅವಕಾಶ ಕಲ್ಪಿಸಿ ಪ್ರತಿ ರೈತರಿಂದ 20 ಕ್ವಿಂಟಲ್ ರಾಗಿ ಮಾರಾಟ ಮಾಡಲು ಅವಕಾಶ ನೀಡಿತ್ತು. ಪ್ರಾರಂಭದಲ್ಲಿ ಕೆಲವು ನಿಯಮ ನ್ಯೂನತೆಗಳೊಡನೆ ಪ್ರಾರಂಭದ ರಾಗಿ ಖರೀದಿ ದಿನ ಕಳೆದಂತೆ ಅಧಿಕಾರಿಗಳು, ಮಧ್ಯವರ್ತಿಗಳು, ವರ್ತಕರು ಹಾಗೂ ಹಮಾಲಿಗಳು ಹಣಕ್ಕಾಗಿ ಪೀಡಿಸಿ ಇಲ್ಲಿನ ರಾಗಿ ಖರೀದಿ ಅಧಿಕಾರಿಗಳು ಹಣದ ದಂಧೆ ನಡೆಸಲು ರಾಗಿ ಮಾರಾಟಕ್ಕೆ ಬರುತ್ತಿರುವ ರೈತರನ್ನು ಉದ್ದೇಶ ಪೂರ್ವಕವಾಗಿ ಹಲವು ಕಾರಣ ಹೇಳುತ್ತಾ, ಎರಡ್ಮೂರು ದಿನ ಖರೀದಿ ಮಾಡದೇ ಸತಾಯಿಸಿದರೆ, ಬೇಸತ್ತ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ ಎಂಬ ದುರುದ್ದೇಶ ಹಾಗೂ ತೂಕದಲ್ಲಿ ಭಾರಿ ಮೋಸ ಮಾಡುತ್ತಿರುವುದರ ಬಗ್ಗೆ ಈಗಿನ ತಹಶೀಲ್ದಾರ್ ಕುಂಜಿ ಅಹಮದ್ ಅವರಿಗೆ ದೂರು ನೀಡಲಾಗಿ ಅವರು ಸ್ಥಳಕ್ಕೆ ಧಾವಿಸಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಹೋದರೂ ರೈತರ ಶೋಷಣೆ ಹಾಗೂ ಭ್ರಷ್ಟಾಚಾರ ಇನ್ನು ಹೆಚ್ಚಾಗಿದೆ.
ತನಿಖೆಗೆ ರೈತರ ಆಗ್ರಹ: ಈ ರಾಗಿ ಖರೀದಿ ಕೇಂದ್ರಗಳಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ, ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಶಿಕ್ಷೆಯಾಗಬೇಕು, ತಾಲ್ಲೂಕಿನ ರೈತರಿಗೆ ಅನ್ಯಾಯವಾಗದಂತೆ ತಡೆಯಲು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ರೈತ ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಡೆಯ ದಿನಗಳಲ್ಲಿ ಕಳಪೆ ರಾಗಿ ಖರೀದಿ: ರಾಗಿ ಖರೀದಿ ಮುಕ್ತಾಯ ವಾಗುತ್ತದೆ ಎಂದು ಕಳೆದ 15 ದಿನಗಳಿಂದ ಇಲ್ಲಿನ ಅಧಿಕಾರಿಗಳು ವರ್ತಕರೊಂದಿಗೆ ಶಾಮೀಲಾಗಿ ಅಲ್ಲಿ ಇಲ್ಲಿ ಗೋಡೌನ್ ನಲ್ಲಿ ಇಟ್ಟಿದ್ದ ಕಳಪೆ ಗುಣಮಟ್ಟದ 5-6 ವರ್ಷದಿಂದ ಕೂಡಿಟ್ಟ ರಾಗಿಯನ್ನು ತಂದು ಮಾರಾಟ ಮಾಡಿ ಈ ರಾಗಿಯನ್ನು ಗುಣಮಟ್ಟದ ರಾಗಿ ಜೊತೆ ಮಿಕ್ಸ್ ಮಾಡುತ್ತಿರುವುದು ಕಂಡು ಬಂದಿದೆ. ಕಳಪೆ ಗುಣಮಟ್ಟದ ರಾಗಿ ಖರೀದಿ ಮಾಡಿರುವುದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶ ಮಾಡಿ ತನಿಖೆ ಮಾಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಒತ್ತಾಯವಾಗಿದೆ.
ರಾಗಿ ಖರೀದಿ ಕೇಂದ್ರಗಳಲ್ಲಿ ಹಮಾಲಿಗಳು ರೈತರಿಂದ ಒಂದು ರಾಗಿ ಚೀಲಕ್ಕೆ ಹೆಚ್ಚುವರಿಯಾಗಿ 40 ಪಡೆಯುತ್ತಿರುವುದು ಹಾಗೂ ತೂಕದಲ್ಲಿ, 50 ಕೆ.ಜಿ. ರಾಗಿಯ ಬದಲಿಗೆ 52 ಕೆ.ಜಿ ತೂಕ ಮಾಡಿ 4 ಕೆ.ಜಿ. ಹೆಚ್ಚು ರಾಗಿಯನ್ನು ತೂಕ ಹಾಕಿ ರೈತರಿಗೆ ತೂಕದಲ್ಲೂ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಜತೆಗೆ ಅಧಿಕಾರಿಗಳು ಹಾಗೂ ಸಾರಿಗೆ ಗುತ್ತಿಗೆದಾರರು ಶಾಮೀಲಾಗಿ ಸರ್ಕಾರ ನಿಗದಿಪಡಿಸಿರುವ ಕ್ವಿಂಟಲ್‌ಗೆ 3,295 ಬದಲಿಗೆ 2,300ಗೆ ರಾಗಿ ಖರೀದಿಸುತ್ತಿರುವುದು, ಗ್ರೇಡಿಂಗ್ ಮಾಡುವಲ್ಲಿ ಕೃಷಿ ಅಧಿಕಾರಿಗಳು ರೈತರಿಂದ ಹಣ ವಸೂಲಿ ಮಾಡುತ್ತಿರುವ ಅವ್ಯವಹಾರದ ದಂಧೆ ನಡೆಯುತ್ತಿದೆ ಇದನ್ನು ಕೇಳಿದರೆ ನಮ್ಮ ರಾಗಿಯನ್ನು ಖರೀದಿ ಮಾಡುವುದೇ ಇಲ್ಲ,
-ಹೆಸರು ಹೇಳದ ರೈತ, ರಾಜನ ಬಿಳುಗುಲಿ ಗ್ರಾಮ
ಪಿರಿಯಾಪಟ್ಟಣ ರೈತರು ಖರೀದಿ ಕೇಂದ್ರಕ್ಕೆ ಬಂದ ದಿನವೇ ರಾಗಿ ಖರೀದಿ ಮಾಡ ಬೇಕಾದರೆ ಇಂತಿಷ್ಟು ಹಣ ನೀಡಬೇಕು ಪ್ರತಿ ಕ್ವಿಂಟಲ್‌ಗೆ 4 ಕೆ.ಜಿ. ಹೆಚ್ಚು ರಾಗಿ ನೀಡಬೇಕು, ಲೋಡ್ ಅನ್ಲೋಡ್ ಮಾಡುವ ಹಮಾಲಿ ಗಳಿಗೆ ಹೆಚ್ಚುವರಿಯಾಗಿ ಹಣ ನೀಡಬೇಕು.
-ಹೆಸರು ಹೇಳದ ರೈತ, ಭುವನಹಳ್ಳಿ ಪಿರಿಯಾಪಟ್ಟಣ
– ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ