ಹರಪನಹಳ್ಳಿ: ಪಟ್ಟಣದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಎಲ್ಲಿ ನೋಡಿದರೂ ಬಣ್ಣ ಎರಚುವ ಪೋರ ಹಾಗೂ ಕಿಶೋರಿಯರು, ಜಾತಿ-ಮತದ ಹಂಗಿಲ್ಲದೇ ಸ್ನೇಹಿತರೊಂದಿಗೆ ಸಂತಸ ಹಂಚಿಕೊಳ್ಳುತ್ತಾ ಜನತೆ ಬಣ್ಣದಲ್ಲಿ ಮಿಂದೆದ್ದರು. ಮತ್ತೂಂದೆಡೆ ಯುವಕರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಕುಳಿ ತುಂಬಿದ ಮಡಿಕೆ ಒಡೆಯುವ ಆಟದಲ್ಲಿ ಭಾಗವಹಿಸಿ ಸಾಹಸ ಪ್ರವೃತ್ತಿ ಮರೆದರು.
ಪಟ್ಟಣದ ತಾಯವ್ವನ ಹುಣಸೇಮರದ ಹತ್ತಿರ ಸಂಸ್ಕಾರ ಭಾರತಿ ಹಾಗೂ ಸಹೃದಯಿ ನಾಗರಿಕರ ಬಳಗದ ವತಿಯಿಂದ ಸೋಮವಾರ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓಕುಳಿ ತುಂಬಿದ ಮಡಿಕೆ ಒಡೆಯುವ ಆಟ ಆಯೋಜಿಸಿದ್ದರು.ಪಟ್ಟಣದ ಯುವಕರು ಉತ್ಸಾಹದಿಂದ ಭಾಗವಹಿಸಿ ರೋಮಾಂಚನ ಮೂಡಿಸಿದರು.
ಈ ಸಂದರ್ಭದಲ್ಲಿ ಯುವಕರ ಶಿಳ್ಳೆ ಮತ್ತು ಚಪ್ಪಾಳೆಗಳ ಝೆಂಕಾರ ಮುಗಿಲು ಮುಟ್ಟಿತ್ತು. ಪ್ರತಿ ವರ್ಷ ಮಡಿಕೆಯನ್ನು ಮರದಲ್ಲಿ ಎತ್ತರಕ್ಕೆ ಕಟ್ಟಿ, ಯುವಕರ ತಂಡ ಒಬ್ಬರ ಮೇಲೊಬ್ಬರು ಹತ್ತಿಕೊಂಡು ಅದನ್ನು ಒಡೆಯುವ ಸಾಹಸ ಮಾಡುತ್ತಿದ್ದರು. ಆದರೆ ಈ ಭಾರಿ ನೆಲದ ಮೇಲೆ ಡ್ರಮ್ ಇಟ್ಟು ಅದರ ಮೇಲೆ ಓಕುಳಿ ಮಡಿಕೆ ಇಟ್ಟು ಕಣ್ಣು ಕಟ್ಟಿ ಒಡೆಸಲಾಯಿತು.
ತಾಪಂ ಸದಸ್ಯ ವೆಂಕಟೇಶರೆಡ್ಡಿ, ಮುಖಂಡ ಓಂಕಾರಗೌಡಸೇರಿದಂತೆ ಹಲವರು ಮಡಿಕೆ ಒಡೆದರು. ಮಡಿಕೆ ಒಡೆಯಲು ಹರಸಾಹಸಪಡುತ್ತಿದ್ದ ದೃಶ್ಯ ನೋಡುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಜಿಪಂ ಸದಸ್ಯ ಉತ್ತಂಗಿ ಮಂಜುನಾಥ್,ಪುರಸಭೆ ಉಪಾಧ್ಯಕ್ಷ ಸತ್ಯನಾರಾಯಣ, ಸಂಘಟಕ ಸುರೇಂದ್ರ ಮಂಚಾಲಿ, ಮಹಾವೀರ ಭಂಡಾರಿ, ನಾಗೇಶಭಟ್ ಮತ್ತಿತರರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡಿ ಯುವಕರನ್ನು ಹುರಿ ದುಂಬಿಸಿದರು.