ಕೋಲಾರ: ನಗರದ ವಿವಿಧೆಡೆ ಕೋವಿಡ್ 19 ಸೋಂಕಿನ ಮೂರು ಪ್ರಕರಣಗಳು ಪತ್ತೆಯಾ ಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 44ಕ್ಕೇರಿದಂತಾಗಿದೆ. ಕೋಲಾರ ನಗರದಲ್ಲಿಯೇ ಇದುವರೆವಿಗೂ 10 ಪ್ರಕರಣಗಳು ಪತ್ತೆಯಾಗಿದ್ದು, ಐದು ನಿರ್ಬಂಧಿತ ವಲಯಗಳನ್ನು ಸೃಜಿಸಿ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ.
ನಗರದ ಷಾಹೀನ್‌ಷಾ ನಗರದ ವಾಸಿ 40 ವರ್ಷದ ಆಟೋ ಚಾಲಕನಿಗೆ ಸೋಂಕು ಖಚಿತವಾಗಿದೆ. ಮತ್ತೂಂದು ಪ್ರಕರಣದಲ್ಲಿ ನಗರದ ಪಿಡಬ್ಲೂಡಿ ಕ್ವಾರ್ಟರ್ಸ್‌ನ 35 ವರ್ಷದ ಮತ್ತೋರ್ವ ವ್ಯಕ್ತಿಗೂ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಹಾಗೆಯೇ ಇಲ್ಲಿನ ಚಿಕ್ಕಬಳ್ಳಾಪುರ ರಸ್ತೆಯ ರಹಮತ್ ನಗರದ ಸಮೀಪ ಅರಹಳ್ಳಿ ಗೇಟ್ ನಿವಾಸಿ 22 ವರ್ಷದ ನೆರೆ ರಾಜ್ಯದ ಕಾರ್ಮಿಕನಿಗೂ ಸೋಂಕು ದೃಢಪಟ್ಟಿದೆ.
ಈತ ಮಧ್ಯಪ್ರದೇಶದಿಂದ ಹಿಂದಿರುಗಿದ್ದ ಖಾಸಗಿ ಇಟ್ಟಿಗೆ ಕಾರ್ಖಾನೆ ನೌಕರ ಎನ್ನಲಾಗಿದ್ದು, ಈತ ಹಲವಾರು ಮಂದಿಯೊಂದಿಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ಮೂವರನ್ನು ನಗರದ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗುತ್ತಿದೆ.
ಸೋಂಕಿತರ ಸಂಖ್ಯೆ 44ಕ್ಕೇ ಏರಿಕೆ: ಕೋಲಾರ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 44 ಕ್ಕೇರಿದ್ದು, ಗುಣಮುಖರಾಗಿ 26 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ. ಉಳಿದಂತೆ 18 ಸಕ್ರಿಯ ಪ್ರಕರಣಗಳು ಚಿಕಿತ್ಸೆ ಹಂತದಲ್ಲಿ ಆಸ್ಪತ್ರೆಯಲ್ಲಿರುವಂತಾಗಿದೆ. ತಾಲೂಕುವಾರು ಸೋಂಕಿತರದಲ್ಲಿ ಕೋಲಾರದಿಂದ 11, ಮಾಲೂರಿನಲ್ಲಿ 3, ಬಂಗಾರಪೇಟೆಯಲ್ಲಿ 10, ಕೆಜಿಎಫ್‌ನಿಂದ 4, ಮುಳಬಾಗಿಲಿನಿಂದ 10 ಹಾಗೂ ಶ್ರೀನಿವಾಸಪುರದಿಂದ 6 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ.
Related Articles
ಪ್ರಸ್ತುತ ಮುಳಬಾಗಿಲು ಹೊರತುಪಡಿಸಿ ಕೋಲಾರ ಜಿಲ್ಲೆಯ ಎಲ್ಲಾ ಐದು ತಾಲೂಕುಗಳಲ್ಲಿಯೂ ಸೋಂಕಿತರು ಇದ್ದಂತಾಗಿದೆ. ಕೋಲಾರದಲ್ಲಿ 8, ಮಾಲೂರಿನಲ್ಲಿ 1, ಬಂಗಾರಪೇಟೆಯಲ್ಲಿ 3, ಕೆಜಿಎಫ್ನಲ್ಲಿ 1, ಮುಳಬಾಗಿಲಿನಲ್ಲಿ 0, ಶ್ರೀನಿವಾಸಪುರದಿ 5 ಸಕ್ರಿಯ ಪ್ರಕರಣಗಳಿವೆ. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರದ ಪಿಡಬ್ಲೂಡಿ ಕ್ವಾರ್ಟರ್ಸ್, ರಹಮತ್ ನಗರ, ಷಾಹೀನ್‌ಷಾ ನಗರಗಳ ಸೋಂಕಿತರು ವಾಸಿಸುತ್ತಿದ್ದ ಪ್ರದೇಶಗಳನ್ನು ಸೀಲ್‌ಡೌನ್ ಮಾಡಲಾಗಿದೆ.
ಈಗಾಗಲೇ ಗೌರಿಪೇಟೆ, ಕುರುಬರಪೇಟೆ, ಕೋಟೆ ಪ್ರದೇಶಗಳು ಸೀಲ್‌ಡೌನ್ ಆಗಿವೆ. ಕೋಲಾರದ ಮೊಟ್ಟ ಮೊದಲ ಸೀಲ್‌ಡೌನ್ ಪ್ರದೇಶ ಗಾಂಧಿನಗರ ಇತ್ತೀಚಿಗೆ ಡಿನೋಟಿಫೀಕೇಷನ್ ಮೂಲಕ ಮುಕ್ತಗೊಂಡಿತ್ತು. ಸೀಲ್‌ಡೌನ್ ಪ್ರದೇಶಗಳಿಗೆ ನಗರಸಭೆ ಆಯುಕ್ತ ಶ್ರೀಕಾಂತ್, ನಗರಸಭಾ ಸದಸ್ಯ ಅಂಬರೀಶ್ ಇತರರು ಭೇಟಿ ನೀಡಿ ನಾಗರಿಕರಿಗೆ ಅಗತ್ಯ ವಸ್ತುಗಳ ಸರಬರಾಜಿಗೆ ಅನುಕೂಲವಾ ಗುವಂತೆ ಸ್ವಯಂಸೇವಕರನ್ನು ನೇಮಿಸಿದರು.