ಕಲಬುರಗಿ: ಮೊಟ್ಟ ಮೊದಲ ಬಾರಿಗೆ ಹಿಂದುಳಿದ ವರ್ಗಕ್ಕೆ ಮೀಸಲಾತಿ ಕೊಡುವ ಮೂಲಕ ಹಿಂದುಳಿದ, ದಲಿತ, ಮಹಿಳಾ ಶಿಕ್ಷಣಕ್ಕೂ ಒತ್ತು ಕೊಡುವ ಪರಿಪಾಠ ಹಾಕಿಸಿ ಜನಕಲ್ಯಾಣ ಮಾಡಿದ ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಎಂದು ಕರ್ನಾಟಕ ರಾಜ್ಯ ಸ್ಕೌಟ್ಸ್ ಸಹಾಯಕ ಆಯುಕ್ತ ಸಿ.ಬಿ.ಪಾಟೀಲ ಓಕಳಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶನಿವಾರ ಕಸಾಪ ಜಿಲ್ಲಾ ಘಟಕದ ಹಮ್ಮಿಕೊಂಡಿದ್ದ “ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್’ ಅವರ 138 ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಿಂದಿನ ರಾಜರ ವ್ಯವಸ್ಥೆಯಲ್ಲಿ ಕೈಗೊಂಡ ನಿರ್ಧಾರಗಳು ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಅಭಿವೃದ್ಧಿಗೆ, ರಾಷ್ಟ್ರದ ಐಕ್ಯತೆಗೆ ಮತ್ತು ಸಮಾಜದ ಬೆಳೆವಣಿಗೆಗೆ ಪ್ರಮುಖ ಪಾತ್ರವಾಗಿವೆ. ಯಾವುದೇ ವಿಚಾರಗಳು ಅಥವಾ ವೈಚಾರಿಕ ಚಿಂತನೆ ಒಂದು ರಾಷ್ಟ್ರದ ಏಳು-ಬೀಳುಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಹಿತಿಗಳು, ಬುದ್ಧಿಜೀವಿಗಳು ಒಂದು ರಾಷ್ಟ್ರವನ್ನು ಮುನ್ನಡೆಸುವ ಮತ್ತು ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿರುತ್ತಾರೆ ಎಂದು ಹೇಳಿದರು.
ಕಸಾಪ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಕನ್ನಡಿಗರ ಸ್ವತ್ತು. ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರ ಕನಸಿನ ಕೂಸಾದ ಕನ್ನಡ ಸಾಹಿತ್ಯ ಪರಿಷತ್ತು ಪ್ರಾತಿನಿಧಿಕ ಸಂಸ್ಥೆಯಾಗಿ ಕೆಲಸ ಮಾಡುತ್ತಲಿದೆ. ಕನ್ನಡ ನಾಡಿನ ಕವಿ-ಕಲಾವಿದರು, ಸಾಹಿತಿಗಳನ್ನು ಯಾವುದೇ ತಾರತಮ್ಯವಿಲ್ಲದೇ ಅವರನ್ನು ಸಾಂಸ್ಕೃತಿಕವಾಗಿ ಒಂದು ವೇದಿಕೆಗೆ ತಂದು ಒಗ್ಗೂಡಿಸುವ ಕಾರ್ಯ ಪರಿಷತ್ ಮಾಡುತ್ತದೆ. ಆ ಮೂಲಕ ಸಾಂಸ್ಕೃತಿಕ, ಸಾಹಿತ್ಯಿಕ, ಕಲೆ, ರಂಗದ ಪ್ರತಿಭಾವಂತರಿಗೆ ಪರಿಷತ್ ಉತ್ತಮ ವೇದಿಕೆ ಒದಗಿಸುತ್ತದೆ ಎಂದರು. ಪಾಲಿಕೆ ಮಾಜಿ ಸದಸ್ಯ ಆರತಿ ತಿವಾರಿ, ಬಹುಭಾಷಾ ಸಾಹಿತಿ ವಿಜಯಕುಮಾರ ಚೌಧರಿ, ಶರಣ ಚಿಂತಕ ಸೋಮಶೇಖರ ಹಿರೇಮಠ ಮಾತನಾಡಿದರು.
ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಠಗಿ, ಶರಣರಾಜ್ ಛಪ್ಪರಬಂದಿ, ಶಕುಂತಲಾ ಪಾಟೀಲ ಜಾವಳಿ, ಶಿಲ್ಪಾ ಜೋಶಿ, ರಾಜೇಂದ್ರ ಮಾಡಬೂಳ, ವಿನೋದ ಜನವೇರಿ, ಸಾಹಿತಿ ಡಾ| ಶರಣಪ್ಪ ಮಾಳಗೆ, ಪ್ರಮುಖರಾದ ಶಿವಕುಮಾರ ಸಿ.ಎಚ್., ಶಿವಲೀಲಾ ತೆಗನೂರ, ಕವಿತಾ ದೇಗಾಂವ, ಶಿವಶರಣಪ್ಪ ಹಡಪದ, ಸಂಗನಬಸಪ್ಪ ಪೊಲೀಸ್ ಪಾಟೀಲ ದಿಕ್ಸಂಗಿ, ಎಂ.ಎನ್.ಸುಗಂ ಮತ್ತಿತರರು ಇದ್ದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಶಿಕ್ಷಣ ಪ್ರವೇಶದಲ್ಲಿ ಜಾತಿ ಕಾಲಂ ತೆಗೆದು ಹಾಕಿದ, ಮೈಸೂರು ಬ್ಯಾಂಕ್, ರೈಲ್ವೆ, ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ, ಏಷ್ಯಾದ ಮೊದಲ ಜಲವಿದ್ಯುತ್ ಯೋಜನೆ, ಕೃಷ್ಣರಾಜ ಸಾಗರ, ಬೀದಿ ವಿದ್ಯುತ್ ದೀಪ ಅಳವಡಿಕೆ ಅಂತಹ ಜನಮುಖೀ ಕಾರ್ಯಗಳಿಗೆ ಮುನ್ನಡಿ ಬರೆದವರೇ ಪ್ರಪಂಚದ ಕೆಲವೇ ಅರಸರಲ್ಲಿ ಒಬ್ಬರಾದ “ರಾಜರ್ಷಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್’.
-ಡಾ| ಕೆ.ಗಿರಿಮಲ್ಲ , ಲೇಖಕರು