ಉಡುಪಿ: ವಿಶ್ವಹಿಂದೂ ಪರಿಷತ್ತಿನ 60ನೇ ವರ್ಷಾಚರಣೆ ಪ್ರಯುಕ್ತ ದೇಶದಲ್ಲಿ ಬಜರಂಗದಳ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯುತ್ತಿದ್ದು, ಇದರ ಭಾಗವಾಗಿ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ಉಡುಪಿಯಲ್ಲಿ ಅ. 10ರಂದು ಬೃಹತ್ ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಕ್ಷಿಣ ಪ್ರಾಂತ ರಥಯಾತ್ರೆ ಸೆ. 25ರಂದು ಚಿತ್ರದುರ್ಗದಿಂದ ಹೊರಟಿದ್ದು ಅ. 10ರಂದು ಉಡುಪಿಗೆ ಆಗಮಿಸಲಿದೆ. ಮಧ್ಯಾಹ್ನ ಹೆಜಮಾಡಿಯಲ್ಲಿ ಸ್ವಾಗತಿಸಿ, ಉಡುಪಿಯ ಜೋಡುಕಟ್ಟೆಯಿಂದ 2 ಗಂಟೆಗೆ ಶೌರ್ಯ ಜಾಗರಣದ ರಥಯಾತ್ರೆ ಆರಂಭವಾಗಲಿದೆ.
ಶೋಭಾಯಾತ್ರೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಪುಣೆ ಸಾಮಾಜಿಕ ಮುಖಂಡ ಕಡ್ತಲ ವಿಶ್ವನಾಥ್ ಪೂಜಾರಿ ಉದ್ಘಾಟಿಸಲಿದ್ದಾರೆ. ಸಂಜೆ 4ಕ್ಕೆ ಎಂಜಿಎಂ ಮೈದಾನದಲ್ಲಿ ಸಮಾಜೋತ್ಸವ ಜರಗಲಿದ್ದು, ಅಂದು ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ವಿನಂತಿಸಿದರು.
ಮಧ್ಯಪ್ರದೇಶದ ಭೋಪಾಲದ ಮಹಾಮಂಡಲೇಶ್ವರ ಶ್ರೀಅಖಿಲೇಶ್ವರಾನಂದ ಗಿರಿ ಮಹಾರಾಜ್, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಸಾಯಿರಾಧ ಗ್ರೂಪ್ಸ್ ಎಂಡಿ ಮನೋಹರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ವಿಹಿಂಪ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್, ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಸಹಿತ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಬಜರಂಗದಳ ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ, ಅಶೋಕ್ ಪಾಲಡ್ಕ ಉಪಸ್ಥಿತರಿದ್ದರು.
ವಾಹನ ನಿಲುಗಡೆ ವ್ಯವಸ್ಥೆ
ಕಾರ್ಕಳ, ಹೆಬ್ರಿ, ಪೆರ್ಡೂರು, ಹಿರಿಯಡಕದಿಂದ ಬರುವ ಬಸ್‌ಗಳು ಬ್ರಹ್ಮಗಿರಿಯಲ್ಲಿ ಜನರನ್ನು ಇಳಿಸಿ ಬೀಡಿನಗುಡ್ಡೆ ಮೈದಾನದಲ್ಲಿ, ಬೈಂದೂರು, ಕುಂದಾಪುರ, ಬ್ರಹ್ಮಾವರ ಕಡೆಯಿಂದ ಬರುವ ಬಸ್‌ಗಳು ಬ್ರಹ್ಮಗಿರಿಯಲ್ಲಿ ಜನರನ್ನು ಇಳಿಸಿ ಅಜ್ಜರಕಾಡು ಮೈದಾನದಲ್ಲಿ, ಕಾಪು, ಪಡುಬಿದ್ರಿ, ಮಲ್ಪೆ, ಕಟಪಾಡಿಯಿಂದ ಬರುವ ಬಸ್‌ಗಳು ಬ್ರಹ್ಮಗಿರಿಯಲ್ಲಿ ಜನರನ್ನು ಇಳಿಸಿ ಬೀಡಿನಗುಡ್ಡೆ ಮೈದಾನದಲ್ಲಿ ನಿಲ್ಲಿಸ ಬೇಕು. ಕಾರ್ಯಕ್ರಮದ ಅನಂತರ ಜನರನ್ನು ಕರೆದೊಯ್ಯಲು ಎಂಜಿಎಂ ಕಾಲೇಜು ಸಮೀಪಕ್ಕೆ ಬಸ್‌ಗಳು ಬರಲಿವೆ. ಎಂಜಿಎಂ ಮೈದಾನ, ಮಲ್ಲಿಕಟ್ಟೆ ವೃತ್ತದ ಸುತ್ತಮುತ್ತ ವಾಹನ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದು ಸುನಿಲ್ ಕೆ.ಆರ್. ತಿಳಿಸಿದರು.