Advertisement

ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತ: ಪ್ರತಿಭಟನೆ

08:20 PM Feb 18, 2020 | Lakshmi GovindaRaj |

ಗೌರಿಬಿದನೂರು: ಫೆ.5ನೇ ತಾರೀಖೀನಿಂದ ಗೌರಿಬಿದನೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಹೊಸತಂತ್ರಾಶ ಅಳವಡಿಸದೇ ಉಪನೋಂದಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಹಾಗೂ ಪತ್ರಬರಹಗಾರರು ಉಪನೋಂದಣಾಧಿಕಾರಿಗಳ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದರು.

Advertisement

ನೋಂದಣಿಗಾಗಿ ಹೊಸ ಪದ್ಧತಿ ಜಾರಿಯಾಗಿದ್ದು, ಸೇವಾ ತಂತ್ರಾಂಶ 6.8 ತಂತ್ರಾಂಶ ಅಳವಡಿಸಿರುವುದರಿಂದ 5ನೇ ತಾರೀಖೀನಿಂದಲೂ ದಸ್ತಾವೇಜುಗಳು ನೋಂದಣಿಯಾಗದೇ ಸಾರ್ವಜನಿಕರು ಹಾಗೂ ಪತ್ರಬರಹಗಾರರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.

ಹೊಂದಿಕೆಯಾಗದ ಹೊಸ ತಂತ್ರಾಂಶ: ಉಪನೋಂದಣಾಧಿಕಾರಿಗಳು ಕಳೆದ 15ದಿನಗಳಿಂದ ಯಾವುದೇ ಕ್ರಮಕೈಗೊಳ್ಳದೇ ಹಾಗೂ ಬದಲಿ ವ್ಯವಸ್ಥೆ ಮಾಡದೇ ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಹಾಗೂ ಪತ್ರಬರಹಗಾರರು ಉಪನೋಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಈ ಹಿಂದೆ ಕಚೇರಿಯಲ್ಲಿ ನೋಂದಣಿಗಾಗಿ ಹಳೆ ತಂತ್ರಾಶ ಅಳವಡಿಸಿದ್ದು, ಈಗಿನ ಹೊಸ ತಂತ್ರಾಂಶ (6.8) ಹೊಂದಿಕೆಯಾಗುತ್ತಿಲ್ಲ.

ಇದನ್ನು ಮನಗಂಡು ಕೂಡಲೇ ಸರಿಪಡಿಸಬೇಕಾದ ಜವಾಬ್ದಾರಿಯಿದ್ದರೂ ಉಪ ನೋಂದಣಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಪತ್ರಬರಹಗಾರ ಕಾದಲವೇಣಿ ಮೋಹನ್‌ ಆರೋಪಿಸಿದರು.

ನೋಂದಣಿಗೆ ಹೊಸ ನಿಬಂಧನೆಗಳು: ಎಲ್ಲಾ ತರಹದ ದಸ್ತಾವೇಜುಗಳಿಗೆ ಮೊಬೈಲ್‌ ನಂಬರ್‌ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಯಾವುದೇ ನೋಂದಣಿ ಪತ್ರದಲ್ಲಿ ಕ್ರಯದಾರರು ಹಾಗೂ ಮಾರಾಟಗಾರರ ದಸ್ತಾವೇಜಿನಲ್ಲಿ ಸಹಿ ಮಾಡಿರುವ ಸಾಕಿದಾರರ ಸಮೇತ ಎಲ್ಲರ ಅಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ನಂಬರ್‌ ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಎಲ್ಲರೂ ಖುದ್ದು ಹಾಜರಿರಬೇಕು.

Advertisement

ನೋಂದಣಿ ಪ್ರಾರಂಭಿಸಿಲ್ಲ: ನೋಂದಣಿ ದಸ್ತಾವೇಜು, ಭೂಮಿ (ಜೆ ಸ್ಲಿಪ್‌ ಚೀಟಿ) ಎಕ್ಸ್‌ ಎಂಎಲ್‌ ಅಪ್‌ಲೋಡ್‌ ಮಾಹಿತಿ, ಇ-ಸ್ವತ್ತು , ಯುಪಿಒಆರ್‌ ಎಕ್ಸ್‌ಎಂಎಲ್‌ ಮಾಹಿತಿಯನ್ನು ಸಂಬಂಧಪಟ್ಟ ಕಕ್ಷಿದಾರರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಲಾಗಿದ್ದು,

ನೋಂದಣಿ ಸಮಯದಲ್ಲಿ ಎಲ್ಲಾ ತರಹದ ದಸ್ತಾವೇಜುಗಳಿಗೆ ಸಲ್ಲಿಸಲಾಗುವ ಇತರೆ ದಾಖಲಾತಿಗಳ ಜೊತೆಗೆ ಅಧಾರ್‌ ಕಾರ್ಡ್‌ ಮತ್ತು ಮೊಬೈಲ್‌ ನಂಬರ್‌ ಕಡ್ಡಾಯವಾಗಿ ಹಾಜರುಪಡಿಸಬೇಕು ಹಾಗೂ ಪಹಣಿ 15 ದಿನಗಳ ಒಳಗೆ ಪಡೆದ ‘ಮೂಲ ಹಾಗೂ ಜೆರಾಕ್ಸ್‌ ಪ್ರತಿ ಸಲ್ಲಿಸಬೇಕೆಂದು ನಿಬಂಧನೆ ಹಾಕಿದ್ದು, ಸಾರ್ವಜನಿಕರು ಒಪ್ಪಿದ್ದರೂ ಈವರೆಗೂ ನೋಂದಣಿ ಪ್ರಾರಂಭಿಸಿಲ್ಲ ಎಂದು ಆರೋಪಿಸಿದ್ದಾರೆ.

ನೋಂದಣಿಯಾಗದಿರುವುದರಿಂದ ಮದುವೆಗಾಗಿ ಹಾಗೂ ಸಾಲ ತೀರಿಸಲು ಆಸ್ತಿಗಳನ್ನು ಮಾರಾಟ ಮಾಡಿಕೊಳ್ಳಬೇಕು, ಬ್ಯಾಂಕ್‌ ಸಾಲಕ್ಕಾಗಿ ಇ.ಸಿ. ಪ್ರತಿ ಪಡೆಯಬೇಕೆಂದು 15 ದಿನದಿಂದ ಕಾಯುತ್ತಿರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಪ್ರತಿನಿತ್ಯ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಪತ್ರಬರಹಗಾರರಿಗೆ ಆರ್ಥಿಕ ಸಮಸ್ಯೆ ತಲೆದೋರಿದೆ.

ಇವುಗಳನ್ನು ಅರಿತುಕೊಳ್ಳದ ನೋಂದಣಾಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದು, ತಾಲೂಕು ತಹಶೀಲ್ದಾರ್‌ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸುಧೀಂದ್ರರಾವ್‌, ಅಶ್ವತ್ಥನಾರಾಯಣ, ಪ್ರಕಾಶ್‌, ಲಕ್ಷ್ಮೀಶ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೊಸದಾಗಿ ಅಳವಡಿಸಿರುವ ಸಾಫ್ಟ್ವೇರ್‌ ಹೊಂದಾಣಿಕೆಯಾಗುತ್ತಿಲ್ಲ. ಈ ಸಂಬಂಧ ಮೇಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.
-ಸಬ್‌ರಿಜಿಸ್ಟರ್‌

Advertisement

Udayavani is now on Telegram. Click here to join our channel and stay updated with the latest news.

Next