Advertisement
ಇಷ್ಟಾದರೂ ರಾಜಧಾನಿ ಬೆಂಗಳೂರಿನಲ್ಲೇ ಅನಧಿಕೃತ ಒಎಫ್ಸಿ ಕೇಬಲ್‌ಗಳ ಸಂಕಷ್ಟ ಇನ್ನೂ ನಿಂತಿಲ್ಲ. ಹೌದು, ನಗರದ ಪಾದಚಾರಿ ಮಾರ್ಗಗಳು, ಉದ್ಯಾನ, ಆಟದ ಮೈದಾನ ಸೇರಿ ಬಹುತೇಕ ಸಾರ್ವಜನಿಕ ಸ್ಥಳಗಳಲ್ಲಿ ಅವಾಂತರಗಳನ್ನು ಸೃಷ್ಟಿಸುತ್ತಿವೆ. ಪಾದಚಾರಿಗಳು ಹಾಗೂ ವಾಹನ ಸವಾರರಿಗೆ ಮೃತ್ಯುವಾಗಿ ಕಾಡುತ್ತಿವೆ.
Related Articles
Advertisement
ನಗರ ಸೌಂದರ್ಯಕ್ಕೂ ಧಕ್ಕೆ: ಇಂಥ ಅನಧಿಕೃತ ಒಎಫ್ಸಿ ಕೇಬಲ್‌ಗಳಿಂದ ಸಾರ್ವಜನಿಕರಿಗೆ ತೊಂದರೆ ಒಂದಡೆಯಾದರೆ, ಬೇಕಾಬಿಟ್ಟಿ ನೇತಾಡುವ ಕೇಬಲ್‌ಗಳಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ಇದಕ್ಕೆ ಬ್ರೇಕ್ ಹಾಕಲೆಂದು ಬಿಬಿಎಂಪಿ ಕೋಟ್ಯಂತರ ರೂ. ವ್ಯಯಿಸಿ ಟೆಂಡರ್‌ಶ್ಯೂರ್ ರಸ್ತೆಗಳನ್ನು ಅಭಿವೃದ್ಧಿಪಡಿಸಿದೆ. ಒಎಫ್ಸಿ ಅಳವಡಿಕೆಗಾಗಿಯೇ ಪ್ರತ್ಯೇಕ ವ್ಯವಸ್ಥೆ (ಡಕ್ಟ್)ಮಾಡಿದೆ.
ಆದರೆ, ಪ್ರತಿ ಮೀಟರ್ ಕೇಬಲ್ ಅಳವಡಿಕೆಗೆ ಶುಲ್ಕ ಪಾವತಿಸಬೇಕೆಂಬ ಕಾರಣದಿಂದ ಒಎಫ್ಸಿ ಸಂಸ್ಥೆಗಳು ಈ ವ್ಯವಸ್ಥೆಗಳ ಬಳಕೆಗೆ ಮುಂದಾಗುತ್ತಿಲ್ಲ ಎಂಬುದು ಪಾಲಿಕೆ ಅಧಿಕಾರಿಗಳ ಅಭಿಪ್ರಾಯ. ಮಾಹಿತಿ ನೀಡಲು ಹಿಂದೇಟು ಇತ್ತೀಚೆಗೆ ಕೆಲವೊಂದು ಸಂಸ್ಥೆಗಳು ಪಾಲಿಕೆಗೆ ತೆರಿಗೆ ಪಾವತಿಸಿ ತಾವು ಹೊಂದಿರುವ ಕೇಬಲ್‌ಗಳ ಮಾಹಿತಿ ನೀಡಲು ಮುಂದಾದರೂ, ಪೂರ್ಣ ಪ್ರಮಾಣದಲ್ಲಿ ತಾವು ಹೊಂದಿರುವ ಕೇಬಲ್‌ಗಳ ಮಾಹಿತಿ ನೀಡಿಲ್ಲ ಎಂಬ ದೂರಿದೆ.
ಇನ್ನು ಬಹುತೇಕ ಕಂಪನಿಗಳು ಈವರೆಗೆ ತಾವು ಹೊಂದಿರುವ ಕೇಬಲ್‌ಗಳ ಮಾಹಿತಿ ಪಾಲಿಕೆಗೆ ನೀಡದೆ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಕಂಟಕವಾಗುವ ರೀತಿಯಲ್ಲಿ ಕೇಬಲ್‌ಗಳ ಅಳವಡಿಕೆ ಮುಂದುವರಿಸಿವೆ. ಆದರೆ ಇದಾವುದೂ ಪಾಲಿಕೆ ಅಧಿಕಾರಿಗಳ ಕಣ್ಣಿಗೆ ಬೀಳುತ್ತಿಲ್ಲ.
ಅಪಾಯಕ್ಕೆ ಆಹ್ವಾನ: ಪ್ರತಿಷ್ಠಿತ ರಸ್ತೆಗಳಾದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಡಿಕೆನ್ಸನ್ ರಸ್ತೆ, ನೃಪತುಂಗ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಎಸ್.ಜೆ.ಸರ್ಕಾರಿ ಪಾಲಿಟೆಕ್ನಿಕ್ ಮುಂಭಾಗದ ಪಾದಚಾರಿ ಮಾರ್ಗಗಳು, ಕೆ.ಜಿ.ರಸ್ತೆ, ವಿಜಯನಗರ, ಲ್ಯಾವೆಲ್ಲಿ ರಸ್ತೆ, ರೆಸಿಡೆನ್ಸಿ ರಸ್ತೆ, ಕಸ್ತೂರಬಾ ರಸ್ತೆ ಸೇರಿ ಕೇಂದ್ರ ವಾಣಿಜ್ಯ ಪ್ರದೇಶದ ಬಹುತೇಕ ರಸ್ತೆಗಳಲ್ಲಿಯೂ ಇದೇ ಕತೆ. ಈ ಪ್ರಮುಖ ರಸ್ತೆಗಳು ಹಾಗೂ ಪಾದಚಾರಿ ಮಾರ್ಗಗಳನ್ನು ಆವರಿಸಿಕೊಂಡಿರುವ ಕೇಬಲ್‌ಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ.
ಪ್ರಯೋಜನವಾಗದ ಕಾರ್ಯಾಚರಣೆ: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಆರ್.ಸಂಪತ್‌ರಾಜ್, ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ಹಲವು ಬಾರಿ ಒಎಫ್ಸಿ ಸಂಸ್ಥೆಗಳೊಂದಿಗೆ ಸಭೆ ನಡೆಸಿ, ತಾವು ಹೊಂದಿರುವ ಕೇಬಲ್‌ಗಳ ವಿವರ ನೀಡುವಂತೆ ಸೂಚಿಸಿದ್ದಾರೆ. ಅಷ್ಟೇ ಅಲ್ಲ, ಗಡುವು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಪಾಲಿಕೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅನಧಿಕೃತ ಒಎಫ್ಸಿ ಕೇಬಲ್‌ಗಳನ್ನು ಬೆಳಗ್ಗೆ ತೆರವುಗೊಳಿಸಿದರೆ, ರಾತ್ರಿ ಪುನಾ ಅನಧಿಕೃತವಾಗಿ ಹೊಸ ಒಎಫ್ಸಿ ಕೇಬಲ್‌ಗಳನ್ನು ಹಾಕಿಕೊಳ್ಳುತ್ತಿದ್ದಾರೆ.
ವ್ಯಕ್ತಿಯ ಜೀವ ತೆಗೆದ ಒಎಫ್ಸಿ: ಕೆಂಗಲ್ ಹನುಮಂತಯ್ಯ (ಡಬಲ್ ರಸ್ತೆ) ರಸ್ತೆಯಲ್ಲಿ ಕಳೆದ ಆಗಸ್ಟ್ 13ರಂದು ಗೋಪಾಲ್ ರಾವ್ ಎಂಬವರು ರಸ್ತೆ ದಾಟುವ ವೇಳೆ ರಸ್ತೆ ವಿಭಜಕದ ನಡುವೆ ಎಳೆದಿದ್ದ ಒಎಫ್ಸಿ ಕೇಬಲ್ ಎಡವಿ ರಸ್ತೆ ಮೇಲೆ ಬಿದ್ದಿದ್ದರು. ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿದ್ದರು.
ಮಾತು ತಪ್ಪಿದ ಮೇಯರ್ ಮೇಯರ್: ಆರ್.ಸಂಪತ್‌ರಾಜ್ ಅವರು, ಎರಡು ದಿನಗಳಲ್ಲಿ ಒಎಫ್ಸಿ ಸಂಸ್ಥೆಗಳು ತಾವು ಹೊಂದಿರುವ ಒಎಫ್ಸಿ ಕೇಬಲ್‌ಗಳ ಮಾಹಿತಿ ಘೋಷಿಸಿ, ಪಾಲಿಕೆಗೆ ತೆರಿಗೆ ಪಾವತಿಸಲು ಎರಡು ದಿನಗಳ ಗಡುವು ನೀಡಿದ್ದರು. ಒಂದೊಮ್ಮೆ ಮಾಹಿತಿ ನೀಡದಿದ್ದರೆ ನಗರದಲ್ಲಿನ ಎಲ್ಲ ಅನಧಿಕೃತ ಒಎಫ್ಸಿ ಕೇಬಲ್‌ಗಳನ್ನು ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸುವ ಎಚ್ಚರಿಕೆ ನೀಡಿದ್ದರು. ಆದರೆ, ಗಡುವು ನೀಡಿ ವಾರ ಕಳೆದರೂ ಯಾವುದೇ ಸಂಸ್ಥೆ ತಾವು ಹೊಂದಿರುವ ಕೇಬಲ್‌ಗಳ ಮಾಹಿತಿ ನೀಡಲು ಮುಂದಾಗಿಲ್ಲ. ಇಷ್ಟಾಗಿಯೂ ಕ್ರಮಕ್ಕೆ ಮೇಯರ್ ಕೂಡ ಮುಂದಾಗಿಲ್ಲ.
ಉದಯವಾಣಿ ನಿಮ್ಮೊಂದಿಗೆ ನೀವೂ ಫೋಟೋ, ಮಾಹಿತಿ ಕಳಿಸಿ ನಿತ್ಯ ನಡೆದಾಡುವ ರಸ್ತೆಯಲ್ಲಿ ಓಎಫ್ಸಿ ಕೇಬಲ್ ನೇತಾಡುತ್ತಿದ್ದರೆ, ಫೂಟ್‌ಪಾತ್‌ನಲ್ಲಿ ಅಡ್ಡಾದಿಡ್ಡಿಯಾಗಿ ಕೇಬಲ್ ಬಿದ್ದಿದ್ದರೆ ಕೂಡಲೇ ಒಂದು ಫೋಟೋ ಕ್ಲಿಕ್ಕಿಸಿ ನಮಗೆ ವಾಟ್ಸ್‌ಆ್ಯಪ್ ಮಾಡಿ. ಹಾಗೇ ಕೇಬಲ್ ಕಾಲಿಗೆ ತೊಡರು ಹಾಕಿಕೊಂಡು ಆದ ಕಹಿ ಅನುಭವ ನಿಮಗಾಗಿದ್ದರೆ, ಅಥವಾ ಬೇರೆಯವರಿಗಾದ ತೊಂದರೆ ನಿಮ್ಮ ಗಮನಕ್ಕೆ ಬಂದಿದ್ದಲ್ಲಿ ಘಟನೆ ನಡೆದ ರಸ್ತೆ ಸೇರಿ ಸಂಬಂಧಿಸಿದ ಇತರ ವಿವರಗಳೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಮಾಹಿತಿ ನೀಡಿ. ವಾಟ್ಸ್‌ಆ್ಯಪ್ ಸಂಖ್ಯೆ: 88611 96369 * ವೆಂ. ಸುನೀಲ್ ಕುಮಾರ್