Advertisement

ಮನದಾಳಕ್ಕಿಳಿಯದ “ಒಡಲಾಳ’!

03:21 PM Aug 19, 2017 | |

ಇತ್ತೀಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ “ಒಡಲಾಳ’ ನಾಟಕದ ಪ್ರದರ್ಶನ ನಡೆಯಿತು. ಹೆಸರಾಂತ ರಂಗನಿರ್ದೇಶಕ ಜನಾರ್ಧನ್‌ (ಜನ್ನಿ) ಅವರು ಹೊಸ ಹುಡುಗರ ತಂಡ ಕಟ್ಟಿ, ಅಭ್ಯಾಸ ಮಾಡಿಸಿ, ರಾಜಧಾನಿಯಲ್ಲಿ ಮೊದಲ ಪ್ರದರ್ಶನದ ಪ್ರಯೋಗ ನಡೆಸಿದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಜನ್ನಿ ನಿರ್ದೇಶನದ “ಒಡಲಾಳ’ ನೋಡುಗರ ಮನದಾಳಕ್ಕಿಳಿಯಲೇ ಇಲ್ಲ. ಈಗಾಗಲೇ ರಂಗದ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಿರುವ ರಂಗಕೃತಿಯನ್ನು ನಿರ್ದೇಶಿಸುವಾಗ ನಿರ್ದೇಶಕನಲ್ಲಿರಬೇಕಾದ ಹೊಸ ಕಾಣೆR ಕಣ್ಮರೆಯಾಗಿತ್ತು. ಒಡಲಾಳದ ಸಾಕವ್ವ ಮತ್ತವಳ ಕೌಟುಂಬಿಕ ಸಂಬಂಧಗಳು ಸಾಂಕೇತಿಕತೆಯನ್ನು ಮೀರಿದ ಗಾಢತೆಯನ್ನು ಹೊಂದಿರುವುದನ್ನು ಮರೆಯಬಾರದು. ನಾಟಕದ ಮೊದಲರ್ಧ ಭಾಗ ಸಾಕವ್ವನ ಕುಟುಂಬದವರ ಪರಿಚಯ, ಅವರ ದಿನಚರಿಯನ್ನು ಪರಿಚಯಿಸುವುದಕ್ಕಷ್ಟೇ ಮೀಸಲಾಗಿತ್ತು.

Advertisement

ಉಳಿದ ಭಾಗದಲ್ಲಿ ಸಾಕವ್ವನ ರಾಜಹುಂಜ ಕಣ್ಮರೆಯಾಗಿದ್ದು, ಅದರ ಹುಡುಕಾಟ ಮತ್ತು ಇಡೀ ಕುಟುಂಬದ ಹಸಿವು ಆವರಿಸಿಕೊಳ್ಳಬೇಕಿತ್ತು. ಆದರೆ, ಈ ಪ್ರದರ್ಶನದಲ್ಲಿ ಇಂಥ ಮ್ಯಾಜಿಕ್‌ ನಡೆಯಲಿಲ್ಲ. ಸಾಕವ್ವ ಮತ್ತು ಚೆಲುವಮ್ಮರ ನಡುವಿನ ಜಗಳ ಕೂಡ ಪೇಲವವಾಗಿತ್ತು. ಇದ್ದುದರಲ್ಲಿ ಸಾಕವ್ವನ ಪಾತ್ರಧಾರಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಿ, ನೋಡುಗರ ನೆನಪಿನಲ್ಲಿ ಉಳಿದಳು. ಆದರೂ ಅವಳ ಸಂಭಾಷಣೆಯ ವೇಗ ಸಾಕವ್ವನ ಪಾತ್ರ ಬೆಳಗುವಂತೆ ಮಾಡುವ ಅವಕಾಶವನ್ನು ಕಸಿದುಕೊಂಡಿತು. 

ಗೌರಿ ಹೇಳುವ ಯಾವ ಮಾತೂ ಸರಿಯಾಗಿ ಕೇಳಿಸದ ಕಾರಣ “ನವಿಲಿನ ಚಿತ್ರ’ ಮಾತ್ರ ಅವಳ ಅಸ್ತಿತ್ವವನ್ನು ಉಳಿಸಿತೆನ್ನಬೇಕು. ಮುಗ್ಧ ಶಿವು ಸ್ವಲ್ಪ ಗಡವನೆನಿಸಿದ್ದರಿಂದ ಅವನ ಅಮಾಯಕ ಪ್ರಶ್ನೆಗಳಲ್ಲಿ ಮುಗ್ಧತೆ ಕಣ್ಮರೆಯಾಗಿತ್ತು. ಉಳಿದ ಪಾತ್ರಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ. ಸಾಕವ್ವನ ಮನೆಗೆ ಪೊಲೀಸರು ಬಂದಾಗ ಸಾಕವ್ವ ಹಾಸ್ಯದ ವಸ್ತುವಾಗುತ್ತಾಳೆಂಬುದು ಮೂಲಕಥೆಯಲ್ಲಿ ಸತ್ಯವಾದರೂ ನಾಟಕದಲ್ಲಿ ಗೋಜಲಿನ ಗೂಡಾಗಿ, ಕಿರುಚಾಟದಲ್ಲಿ ಸಂಭಾಷಣೆಯೇ ಕೇಳದಂತಾಗಿತ್ತು. 

ರಂಗಸಜ್ಜಿಕೆ ಉತ್ತಮವಾಗಿತ್ತು. ಸಾಕವ್ವನ ಪುಟ್ಟ ಮನೆಯಲ್ಲೇ ಮೂರು ದಿಕ್ಕಿಗೆ ಮೂರು ಒಲೆ ಉರಿಯುವುದನ್ನು ತೋರಿಸಲು ನಿರ್ದೇಶಕರು ಮಾಡಿದ ಪ್ರಯತ್ನ ಉತ್ತಮವಾಗಿತ್ತು. ತಮ್ಮ ನಡುವೆ ಏನೇ ಜಗಳ ನಡೆದಿದ್ದರೂ ಕಾಫಿ ಕುಡಿಯುವಾಗ, ತಮ್ಮ ತಂದ ಕಡಲೆಕಾಯಿ ತಿನ್ನುವಾಗ, ಕಡಲೆಪುರಿ ತಿನ್ನುವಾಗ ಇಡೀ ಕುಟುಂಬ ತೋರುವ ಸಾಮರಸ್ಯವನ್ನು ತುಂಬಾ ಚೆನ್ನಾಗಿ ರಂಗದ ಮೇಲೆ ತೋರಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ನೆರಳು ಬೆಳಕಿನ ಸಂಯೋಜನೆ, ಹಿನ್ನೆಲೆ ಗಾಯನ ಮತ್ತು ಧ್ವನಿವರ್ಧಕದ ಹೊಂದಾಣಿಕೆಯಲ್ಲಿ ವಹಿಸಿದ ಎಚ್ಚರಿಕೆ ಪೂರಕವಾಗಿತ್ತು. ಹೊಸ ಹುಡುಗರು ಮಾಡಿದ ಪ್ರಯೋಗವಿದು ಎಂಬ ರಿಯಾಯ್ತಿ ನೀಡಿ, ಈ ಮೇಲಿನ ಹಲವು ಸಂಗತಿಗಳನ್ನು ಮರೆತರೂ ನಿರ್ದೇಶಕರ ಹಿನ್ನೆಲೆಯನ್ನು ಕಡೆಗಣಿಸಲಾಗದು. ದೇವನೂರು ಮಹಾದೇವ ಅವರ ಮಹತ್ವಾಕಾಂಕ್ಷೆಯ ಕೃತಿ “ಒಡಲಾಳ’ ತೆರೆದು ತೋರಿದ ದಲಿತ ಕುಟುಂಬವೊಂದರ ಅವಸ್ಥೆಯ ಸ್ವರೂಪ ಯಾವ ಬಗೆಯೆಂಬುದನ್ನು ಅರಿತವರಿಗೆಲ್ಲರಿಗೂ, ಜನ್ನಿ ನಿರ್ದೇಶನದ ಒಡಲಾಳ ನಾಟಕ ತೀವ್ರ ನಿರಾಸೆ ಮೂಡಿಸಿತೆಂಬುದನ್ನು ಹೇಳಲೇಬೇಕು.

Advertisement

ಡಾ. ಎಚ್‌.ಎಸ್‌. ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next