ಧಾರವಾಡ: ರಾಮಣ್ಣ ಮಾಸ್ತರ ಪ್ರತಿಷ್ಠಾನ, ಜೀವಿ ಕಲಾಬಳಗ, ಸದಭಿರುಚಿ ಸಾಹಿತಿಗಳ ಬಳಗದಿಂದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರ “ಒಡಲಬೆಂಕಿ ಮತ್ತು ಕುಡುಗೋಲು’ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ನಗರದ ಕವಿಸಂನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಆಕಾಶವಾಣಿ ಕೇಂದ್ರದ ನಿರ್ದೇಶಕ ಡಾ| ಬಸು ಬೇವಿನಗಿಡದ ಮಾತನಾಡಿ, ಸಮಾಜದಲ್ಲಿ ಹಿಂದುಳಿದ, ಶೋಷಿತರ, ಕೆಳ ವರ್ಗದ ಜನರ ಒಡಲ ಬೆಂಕಿಯನ್ನು ಅಕ್ಷರ ರೂಪದಲ್ಲಿ ಹೊರತಂದಿರುವ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ತಾವು ನೋಡಿದ, ಅನುಭವಿಸಿದ, ಕಂಡ ಅನುಭವಗಳನ್ನು ಈ ಕಥಾ ಸಂಕಲನದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮನ ಕಲಕುವ, ಓದುಗರನ್ನು ಸಂಕಷ್ಟಕ್ಕೆ ಸಿಲುಕಿಸುವ ಹಾಗೂ ತಮ್ಮ ನೋವಿಗೆ ಧ್ವನಿಯಾಗುವ ಕೃತಿ ಇದಾಗಿದೆ. ಅವರ ಕಥೆಗಳನ್ನು ಓದಿದಾಗ ಅವರ ಕಿಚ್ಚಿನಲ್ಲಿ ಇನ್ನೂ ಅನೇಕ ಕಥೆಗಳು ಅರಳಬೇಕಿದೆ ಎಂದರು.
ಅಧಿಕಾರಸ್ಥರು, ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಬಲಾಡ್ಯರು ಅಸಹಾಯಕರು, ನೊಂದವರು, ಸ್ತ್ರೀಯರ ಮೇಲೆ ಮಾಡುವ ಶೋಷಣೆಯನ್ನು ಈ ಕಥಾ ಸಂಕಲನ ಹೇಳುತ್ತದೆ. ಸಂಕಷ್ಟದಲ್ಲೂ ಸ್ವಾಭಿಮಾನದ ಬದುಕು ಹೇಗೆ ಮಾಡಬೇಕೆಂಬ ಸಾರಾಂಶವು ಕಥೆಗಳಲ್ಲಿದೆ. ಗಂಭೀರ ಕಥಾ ಬರವಣಿಗೆ ಜತೆಗೆ ಲಘು ದಾಟಿಯಲ್ಲಿ ಹಾಸ್ಯವೂ ಇದೆ. ತಿಳಿಹಾಸ್ಯದಲ್ಲಿಯೇ ತಮ್ಮ ಸಿಟ್ಟು ಹೊರ ಹಾಕಿದ್ದಾರೆ. ಅವರ ಕಥೆಗಳಲ್ಲಿ ವಿನೋದ ಶೈಲಿಯ ಬರವಣಿಗೆ, ಆಡುನುಡಿ, ಉತ್ತರ ಕರ್ನಾಟಕ ಭಾಷೆಯ ಜೀವಂತಿಕೆ ಎದ್ದು ಕಾಣುತ್ತದೆ. ಕಥಾವಸ್ತುವಿಗೆ ಅನುರೂಪ ಭಾಷೆ ಬಳಕೆಯಾಗಿದೆ. ಒಟ್ಟಾರೆ ಅವರ ಕಥೆಗಳಲ್ಲಿ ಮಾನವೀಯತೆ, ಸಂವೇದನೆಯ ಪಾಠವಿದೆ ಎಂದು ಹೇಳಿದರು.
ಕಥಾ ಸಂಕಲನ ಪರಿಚಯ ಮಾಡಿದ ಸಾಹಿತಿ ಡಾ| ಸಂಗಮನಾಥ ಲೋಕಾಪುರ ಮಾತನಾಡಿ, ಇಡೀ ಸಂಕಲನಕ್ಕೆ ಬದಾಮಿ ತಾಲೂಕು ಉಪಭಾಷೆ ಬಳಕೆಯಾಗಿದ್ದು, ಸುತ್ತಲಿನ ಪರಿಸರದ ಸಂದರ್ಭಗಳನ್ನು ಅದ್ಭುತವಾಗಿ ಬಳಸಿ ಕಥೆ ಬರೆದಿದ್ದಾರೆ ಎಂದರು.
ಕೃತಿಕಾರ ಮಲ್ಲಿಕಾರ್ಜುನ ಸಿದ್ದಣ್ಣವರ ಮಾತನಾಡಿ, ಇಲ್ಲಿಯವರೆಗೆ 16 ಕೃತಿಗಳನ್ನು ಬರೆದಿದ್ದು, ಅಧಿಕೃತವಾಗಿ ಬಿಡುಗಡೆಯಾಗಿದ್ದು ಇದೇ ಮೊದಲು. ಕಳೆದ 30 ವರ್ಷಗಳಲ್ಲಿ 110 ಕಥೆಗಳನ್ನು ಬರೆದರೂ ಬಹುತೇಕ ಪ್ರಕಟಗೊಂಡಿಲ್ಲ. ಪ್ರಸ್ತುತ ಸಂವಿಧಾನದ ಮೇಲೆ ಆಡಳಿತ ಹಾಗೂ ನಮ್ಮ ಜೀವನ ನಡೆಯುತ್ತಿದೆ. ಆದರೆ, ಕೆಲವರನ್ನು ಅಲಿಖೀತ ಸಂವಿಧಾನ ನಿಯಂತ್ರಿಸುತ್ತಿದೆ. ಅಸಹಾಯಕರು ಅಸಂವಿಧಾನದ ಚೌಕಟ್ಟಿನಲ್ಲಿಯೇ ಬದುಕುವಂತಾಗಿದೆ. ಹಸಿವು, ಅವಮಾನ, ಶೋಷಣೆಯಿಂದ ನರಳುತ್ತಿದ್ದಾರೆ. ಅವರ ಬಗ್ಗೆ ಸಂವಿಧಾನದ ಹೆಸರಿನಲ್ಲಿ ಬದುಕುತ್ತಿರುವ ನಾವು ಚಿಂತಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಥಾ ಸಂಕಲನ ಹೊರತಂದೆ ಎಂದು ಹೇಳಿದರು.
ಬೇಂದ್ರೆ ಟ್ರಸ್ಟ್ ಅಧ್ಯಕ್ಷ ಡಾ| ಡಿ.ಎಂ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ರಾಮು ಮೂಲಗಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀಧರ ಗಸ್ತಿ ವಂದಿಸಿದರು. ಶಂಕರ ಹಲಗತ್ತಿ, ಸಿ.ಯು. ಬೆಳ್ಳಕ್ಕಿ, ಕವಿವಿ ನೌಕರ ಸಂಘದ ಅಧ್ಯಕ್ಷ ಕೆ.ಡಿ. ಪೂಜಾರ, ಜಿ.ಬಿ. ಹೊಂಬಳ, ಹುಚ್ಚಪ್ಪ ದ್ಯಾವಣ್ಣವರ, ಡಾ| ಆನಂದ ಪಾಟೀಲ, ಗದಿಗಯ್ಯ ಹಿರೇಮಠ ಇನ್ನಿತರರಿದ್ದರು.