ರಾಯಚೂರು: ಶಕ್ತಿನಗರ ಸಮೀಪದ ಕೃಷ್ಣಾ ನದಿ ಬಳಿಯಿರುವ ಕುಡಿವ ನೀರು ಸರಬರಾಜು ಮಾಡುವ ಜಾಕ್‌ವೆಲ್ ಪಂಪ್‌ಹೌಸ್‌ನಲ್ಲಿ ಮೋಟರ್ ಕೆಟ್ಟು ಹೋಗಿದ್ದು, ದುರಸ್ತಿಗೆ ನಾಲ್ಕು ದಿನ ಹಿಡಿಯುವ ಕಾರಣ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಗರ ಶಾಸಕ ಡಾ|ಶಿವರಾಜ್ ಪಾಟೀಲ್ ಸೋಮವಾರ ಬೆಳಗ್ಗೆ ನಗರಸಭೆ ಅಧಿಕಾರಿಗಳೊಂದಿಗೆ ಜಾಕ್‌ವೆಲ್ ಪಂಪ್ ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ದುರಸ್ತಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.
ಬಳಿಕ ಮಾತನಾಡಿದ ಅವರು, ನಗರಕ್ಕೆ ನೀರು ಪೂರೈಸುವ ಮುಖ್ಯ ಪಂಪ್‌ಹೌಸ್‌ನಲ್ಲಿ ಮೋಟರ್ ಸುಟ್ಟು ಹೋಗಿದೆ. ದುರಸ್ತಿ ಮಾಡಲು ಮೂರು ನಾಲ್ಕು ದಿನಗಳು ಹಿಡಿಯಬಹುದು. ಇದರಿಂದ ನಗರಕ್ಕೆ ನೀರು ಪೂರೈಸಲು ಅಡಚಣೆ ಆಗಲಿದೆ ಎಂದು ತಿಳಿಸಿದರು.
ಕೂಡಲೇ ದುರಸ್ತಿಗೆ ಮುಂದಾಗುವಂತೆ ನಗರಸಭೆ ಪೌರಾಯುಕ್ತರು, ಎಇಇ ಅವರಿಗೆ ತಿಳಿಸಲಾಗಿದೆ. ಕೇವಲ ಒಂದು ಪಂಪ್‌ಹೌಸ್ ಇರುವ ಕಾರಣ ಅ ಕ ಒತ್ತಡ ಹಾಕಿದರೆ ಯಂತ್ರದ ಉಷ್ಣ ಹೆಚ್ಚಾಗಿ ಹಾನಿಯಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಜನ ನೀರನ್ನು ಮಿತವಾಗಿ ಬಳಸುವ ಮೂಲಕ ಸಹಕರಿಸಬೇಕು. ಆದಷ್ಟು ದುರಸ್ತಿ ಮಾಡಿ ನೀರು ಸರಬರಾಜಿಗೆ ಕ್ರಮ ವಹಿಸುವುದಾಗಿ ತಿಳಿಸಿದರು.
ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್, ಪೌರಾಯುಕ್ತ ಮುನಿಸ್ವಾಮಿ, ಆರ್‌ಡಿಎ ಅಧ್ಯಕ್ಷ ಯಾಪಚೆಟ್ಟಿ ಗೋಪಾಲರೆಡ್ಡಿ, ಎಇಇ ವೆಂಕಟೇಶ, ನಗರಸಭೆ ಸದಸ್ಯರಾದ ಶಶಿರಾಜ್, ಎನ್.ಕೆ.ನಾಗರಾಜ್, ಶ್ರೀನಿವಾಸರೆಡ್ಡಿ, ಸತೀಶ ಸೇರಿದಂತೆ ಅನೇಕರಿದ್ದರು.
ಕೊಳವೆ ಬಾವಿ ಕೊರೆಸಿದ ಶಾಸಕ
ಈಚೆಗೆ ನಡೆದ ಶಾಸಕರ ನಡೆ ಜನ ಸಂಪರ್ಕದ ಕಡೆ ಕಾರ್ಯಕ್ರಮದಲ್ಲಿ ನೀಡಿದ್ದ ಮಾತಿನಂತೆ ಡಾ|ಶಿವರಾಜ್ ಪಾಟೀಲ್ ಬೋರವೆಲ್ ಕೊರೆಸುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿದ್ದಾರೆ. ನಗರದ ಎಲ್‌ಬಿಎಸ್ ನಗರದಲ್ಲಿ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ದೂರಿದ್ದರು. ಇದಕ್ಕೆ ಪ್ರಕ್ರಿಯಿಸಿದ್ದ ಶಾಸಕರು, ಶೀಘ್ರದಲ್ಲೇ ನೀರಿನ ವ್ಯವಸ್ಥೆಗೆ ಕ್ರಮ ವಹಿಸುವುದಾಗಿ ತಿಳಿಸಿದ್ದರು. ಅದರಂತೆ ಸೋಮವಾರ ಬೋರ್‌ವೆಲ್ ಕೊರೆಸುವ ಮೂಲಕ ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದು, ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.