ಒಡಿಶಾ: ಕೊಟ್ಟ ಹಣ ವಾಪಸ್ ಕೊಡದಕ್ಕೆ ವ್ಯಕ್ತಿಯೊಬ್ಬನನ್ನು ಅಮಾನವೀಯ ರೀತಿಯಲ್ಲಿ ನಡೆಸಿಕೊಂಡ ಘಟನೆ ಒಡಿಶಾದ ಕಟಕ್ ರಸ್ತೆಯಲ್ಲಿ ಇತ್ತೀಚೆಗೆ( ಅ.16 ರಂದು) ನಡೆದಿದೆ. 22 ವರ್ಷದ ಜಗನ್ನಾಥ ಬೆಹೆರಾ ಎಂಬ ಯುವಕನ ಕೈಯನ್ನು ಹಗ್ಗದ ಒಂದು ತುದಿಗೆ ಕಟ್ಟಿ ಮತ್ತೊಂದು ತುದಿಯನ್ನು ಬೈಕ್ ಗೆ ಕಟ್ಟಿ ಅದರ ಹಿಂದೆ ಓಡುವಂತೆ ಮಾಡಿ, ಅಮಾನವೀಯವಾಗಿ ಹಿಂಸೆ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ ಕಳೆದ ತಿಂಗಳು ಜಗನ್ನಾಥ ಬೆಹೆರಾ ತನ್ನ ಅಜ್ಜನ ಅಂತಿಮ ವಿಧಿವಿಧಾನವನ್ನು ನಡೆಸಲು ಆರೋಪಿಗಳಿಂದ 1500 ರೂ. ಪಡೆದುಕೊಂಡು ಅದನ್ನು 30 ದಿನಗಳ ಒಳಗೆ ವಾಪಸ್ ನೀಡುತ್ತೇನೆ ಎಂದು ಹೇಳಿದ್ದ. 30 ದಿನ ಕಳೆದರೂ ಜಗನ್ನಾಥ ಬೆಹೆರಾ ಹಣ ವಾಪಸ್ ನೀಡಿರಲಿಲ್ಲ. ಆ ಕಾರಣಕ್ಕಾಗಿ ಆರೋಪಿಗಳು ಜಗನ್ನಾಥ ಬೆಹೆರಾನನ್ನು ಕಟಕ್ ನ ನಡುರಸ್ತೆಯಲ್ಲೇ ಬೈಕ್ ಗೆ 12 ಅಡಿ ಉದ್ದದ ಹಗ್ಗವನ್ನು ಕಟ್ಟಿ, ಅದರ ಒಂದು ತುದಿಯನ್ನು ಜಗನ್ನಾಥ ಬೆಹೆರಾ ಅವರ ಕೈಗೆ ಕಟ್ಟಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಸಲಿಂಗಕಾಮಿ ಕಥಾಹಂದರ… ಗಲ್ಫ್ ದೇಶದಲ್ಲಿ ಮೋಹನ್ ಲಾಲ್ ʼಮಾನ್ ಸ್ಟರ್ʼ ಸಿನಿಮಾ ಬ್ಯಾನ್
ಆರೋಪಿಗಳು ಕಟಕ್ ನ ಸ್ಟುವರ್ಟ್‌ಪಟ್ನಾದಿಂದ ಸುತಾಹತ್ ವರೆಗೆ 20 ಕಿ.ಮೀ ದೂರ ಕೈಗೆ ಹಗ್ಗ ಕಟ್ಟಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾರೆ. ಆರೋಪಿಗಳ ಜೊತೆ ಅವರ ಸ್ನೇಹಿತರು ಈ ಅಮಾನವೀಯ ದೃಶ್ಯವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಇದಾದ ಬಳಿಕ ಜಗನ್ನಾಥ ಬೆಹೆರಾ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಅಕ್ರಮ ಬಂಧನ, ಅಪಹರಣ, ಕೊಲೆ ಯತ್ನದ ಕೇಸ್ ದಾಖಲಿಸಿ ಬಂಧಿಸಿದ್ದಾರೆ.
ಹಗ್ಗವನ್ನು ಕೈಗೆ ಕಟ್ಟಿ ಬೈಕ್ ನಲ್ಲಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರು ಆರೋಪಿಗಳ ಬೈಕ್, ಕೃತ್ಯಕ್ಕೆ ಬಳಸಿದ ಹಗ್ಗವನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಸಂಚಾರಿ ಪೊಲೀಸರನ್ನು ಘಟನೆ ನಡೆದಾಗ ಏನು ಮಾಡುತ್ತಿದ್ದೀರಿ ಎಂದು ಪೊಲೀಸ್ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.