ಕಲಘಟಗಿ: ಹಿಂದುಳಿದವರು, ಆರ್ಥಿಕ ದುರ್ಬಲರು ಸರಕಾರಿ ಆಸ್ಪತ್ರೆ ಅವಲಂಬಿಸಿದ್ದು, ವೈದ್ಯರು, ಸಿಬ್ಬಂದಿ ಮಾನವೀಯತೆ, ಸೌಜನ್ಯದಿಂದ ರೋಗಿಗಳಿಗೆ ಮಾನಸಿಕ ಸ್ಥೈರ್ಯ ತುಂಬಲು ಮುಂದಾಗಬೇಕೆಂದು ಶಾಸಕ ಸಿ.ಎಂ.ನಿಂಬಣ್ಣವರ ಹೇಳಿದರು.
ತಾಲೂಕು ಕೇಂದ್ರ ಸ್ಥಳದಲ್ಲಿರುವ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಿರುವ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡಕ್ಕೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಾದ್ಯಂತ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಮೂಲಸೌಲಭ್ಯ ಒದಗಿಸಲಾಗಿದೆ.
ಎಲ್ಲ ಸೌಲಭ್ಯ ಹೊಂದಿರುವ 100 ಹಾಸಿಗೆಗಳ ತಾಲೂಕು ಸಾರ್ವಜನಿಕ ಆಸ್ಪತ್ರೆ ನಮ್ಮದ್ದಾಗಿದೆ. ಎಲ್ಲ ವಿಭಾಗಗಳ ನುರಿತ ವೈದ್ಯರು, ಸಿಬ್ಬಂದಿ ನಿಯೋಜಿಸಲಾಗಿದೆ. ಇದೀಗ ಸುಮಾರು 55 ಲಕ್ಷ ರೂ.ವೆಚ್ಚದಲ್ಲಿ ಬ್ಲಾಕ್ ಮಟ್ಟದ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ನಿಗದಿತ ಸಮಯದಲ್ಲಿಯೇ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಅವಕಾಶ ಕಲ್ಪಿಸಲು ಸಂಬಂಧಿಸಿದ ವೈದ್ಯರು ಮತ್ತು ಅಧಿಕಾರಿ ವರ್ಗ ಗಮನ ಹರಿಸಬೇಕೆಂದು ಸೂಚಿಸಿದರು.
ಪಟ್ಟಣದ ಜ್ಯೋತಿ ನಗರದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ರಮೇಶ ಗುರುಸ್ವಾಮಿಗಳು ಪೂಜಾ ಕೈಂಕರ್ಯ ನೆರವೇರಿಸಿದರು. ಸಮಾಜ ಸೇವಕಿ ಸುನಿತಾ ಪಾಟೀಲ, ಶಾಸಕರ ಆಪ್ತ ಸಹಾಯಕ ಮಾರುತಿ ಹಂಚಿನಮನಿ, ಪರಶುರಾಮ ಹುಲಿಹೊಂಡ, ಆರೋಗ್ಯ ಇಲಾಖೆಯ ಕೆ.ಎಚ್. ಎಸ್.ಆರ್.ಡಿ.ಪಿ. ಅಭಿಯಂತರಾದ ಎಮ್.ಎಸ್. ಕಳಸಗೇರಿ, ಭಾರತಿ ಪುರಾಣಿಕಮಠ, ಗುತ್ತಿಗೆದಾರ ಪ್ರಸನ್ನ ನಾಯಕ, ಸಾರ್ವಜನಿಕ ಆಸ್ಪತ್ರೆಯ ವೈದ್ಯರಾದ ಡಾ|ಜೆ.ಎಂ.ಮಧುಸೂದನ, ಡಾ|ಪ್ರಕಾಶ ಅಂಗಡಿ, ಡಾ|ವಸಂತ ಕಟ್ಟಿಮನಿ, ಕೆ.ಎಂ.ಗಿರಿಜಾದೇವಿ, ಲೀಲಾವತಿ ಕಾನಡೆ, ಅರುಣ ಪಾಟೀಲ, ಆರ್.ಎಸ್. ತಡಸ, ಮಾಲತೇಶ ಕುಲಕರ್ಣಿ ಇನ್ನಿತರರಿದ್ದರು.