Advertisement

ಅಡ್ಡಗಾಲು ಹಾಕುವವರು ಲಿಂಗಾಯತ ವಿರೋಧಿಗಳು

12:07 PM Jul 25, 2017 | Team Udayavani |

ಧಾರವಾಡ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಆಗಲು ಅಡ್ಡಗಾಲು ಹಾಕುವವರು ಧರ್ಮ ವಿರೋಧಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಹೇಳಿದರು. ನಗರದ ಮುರುಘಾಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ಬೀದರ್‌ ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು ನೀಡಲಿರುವ “ವಚನ ದರ್ಶನ’ ಪ್ರವಚನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

Advertisement

ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿ ಘೋಷಣೆ ಆಗುವವರೆಗೂ ನಾವು ವಿಶ್ರಮಿಸಬಾರದು. ಅದು ಕಾರ್ಯರೂಪಕ್ಕೆ ಬರಲು ನಾವೆಲ್ಲರೂ ಒಕ್ಕೊರಲಿನಿಂದ ಕೆಲಸ ಮಾಡೋಣ. ಸ್ವತಂತ್ರ ಧರ್ಮಕ್ಕೆ ಎಲ್ಲಾ ಮಂತ್ರಿ- ಶಾಸಕರನ್ನು ಗಮನಕ್ಕೆ ಪಡೆದು ಸಾಂಕೇತಿಕವಾಗಿ ಶ್ರಮಿಸೋಣ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಲೇಬೇಕಿದೆ.

ಅದು ಸಿಕ್ಕರೆ ಸಮಾಜಕ್ಕೆ ಸೌಲಭ್ಯಗಳು ಸಿಗಲಿದ್ದು, ಕೆಳಮಟ್ಟದಿಂದ ಎಲ್ಲರಿಗೂ ಅವಕಾಶ ಲಭಿಸಲಿದೆ  ಎಂದರು. ಪ್ರವಚನ ಕೇಳಿದರಷ್ಟೇ ಸಾಲದು. ಅದರಲ್ಲಿರುವ ಸಾರ ಚಿಂತನ ಹಾಗೂ ಶರಣ-ಸಂತ ದಾಸರ ವಿಚಾರಧಾರೆ ಅರಿತು ಚಿಂತನ-ಮಂತನ ಮಾಡಬೇಕು. ಶ್ರಾವಣ ಮಾಸ ಎಂಬುದು ಮಹತ್ವದ ದಿನ.

ಇಲ್ಲಿ ಪ್ರವಚನಕಾರರು ಹೇಳುವ ಅರ್ಥಪೂರ್ಣ ವಿಚಾರಗಳನ್ನು ನಾವೆಲ್ಲ ಮನನ ಮಾಡಿಕೊಳ್ಳಬೇಕು ಎಂದು ಹೇಳಿದರು. ಕೇವಲ ಶ್ರಾವಣ ಮಾಸದಲ್ಲಿ ಅಷ್ಟೇ ಅಲ್ಲದೆ ನಿರಂತರ ನಡೆಯುವ ಸತ್ಸಂಗದಲ್ಲಿ ಭಾಗವಹಿಸಿ, ಮೌಲ್ಯಯುತ ವಿಚಾರಧಾರೆ ಅರಿತು ಅನುಷ್ಠಾನ ಮಾಡಿಕೊಂಡರೆ ಜೀವನ ಸಾರ್ಥಕ ಆಗುವುದು.

ಮಠಗಳಲ್ಲಿ ಅಷ್ಟೇ ಅಲ್ಲದೇ ಮನೆ-ಮನಗಳಲ್ಲಿ ಚಿಂತನ ಮಂಥನ ನಡೆಸಿದರೆ ದೇಶದ ಅಭಿವೃದ್ಧಿಗೆ ಪೂರಕವಾಗಲಿದೆ. ಜಾತಿ ವರ್ಗದ ಭೇದ ಭಾವ ಇರದ ಶ್ರೀಮಠಗಳು ಜ್ಞಾನ ದಾಸೋಹ ಮಾಡುತ್ತಿವೆ. ಕೆಲವು ಮಠಗಳು ಒಂದೇ ಜಾತಿ-ಮತಕ್ಕೆ ಸೀಮಿತವಾಗಿ ಕೆಲಸ ಮಾಡುತ್ತಿರುವುದು ವಿಷಾದನೀಯ ಎಂದರು. 

Advertisement

ಜಾತ್ಯತೀತ ಮಠಗಳು ಸಮಾಜ ಕಲ್ಯಾಣ ಪರ ಕೆಲಸ ಮಾಡಿ ಪ್ರೇರಣೆ ನೀಡುತ್ತವೆ. ಚುನಾಯಿತ ಸರಕಾರಗಳು ಕೂಡ ಬಸವಾದಿ ಶರಣರ ತತ್ವ ಪಾಲನೆ ಮಾಡಿದರೆ ಎಲ್ಲರ ಅಭಿವೃದ್ಧಿ ಆಗುತ್ತದೆ. ಇದರೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಈಗಿನ ಕರ್ನಾಟಕ ಸರಕಾರ ಕೂಡ ಶರಣದ ಆಶಯದಂತೆ ನುಡಿದಂತೆ ನಡೆದ ಸರಕಾರ.

ನುಡಿದಂತೆಯೇ ನಡೆಯುತ್ತಿದೆ. ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ ನಮ್ಮ ಸರಕಾರ 150ಕ್ಕೂ ಹೆಚ್ಚು ಯೋಜನೆ ಜಾರಿ ಮಾಡಿ ಅನುಷ್ಠಾನಗೊಳಿಸಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ವಚನ ಪರಿಮಳ ಭಾಗ-2 ಗ್ರಂಥ ಬಿಡುಗಡೆ ಮಾಡಿದರು.

ತಿಪಟೂರಿನ ರುದ್ರಮುನಿ ಸ್ವಾಮೀಜಿ, ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸುಪ್ರದ ಕಟ್ಟಡ ನಿರ್ಮಾಣ ಸಂಸ್ಥೆಯ ನಿರ್ದೇಶಕ ಭುಜಂಗ ಶೆಟ್ಟಿ ಇದ್ದರು. ಡಾ| ಶಂಭುಲಿಂಗ ಹೆಗಡಾಳ ಪ್ರಾಸ್ತಾವಿಕ ಮಾತನಾಡಿದರು. ಗಾಯಕ  ಜಯದೇವಿ ಜಂಗಮಶೆಟ್ಟಿ ಅವರಿಂದ ವಚನ ಸಂಗೀತ ಕಛೇರಿ ನಡೆಯಿತು. ಎಪಿಎಂಸಿ ಸದಸ್ಯ ಶ್ರೀಶೈಲ ಸುರೇಬಾನ ಹಾಗೂ ವಕೀಲರ ಸಂಘದ ಅಧ್ಯಕ್ಷ ರಾಜಶೇಖರ ಬೆಳ್ಳಕ್ಕಿ ಅವರನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next