ಭೋಪಾಲ್: ಮಧ್ಯಪ್ರದೇಶದ ಸಚಿವೆ ಇಮಾರ್ತಿ ದೇವಿ ಅವರ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡುವ ಮೂಲಕ ಮಾಜಿ ಸಿಎಂ ಕಮಲ್‌ನಾಥ್ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಕಮಲ್‌ನಾಥ್ ವಿರುದ್ಧ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಜ್ಯೋತಿರಾದಿತ್ಯ ಸಿಂದಿಯಾ ಸೇರಿದಂತೆ ಬಿಜೆಪಿಯ ಹಲವು ನಾಯಕರು 2 ಗಂಟೆಗಳ ಕಾಲ ಮೌನ ಪ್ರತಿ ಭಟನೆ ನಡೆಸಿ, ಆಕ್ರೋಶ ಹೊರಹಾಕಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೂ ಪತ್ರ ಬರೆದಿರುವ ಸಿಎಂ ಚೌಹಾಣ್, “ಕಮಲ್‌ನಾಥ್ ಹೇಳಿಕೆಯನ್ನು ಖಂಡಿಸಿ, ಕೂಡಲೇ ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದಲೂ ವಜಾ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ, ರಾಷ್ಟ್ರೀಯ ಮಹಿಳಾ ಆಯೋಗವೂ ಕಮಲ್‌ನಾಥ್‌ಗೆ ನೋಟಿಸ್ ಜಾರಿ ಮಾಡಿದ್ದು, ವಿವರಣೆ ಕೇಳಿದೆ. ಮಧ್ಯಪ್ರದೇಶದಲ್ಲಿ ಉಪಚುನಾವಣೆಗೆ ದಿನಗಣನೆ ಆರಂಭವಾಗಿರುವಾಗಲೇ ಈ ಬೆಳವಣಿಗೆ ನಡೆದಿರುವುದು ಕಾಂಗ್ರೆಸ್‌ಗೆ ತೀವ್ರ ಇರುಸುಮುರುಸು ಉಂಟುಮಾಡಿದೆ.
ಮಾಯಾ, ಇರಾನಿ ಕಿಡಿ: ಇದೇ ವೇಳೆ, ಬಿಎಸ್‌ಪಿ ನಾಯಕಿ ಮಾಯಾವತಿ ಅವರೂ ಕಾಂಗ್ರೆಸ್ ನಾಯಕನ ವಿರುದ್ಧ ಕಿಡಿಕಾರಿದ್ದು, “ದಲಿತರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು’ ಎಂದು ಹೇಳಿದ್ದಾರೆ. “ಕಮಲ್‌ನಾಥ್ ವಿರುದ್ಧ ಕಾಂಗ್ರೆಸ್ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅವರು ಇಂಥ ಹೇಳಿಕೆ ನೀಡುತ್ತಿರುವುದು ಇದು ಮೊದಲೇನಲ್ಲ. ಗಾಂಧಿ ಕುಟುಂಬ ಏಕೆ ತುಟಿ ಬಿಚ್ಚುತ್ತಿಲ್ಲ’ ಎಂದು ಬಿಜೆಪಿ ನಾಯಕಿ ಸ್ಮತಿ ಇರಾನಿ ಪ್ರಶ್ನಿಸಿದ್ದಾರೆ.
ಸೋನಿಯಾ ಸುಮ್ಮನಿರುತ್ತಿದ್ದರೇ?:
ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಇಮಾರ್ತಿ ದೇವಿ ಈಗ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದಾರೆ. ಕಮಲ್‌ನಾಥ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, “ಒಬ್ಬ ಹರಿಜನ ಮಹಿಳೆಯನ್ನು ಹೇಗೆ ಗೌರವಿಸಬೇಕು ಎಂದು ಕಮಲ್‌ನಾಥ್‌ಗೆ ಗೊತ್ತಿಲ್ಲ. ಸಿಎಂ ಹುದ್ದೆ ಕಳೆದುಕೊಂಡ ಬಳಿಕ ಅವರು ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿದ್ದಾರೆ. ಇನ್ನು, ತಮ್ಮ ಮಗಳ ಮೇಲೆ ಯಾರಾದರೂ ಈ ರೀತಿಯ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರೆ ಸೋನಿಯಾಗಾಂಧಿ ಸುಮ್ಮನಿರುತ್ತಿದ್ದರೇ’ ಎಂದು ಪ್ರಶ್ನಿಸಿದ್ದಾರೆ.