Advertisement

ಕಚೇರಿ ಸುಗಮ ಕೆಲಸಕೆ ಹೊಸ ತಂತ್ರಜ್ಞಾನ-ಕೌಶಲ್ಯ ಸಹಕಾರಿ

07:06 PM Mar 25, 2021 | Team Udayavani |

ವಿಜಯಪುರ: ಪ್ರಸ್ತುತ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಕಚೇರಿ ಕೆಲಸಗಳು ಕಾಗದ ರಹಿತ ಸಂವಹನದ ಮೂಲಕ ನಡೆಯುತ್ತಿದೆ. ಕಾರಣ ಕಂಪ್ಯೂಟರ್‌ ಕಲಿಕೆ, ಜ್ಞಾನಾರ್ಜನೆ ಇಂದಿನ ಅಗತ್ಯವಾಗಿದೆ. ಹೊಸ ತಂತ್ರಜ್ಞಾನ-ಕೌಶಲ್ಯಗಳನ್ನು ಅಳವಡಿಸಿಕೊಂಡರೆ ಕಚೇರಿ ಕೆಲಸ ಸುಗಮದ ಜೊತೆಗೆ ಸಮಯದ ಉಳಿತಾಯವೂ ಆಗುತ್ತದೆ ಎಂದು ಬಿಎಲ್‌ಡಿಇ ಸಂಸ್ಥೆಯ ಚಾರ್ಟ್‌ರ್ಡ್‌ ಅಕೌಂಟಂಟ್‌ ರಾಜೀವ್‌ ನಾಯಕ ಹೇಳಿದರು.

Advertisement

ನಗರದ ಎ.ಎಸ್‌. ಪಾಟೀಲ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಬೋಧಕೇತರ ಸಿಬ್ಬಂದಿಯವರಿಗೆ ಹಮ್ಮಿಕೊಂಡಿದ್ದ ಕೌಶಲ್ಯದ ಜೊತೆಗೆ ಹೊಸ ತಂತ್ರಜ್ಞಾನದ ಅಳವಡಿಕೆ ಎಂಬ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಬೋಧಕೇತರ ಸಿಬ್ಬಂದಿ ಹೊಸ ಹೊಸ ತಂತ್ರಜ್ಞಾನ ಅರಿಯುವುದು ಇಂದಿನ ಜರೂರಾಗಿದೆ. ಶೀಘ್ರ ಲಿಪಿಯನ್ನು ಕಲಿತರೆ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ಜೆ.ಎಸ್‌. ಪೂಜೇರಿ ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳು ಸುಗಮವಾಗಿ
ಸಾಗಲು ಬೋಧಕರ ಕಾರ್ಯ ಎಷ್ಟು ಮುಖ್ಯವೋ ಅಷ್ಟೆ ಜವಾಬ್ದಾರಿ ಬೋಧಕೇತರ ಸಿಬ್ಬಂದಿ ಮೇಲಿದೆ. ಸಮಯ ಪಾಲನೆ ಮತ್ತು ಕರ್ತವ್ಯದ ಪ್ರಜ್ಞೆ ಇರಬೇಕು.
ಎಷ್ಟೇ ಒತ್ತಡವಿದ್ದರೂ ತಾಳ್ಮೆ, ಸಹನೆಯಿಂದ ವರ್ತಿಸಿದರೆ ಸಂಸ್ಥೆ, ಮಹಾವಿದ್ಯಾಲಯಕ್ಕೆ ಒಳ್ಳೆ ಹೆಸರು ಬರುತ್ತದೆ. ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೊತೆ ಉತ್ತಮ ಸಂಬಂಧವಿಟ್ಟುಕೊಳ್ಳುವುದು ಬೋಧಕೇತರ ಸಿಬ್ಬಂದಿಗೆ ಅವಶ್ಯ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ| ವಿ.ಎಸ್‌. ಬಗಲಿ ಮಾತನಾಡಿ, ಯಾವುದೇ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಯಲ್ಲಿ ಬೋಧಕೇತರ ಸಿಬ್ಬಂದಿ ಪಾತ್ರವೂ ಬಹಳ ಮುಖ್ಯವಾಗಿದ್ದು ಕರ್ತವ್ಯ ಪ್ರಜ್ಞೆಗೆ ಮಹತ್ವ ಕೊಡಬೇಕು. ಸರಕಾರ, ವಿವಿಧ ಇಲಾಖೆ ಹೊರಡಿಸಿದ ಆದೇಶ-ಸುತ್ತೋಲೆಗಳನ್ನು ಗಮನದಲ್ಲಿ  ಇರಿಸಿಕೊಂಡು ಕೆಸಿಎಸ್‌ಆರ್‌ ನಿಯಮದಂತೆ ಕಾರ್ಯ ನಿರ್ವಹಿಸಬೇಕು. ಸೇವಾ ಪುಸ್ತಕ, ಹಣಕಾಸು, ದಾಖಲಾತಿ, ವರ್ಗಾವಣೆ, ಅಂಕಪಟ್ಟಿ ನಿರ್ವಹಣೆ, ಅನುದಾನ ಬಳಕೆ ಹೀಗೆ ವಿವಿಧ ರೀತಿಯ ಕೆಲಸಗಳಲ್ಲಿ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಶಿಧರ ಹೇರಲಗಿ, ರಾಕೇಶ ಪಾಟೀಲ, ಎಸ್‌.ಪಿ. ಪಾಟೀಲ, ಡಿ.ಎಚ್‌. ಸಾವಳಗಿ, ವಿ.ವೈ. ಸಕ್ರಿ ಸೇರಿದಂತೆ ವಿವಿಧ ಕಾಲೇಜುಗಳ ಬೋಧಕೇತರ ಸಿಬ್ಬಂದಿ
ಇದ್ದರು. ಐಕ್ಯೂಎಸಿ ಸಂಯೋಜಕಿ ಡಾ| ಬಿ.ಆರ್‌. ಹಿರೇಮಠ, ಸಂಘಟನಾ ಕಾರ್ಯದರ್ಶಿ ಪ್ರೊ| ಕೆ.ಐ. ಹಿರೇಮಠ ವೇದಿಕೆಯಲ್ಲಿದ್ದರು. ಸುಭಾಷ್‌ಚಂದ್ರ ಕನ್ನೂರ ಪರಿಚಯಿಸಿದರು. ಸುಜಾತಾ ಜಾಧವ ಪ್ರಾರ್ಥಿಸಿದರು. ಕಾರ್ಯಕ್ರಮ ಆಯೋಜಕರಾದ ಕಾಲೇಜಿನ ಅಧಿಧೀಕ್ಷಕ ಎಸ್‌.ಪಿ. ಕನ್ನೂರ ಪ್ರಾಸ್ತಾವಿಕ ಮಾತನಾಡಿದರು. ರೇಣುಕಾ ಬಿರಾದಾರ ಸ್ವಾಗತಿಸಿದರು. ಎಸ್‌.ಎಸ್‌. ಗೋನಾಳ, ಪವಿತ್ರಾ ಜಾಧವ ನಿರೂಪಿಸಿದರು. ರವಿ ಮನಗೂಳಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next