ಹ್ಯಾಮಿಲ್ಟನ್: ಆತಿಥೇಯ ಕಿವೀಸ್ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ನಂತರ ಏಕದಿನ ಸರಣಿಗೆ ಸಜ್ಜಾಗಿದೆ. ಉಪನಾಯಕ ರೋಹಿತ್ ಶರ್ಮಾ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವುದು ವಿರಾಟ್ ಕೊಹ್ಲಿಯನ್ನು ಚಿಂತೆಗೀಡು ಮಾಡಿದೆ.
ಏಕದಿನ ಸರಣಿಗೆ ರೋಹಿತ್ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಆಯ್ಕೆ ಆಗಿದ್ದಾರೆ. ಈಗಾಗಲೇ ಶಿಖರ್ ಧವನ್ ಸರಣಿ ತಪ್ಪಿಸಿಕೊಂಡ ಕಾರಣ ಪೃಥ್ವಿ ಶಾ ಏಕದಿನಕ್ಕೆ ಆಯ್ಕೆಯಾಗಿದ್ದರು.
ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಪೃಥ್ವಿ ಶಾ ಪದಾರ್ಪಣೆ ಮಾಡುವುದು ಖಚಿತ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ಫಿನಿಶರ್ ಸ್ಥಾನದಲ್ಲಿ ರಾಹುಲ್ ಮುಂದುವರಿಯಲಿದ್ದಾರೆ ಎಂದು ಕೊಹ್ಲಿ ಮಾಹಿತಿ ನೀಡಿದ್ದಾರೆ.
ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಆಡಲಿರುವ ಕಾರಣ ಪೃಥ್ವಿ ಶಾ ಜೊತೆಗೆ ಬಹುತೇಕ ಮಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಒಂದೇ ಪಂದ್ಯದಲ್ಲಿ ಇಬ್ಬರು ಆರಂಭಿಕರು ಪದಾರ್ಪಣೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಮೊದಲ ಏಕದಿನ ಪಂದ್ಯ ಬುಧವಾರ ಹ್ಯಾಮಿಲ್ಟನ್ ನಲ್ಲಿ ನಡೆಯಲಿದೆ.