Advertisement

ಕೆಜಿಎಫ್‌ ಎಸ್ಪಿ ಕಚೇರಿ ಸ್ಥಳಾಂತರಗೊಂಡಿದೆ: ಸಚಿವ ಸ್ಪಷ್ಟನೆ

04:54 PM Nov 02, 2021 | Team Udayavani |

ಕೋಲಾರ: ನನಗಿರುವ ಮಾಹಿತಿ ಪ್ರಕಾರ ಕೆಜಿಎಫ್‌ ಎಸ್ಪಿ ಕಚೇರಿ ಈಗಾಗಲೇ ಸ್ಥಳಾಂತರಗೊಂಡಿದೆ, ಅದಕ್ಕೆ ನನ್ನ ಸಹಮತವೂ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರೆ, ಜತೆಯಲ್ಲೇ ಇದ್ದ ಸಂಸದ ಮುನಿಸ್ವಾಮಿ ಸ್ಥಳಾಂತರ ಮಾಡುತ್ತಿಲ್ಲ ಎಂದು ಹೇಳುವ ಮೂಲಕ ಗೊಂದಲ, ಇಬ್ಬರಲ್ಲಿನ ದ್ವಂದ್ವ ಅನಾವರಣಗೊಂಡಿತು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಮುನಿರತ್ನ, ಕೆಜಿಎಫ್‌ ಎಸ್ಪಿ ಕಚೇರಿ ವಿಜಯನಗರ ಜಿಲ್ಲೆಗೆ ಸ್ಥಳಾಂತರಗೊಂಡಿದೆ. ಆದರೆ, ಆದೇಶದಲ್ಲಿ ಮಾರ್ಪಾಡು ಆಗಿದ್ದರೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ತಿಳಿಸುವ ಮೂಲಕ ಕೆಜಿಎಫ್‌ ಎಸ್ಪಿ ಕಚೇರಿ ಸ್ಥಳಾಂತರ ವಿವಾದ ಜೀವಂತವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದಂತಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಎಸ್ಪಿ ಕಚೇರಿ ಅವಶ್ಯಕತೆ ಇತ್ತು. ಈಗ ಅವಶ್ಯಕತೆ ಇಲ್ಲ, ಹೀಗಾಗಿ ವಿಜಯನಗರ ಜಿಲ್ಲೆಗೆ ಸ್ಥಳಾಂತರ ಮಾಡುತ್ತೇವೆ. ಕೋಲಾರ ಎಸ್ಪಿಗೆ ಎರಡು ತಾಲೂಕು ಹೆಚ್ಚುವರಿ ಆದರೆ ಕಷ್ಟ ಆಗಲ್ಲ. ಕಾನೂನು ಸುವ್ಯವಸ್ಥೆಗೆ ಏನೂ ತೊಂದರೆ ಆಗೋದಿಲ್ಲ. ಸ್ಥಳಾಂತರಕ್ಕೆ ನಾನು ಸಹ ಒಮ್ಮತ ಸೂಚಿಸಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ:- ಗೋವಾ ಕನ್ನಡ ಸಮಾಜ ಕಚೇರಿ ಉದ್ಘಾಟನೆ

ಸ್ಥಳಾಂತರವಿಲ್ಲ ಸಂಸದ: ಈ ಮಧ್ಯೆ ಪ್ರತಿಕ್ರಿಯಿಸಿದ್ದ ಸಂಸದ ಎಸ್‌.ಮುನಿಸ್ವಾಮಿ ಯಾವುದೇ ಕಾರಣಕ್ಕೂ ಎಸ್ಪಿ ಕಚೇರಿ ಸ್ಥಳಾಂತರ ಮಾಡುತ್ತಿಲ್ಲ, ಈ ಬಗ್ಗೆ ಸಿಎಂ, ಗೃಹ ಸಚಿವರು, ಎಡಿಜಿಪಿ ಜತೆ ಚರ್ಚಿಸಲಾಗಿ ಕೆಜಿಎಫ್‌ ಹೊರತುಪಡಿಸಿ ವಿಜಯನಗರಕ್ಕೆ ಹುದ್ದೆಗಳನ್ನು ವರ್ಗಾಯಿಸಿದ್ದಾರೆ. ಉಸ್ತುವಾರಿ ಸಚಿವರು ಚುನಾವಣೆ ಪ್ರಚಾರದಲ್ಲಿದ್ದರಿಂದ ಮಾಹಿತಿ ಇಲ್ಲ, ಮಾಹಿತಿ ನೀಡುವುದಾಗಿ ತಿಳಿಸಿದರು.

ಸಚಿವರ ಸ್ಪಷ್ಟನೆ: ದ್ವಂದ್ವ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಸ್ಪಷ್ಟನೆ ನೀಡಿದ ಉಸ್ತುವಾರಿ ಸಚಿವ ಮುನಿರತ್ನ, ಕೆಜಿಎಫ್‌ ಎಸ್ಪಿ ಕಚೇರಿ ವಿಜಯನಗರಕ್ಕೆ ಸ್ಥಳಾಂತರಿಸುವ ಬಗ್ಗೆ ಸರ್ಕಾರ ಆ.19ರಂದು ಆದೇಶ ಹೊರಡಿಸಿತ್ತು. ಉಪಚುನಾವಣೆ ಪ್ರಚಾರ, ಪುನೀತ್‌ ರಾಜ್‌ ಕುಮಾರ್‌ ನಿಧನ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂ ಡಿದ್ದೆ. ಎಸ್ಪಿ ಕಚೇರಿ ಸ್ಥಳಾಂತರ ಮಾರ್ಪಾಡು ಆಗಿದೆ ಎಂದು ಸಂಸದರು ಹೇಳುತ್ತಿದ್ದಾರೆ. ಗೊಂದಲದ ಹೇಳಿಕೆ ಇರಬಾರದು, ಹಾಗಾಗಿ ಬೆಂಗಳೂರಿಗೆ ಹೋದ ತಕ್ಷಣವೇ ಮಾಹಿತಿ ಪಡೆದು ಪ್ರತಿಕ್ರಿಯಿಸುವುದಾಗಿ ಹೇಳಿದರು.

Advertisement

ಪರೋಕ್ಷ ವಾಗ್ಧಾಳಿ: ಕೋಲಾರ ಡಿಸಿಸಿ ಬ್ಯಾಂಕ್‌ ನಲ್ಲಿ ಹಗರಣ ನಡೆದಿರುವ ಬಗ್ಗೆ ಸಚಿವ ಸುಧಾಕರ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿ ಸಿದ ಅವರು, ಇದರ ಬಗ್ಗೆ ತನಿಖೆ ಆಗಲಿಲ್ಲ ಎಂದರೆ ಅದಕ್ಕಿಂತ ದ್ರೋಹ ಇನ್ನೊಂದಿಲ್ಲ. ನನಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ, ಸತ್ತವರ ಹೆಸರಿನಲ್ಲಿ ಯಾರ್ಯಾರು ಸಾಲ ಪಡೆದು ವಂಚಿಸಿದ್ದಾರೆ ಅಂತ ಗೊತ್ತಾಗುತ್ತದೆ. ಈ ವಿಚಾರದಲ್ಲಿ ಯಾರೇ ಆಗಿದ್ದರೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next