Advertisement

Manipal: ಎಂಜಿಎಂ ಚಿಟ್ಟೆ ಪಾರ್ಕ್‌ನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳು

06:05 PM Oct 16, 2024 | Team Udayavani |

ಮಣಿಪಾಲ: ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ 2023ರ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಂಡ ʼಸವಿತಾ ಶಾಸ್ತ್ರೀ ಬಟರ್‌ ಫ್ಲೈ ಪಾರ್ಕ್‌’ ನಲ್ಲಿ ಈಗ ಬಣ್ಣ ಬಣ್ಣದ ಚಿಟ್ಟೆಗಳ ಓಡಾಟ ಮುದ ನೀಡುತ್ತಿದೆ. ಸುಮಾರು 32 ಪ್ರಭೇದದ, ಬೇರೆ ಬೇರೆ ಬಣ್ಣ, ಗಾತ್ರದ ಚಿಟ್ಟೆಗಳು ಈ ಉದ್ಯಾನದಲ್ಲಿ ಹಾಯಾಗಿ ಓಡಾಡುತ್ತಿವೆ. 15 ಸೆಂಟ್ಸ್‌ ಜಾಗ ಚಿಟ್ಟೆಗಳ ಪಾಲಿಗೆ ನಂದನವನದಂತಿದೆ.

Advertisement

ಎಂಜಿಎಂ ಕಾಲೇಜು ಮತ್ತು ಬರ್ಡಿಂಗ್‌ ಆ್ಯಂಡ್‌ ಕನ್ಸರ್ವೇಶನ್‌ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಬೆಳುವಾಯಿ ಚಿಟ್ಟೆ ಪಾರ್ಕ್‌ನ ಸಮ್ಮಿಲನ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಚಾಲನೆ ಪಡೆದ ಈ ಪಾರ್ಕ್‌ನಲ್ಲಿ ಚಿಟ್ಟೆಗಳನ್ನು ಆಕರ್ಷಿಸುವ ನೆಕ್ಟ್ರಾ ಸಸ್ಯ ಪ್ರಭೇದಕ್ಕೆ ಸೇರಿದ ಹಲವಾರು ಗಿಡಗಳನ್ನು ನೆಟ್ಟು ಬೆಳೆಸಲಾಗಿದ್ದು, ಅವುಗಳಲ್ಲಿ ಅರಳುವ ಹೂಗಳ ಮಕರಂದದ ಸೆಳೆತಕ್ಕೆ ಸಿಲುಕಿ ಚಿಟ್ಟೆಗಳು ಇಲ್ಲೇ ಸುತ್ತಾಡುತ್ತಿವೆ.

ನೀಲಿ ಉತ್ತರಾಣಿ, ಚದುರಂಗ, ದಾಸವಾಳ, ಕೇಪಳ, ಸಿಗಾರ್‌ ಪ್ಲಾಂಟ್‌, ಜೀನಿ, ಕಾಡು ಕಾಫಿ, ಅಗ್ನಿ ಮಂಥ, ರಥದ ಹೂ ಸೇರಿದಂತೆ ಒಟ್ಟು 13 ಗಿಡಗಳು ಮತ್ತು ಹೋಸ್ಟ್‌ ಪ್ರಭೇದಕ್ಕೆ ಸೇರಿದ ಬೆಳಟ್ಟೆ, ಮಾದಲ, ರಂಗು ಮಾಲೆ, ಚಿತ್ರಾಣಿ, ಅಮೃತಬಳ್ಳಿ, ಕಲ್ಲು ಸಂಪಿಗೆ, ಬಂದನಾರು, ಗೋರಟೆ, ಮಾಧವಿ ಲತೆ, ಇನ್ನುಳಿದಂತೆ ಒಟ್ಟು 30 ಗಿಡಗಳನ್ನು ಉದ್ಯಾನವನದಲ್ಲಿ ಬೆಳೆಸಲಾಗಿದೆ.

ಪತ್ನಿಯ ನೆನಪಿಗಾಗಿ ಚಿಟ್ಟೆ ಪಾರ್ಕ್‌
ಎಂಜಿಎಂ ಕಾಲೇಜಿನ ಈ ಚಿಟ್ಟೆ ಪಾರ್ಕ್‌ನ ನಿರ್ಮಾಣದ ಹಿಂದೆ ಮಡದಿಯ ಮೇಲಿನ ಅತೀವ ಪ್ರೀತಿಯ ಕಥೆಯೂ ಇದೆ. ಇಶಾ ಟೆಕ್ನಾಲಜಿಸ್‌ನ ನಿರ್ದೇಶಕರಾದ ಡಾ| ಪ್ರಭಾಕರ್‌ ಶಾಸ್ತ್ರೀಯವರು ವರ್ಷಗಳ ಹಿಂದೆ ಅಗಲಿದ ತಮ್ಮ ಪತ್ನಿ ಸವಿತಾ ಶಾಸ್ತ್ರೀಯವರ ಹೆಸರನ್ನು ಚಿರಸ್ಥಾಯಿಯಾಗಿಡಲು ಎಂಜಿಎಂ ಕಾಲೇಜಿನ ಚಿಟ್ಟೆ ಪಾರ್ಕ್‌ ನಿರ್ಮಾಣಕ್ಕೆ 1 ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು. ಹಾಗಾಗಿಯೇ ಅದರ ಹೆಸರು ಸವಿತಾ ಶಾಸ್ತ್ರೀ ಬಟರ್‌ ಫ್ಲೈ ಪಾರ್ಕ್‌.

ಚಿಟ್ಟೆ ಮಾತ್ರವಲ್ಲ ಇನ್ನೂ ಹಲವು ಸಂತತಿ
ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ, ಎಂಬಿಎಸಿಯ ತಜ್ಞ ನಿಹಾಲ್‌, ಮಣಿಪಾಲ್‌ ಬರ್ಡ್ಸ್‌ ಕ್ಲಬ್‌ನ ತೇಜಸ್ವಿ ಎಸ್‌. ಆಚಾರ್ಯ ಅವರ ಸಹಯೋಗದಲ್ಲಿ ಕಳೆದ ವರ್ಷ ಈ ಉದ್ಯಾನದಲ್ಲಿ ಸಮೀಕ್ಷೆ ನಡೆಸಿದಾಗ ಚಿಟ್ಟೆಗಳ ಜತೆಗೆ ದುಂಬಿ, ಸನ್‌ ಬರ್ಡ್‌, ಜೇನುಹುಳ ಸೇರಿದಂತೆ ವಿವಿಧ ರೀತಿಯ ಕೀಟಗಳೂ ಆಸರೆ ಪಡೆದಿರುವುದು ಕಂಡುಬಂದಿದೆ.

Advertisement

ಆರೋಗ್ಯಕರ ಪರಿಸರಕ್ಕೆ ಸೂಚಕವಾಗಿರುವ ಹಾರುವ ಚಿಟ್ಟೆಗಳನ್ನು ಅವುಗಳ ಗಾತ್ರ, ರೆಕ್ಕೆಯ ಮಾದರಿ, ಬಣ್ಣದ ಮೂಲಕ‌ ಅವುಗಳ ವೈವಿಧ್ಯಮಯ ಸಂತತಿ, ಸ್ವಭಾವ, ಜೀವನ ಶೈಲಿ, ಪ್ರಭೇದವನ್ನು ಸಮೀಕ್ಷೆಯಲ್ಲಿ ಕಂಡುಹಿಡಿಯಲಾಗಿದೆ. ಪ್ಯಾಪಿಲೊನಿಡೆ, ನಿಂಫಾಲಿಡೆ, ಪಿಯರಿಡ, ಲೈಕೆನಿಡೆ ಮತ್ತು ಹೆಸ್ಪೆರಿಡೆ ಸೇರಿದಂತೆ ವಿವಿಧ ಕುಟುಂಬಗಳನ್ನು ಪ್ರತಿನಿಧಿಸುವ ಚಿಟ್ಟೆಗಳ ಒಟ್ಟು 32 ಪ್ರಭೇದಗಳನ್ನು ಉದ್ಯಾನದಲ್ಲಿ ಗುರುತಿಸಲಾಗಿದೆ.

ಚಿಟ್ಟೆ ಪಾರ್ಕ್‌ನ ಪ್ರಾಮುಖ್ಯತೆ ಏನು?
ಚಿಟ್ಟೆಗಳು ಪರಿಸರ ವ್ಯವಸ್ಥೆಯಲ್ಲಿ ಪರಾಗ ಸ್ಪರ್ಶ ಪ್ರಕ್ರಿಯೆ, ಆಹಾರ ಸರಪಳಿಯಲ್ಲಿ ಪ್ರಮುಖ ಪಾತ್ರ ಹೊಂದಿದೆ. ಚಿಟ್ಟೆಗಳು ಮತ್ತು ಸಸ್ಯಗಳ ನಡುವೆ ಸಹ-ವಿಕಸನೀಯ ಸಂಬಂಧವಿದ್ದು, ಮಕರಂದಕ್ಕಾಗಿ ಒಂದರಿಂದ ಇನ್ನೊಂದು ಗಿಡಕ್ಕೆ ಹಾರುವ ಮೂಲಕ ಪರಾಗಸ್ಪರ್ಶ ಪ್ರಕ್ರಿಯೆಗೆ ನೆರವಾಗುತ್ತದೆ. ತನ್ಮೂಲಕ ಪರಿಸರದಲ್ಲಿ ಜೀವ ವೈವಿಧ್ಯತೆಯ ಉಳಿವಿಗೆ ಕೊಡುಗೆ ನೀಡುತ್ತಿವೆ. ಚಿಟ್ಟೆಗಳು ಪರಿಸರ ಸೂಚಕವಾಗಿದ್ದು, ಜಾಗತಿಕ ತಾಪಮಾನ, ಮಳೆ ಕೊರತೆ, ಪ್ರಾಕೃತಿಕ ವಿಕೋಪಗಳನ್ನು ಚಿಟ್ಟೆಗಳು ಸೂಕ್ಷ್ಮವಾಗಿ ಗ್ರಹಿಸುತ್ತವೆ. ಕಳೆನಾಶಕ, ಕೀಟನಾಶಕಗಳ ಅಬ್ಬರಕ್ಕೆ ಸಿಲುಕಿ ನಶಿಸುತ್ತಿರುವ ಪ್ರಭೇದಗಳ ರಕ್ಷಣೆಗೆ ಚಿಟ್ಟೆ ಪಾರ್ಕ್‌ಗಳ ಅಗತ್ಯವಿದೆ. ಜತೆಗೆ ವಿದ್ಯಾರ್ಥಿಗಳಿಗೆ ಕೀಟಗಳ ಮಹತ್ವ, ಸೌಂದರ್ಯವನ್ನು ತಿಳಿಸಲು ಕಾಲೇಜಿನ ಆವರಣದಲ್ಲಿ ನಿರ್ಮಿಸಲಾಗಿದೆ ಎಂದು ಎಂಜಿಎಂ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಉಪನ್ಯಾಸಕಿ ಯಶಸ್ವಿನಿ ಬಿ. ಹೇಳಿದರು.

ನಿರ್ವಹಣೆ ಹೇಗೆ?
ಕಾಲೇಜಿನ ಇಕೋ ಕ್ಲಬ್‌ ಮತ್ತು ಪ್ರಾಣಿ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಜಾಗವನ್ನು ಸಮತಟ್ಟಾಗಿಸುವುದು, ಗಿಡ ನೆಡುವುದು, ಗಿಡಗಳಿಗೆ ಗೊಬ್ಬರ ಹಾಕುವುದು ಸೇರಿದಂತೆ ಉದ್ಯಾನದ ಹಲವು ಕೆಲಸಗಳಿಗೆ ನೆರವಾಗಿದ್ದಾರೆ. ಪ್ರಸ್ತುತ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗ ಮತ್ತು ಮಣಿಪಾಲ್‌ ಬರ್ಡ್ಸ್‌ ಕ್ಲಬ್‌ನ ತೇಜಸ್ವಿ ಎಸ್‌. ಆಚಾರ್ಯ ಈ ಉದ್ಯಾನದ ಕುಶಲೋಪರಿಗಳನ್ನು ನೋಡಿಕೊಳ್ಳುತ್ತಿದ್ದಾರೆ.

ಚಿಟ್ಟೆಗಳು ಜೀವ ವೈವಿಧ್ಯತೆಯನ್ನು ಸಮತೋಲನದಲ್ಲಿ ಇಡಲು ಸಹಕಾರಿಯಾಗಿದೆ. ಚಿಟ್ಟೆಗಳು ಆಕರ್ಷಿತವಾಗುವ ಗಿಡಗಳನ್ನು ತಜ್ಞರೊಂದಿಗೆ ಸಮಾಲೋಚಿಸಿ ನೆಟ್ಟು ಬೆಳೆಸಲಾಯಿತು. ಈಗ ಪಾರ್ಕ್‌ನಲ್ಲಿ ಸಾಕಷ್ಟು ಸಂಖ್ಯೆಯ ಚಿಟ್ಟೆಗಳಿವೆ.
-ಡಾ| ಮನಿತಾ ಟಿ.ಕೆ., ವಿಭಾಗ ಮುಖ್ಯಸ್ಥರು, ಪ್ರಾಣಿಶಾಸ್ತ್ರ ವಿಭಾಗ

-ದಿವ್ಯಾ ನಾಯ್ಕನಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next