Advertisement
ಉಸಿರಾಟದ ಮೂಲಕ ಮಕ್ಕಳ ಶ್ವಾಸಮಾರ್ಗವನ್ನು ಪ್ರವೇಶಿಸುವ ಬಾಹ್ಯ ವಸ್ತುಗಳು ಎಂದರೆ ಸಾಮಾನ್ಯವಾಗಿ ತರಕಾರಿಗಳು, ಬೀಜಗಳು, ಕಾಯಿಗಳು, ದ್ರಾಕ್ಷಿಯಂತಹ ಉರುಟಾದ ಆಹಾರ ವಸ್ತುಗಳು ಹಾಗೂ ಆಹಾರೇತರ ವಸ್ತುಗಳಾದ ಮಣಿಗಳು, ನಾಣ್ಯಗಳು, ಪಿನ್ನು, ಹಾರ್ಡ್‌ವೇರ್ ವಸ್ತುಗಳು, ಮಾತ್ರೆಗಳು ಮತ್ತು ಸಣ್ಣ ಪ್ಲಾಸ್ಟಿಕ್ ಆಟಿಕೆಗಳು ಹಾಗೂ ಇತರ ಸಣ್ಣ ಸಣ್ಣ ವಸ್ತುಗಳು. ಉಸಿರಾಟದ ಮೂಲಕ ಮಕ್ಕಳ ಶ್ವಾಸಮಾರ್ಗವನ್ನು ಸೇರಿದ ಬಹುತೇಕ ಅನ್ಯವಸ್ತುಗಳು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಶ್ವಾಸೋಚ್ಛಾ$Ìಸಕ್ಕೆ ಅಡಚಣೆಯನ್ನು ಉಂಟುಮಾಡುತ್ತವೆ ಹಾಗೂ ಕೆಮ್ಮು, ಉಸಿರಾಟದ ವೇಗ ಹೆಚ್ಚಳ, ಉಸಿರಾಟದ ತೊಂದರೆಗೆ ಕಾರಣವಾಗುತ್ತವೆ ಅಥವಾ ಉಸಿರಾಟ ಮಾರ್ಗವನ್ನು ಸಂಪೂರ್ಣ ಮುಚ್ಚಿ ಮಗು ಕುಸಿದುಬೀಳುವಂತೆ ಮಾಡುತ್ತವೆ. ಇದು ಮಗುವಿನ ಪಾಲಿಗೆ ಪ್ರಾಣಾಂತಿಕ ಸನ್ನಿವೇಶವಾಗಿದ್ದು, ತತ್‌ಕ್ಷಣ ಗುರುತಿಸಿ ಸೂಕ್ತ ಕ್ರಮಕ್ಕೆ ಮುಂದಾಗದೆ ಇದ್ದರೆ ಮೃತ್ಯುವನ್ನು ಉಂಟುಮಾಡಬಲ್ಲುದು.
Related Articles
Advertisement
ಚಿತ್ರ 1: ಶಿಶುವಿನ ಶ್ವಾಸಮಾರ್ಗವನ್ನು ಪ್ರವೇಶಿಸಿದ ಬಾಹ್ಯವಸ್ತುವನ್ನು ಹೊರದೂಡಲು ಬೆನ್ನಿಗೆ ಬಡಿಯುವ ವಿಧಾನವನ್ನು ಅನುಸರಿಸಬೇಕು.
ಚಿತ್ರ 2: ಶಿಶುವಿನ ಶ್ವಾಸಮಾರ್ಗವನ್ನು ಪ್ರವೇಶಿಸಿದ ಬಾಹ್ಯವಸ್ತುವನ್ನು ಹೊರದೂಡಲು ಎದೆಯನ್ನು ಒತ್ತುವ ವಿಧಾನವನ್ನು ಅನುಸರಿಸಬೇಕು.
ಹಂತ 1. ಮಗುವನ್ನು ತಲೆಯ ಭಾಗ ದೇಹದಿಂದ ತಗ್ಗಿನಲ್ಲಿ ಇರುವಂತೆ ಒಂದು ಕೈಯಲ್ಲಿ ಹಿಡಿದುಕೊಳ್ಳಬೇಕು. (ಚಿತ್ರ 1)
ಹಂತ 2. ನಿಮ್ಮ ಹಸ್ತದ ಮಟ್ಟಸ ಭಾಗವನ್ನು ಉಪಯೋಗಿಸಿ ಶಿಶುವಿನ ಭುಜದ ಎಲುಬುಗಳ ನಡುವೆ ಐದು ಬಾರಿ ಸ್ವಲ್ಪ ಮೃದುವಾಗಿ, ಆದರೆ ವೇಗವಾಗಿ ಬಡಿಯಬೇಕು. (ಚಿತ್ರ 1)
ಹಂತ 3. ಬೆನ್ನಿಗೆ ಬಡಿಯುವ ವಿಧಾನದಿಂದ ಶಿಶುವಿನ ಶ್ವಾಸಮಾರ್ಗ ಸರಿಹೋಗದಿದ್ದಲ್ಲಿ ಶಿಶುವನ್ನು ಮೇಲ್ಮುಖವಾಗಿ ತಿರುಗಿಸಿ ಎದೆಯ ಭಾಗಕ್ಕೆ ಐದು ಬಾರಿ ಒತ್ತುವ ವಿಧಾನವನ್ನು ಅನುಸರಿಸಬೇಕು. (ಚಿತ್ರ 2)
ಮಗುವಿನ ಶ್ವಾಸಮಾರ್ಗದಿಂದ ಬಾಹ್ಯವಸ್ತುವನ್ನು ಹೊರದೂಡಲು ಹೊಟ್ಟೆಯನ್ನು ಒತ್ತುವ ವಿಧಾನ (ಹೀಮ್ಲಿಚ್ ಮ್ಯಾನೂವರ್) ವನ್ನು ಅನುಸರಿಸಬೇಕು.
ಹಂತ 1. ಮಗು ಕುಳಿತಿದ್ದರೆ ಅಥವಾ ನಿಂತಿದ್ದರೆ ಮಗುವಿನ ಹಿಂದೆ ನಿಂತುಕೊಳ್ಳಿ ಮತ್ತು ಮಗುವಿನ ಹೊಟ್ಟೆ ಅಥವಾ ಸೊಂಟದ ಸುತ್ತ ಕೈಗಳನ್ನು ಬಳಸಿ.
ಹಂತ 2. ಒಂದು ಕೈಯಲ್ಲಿ ಮುಷ್ಠಿ ಬಿಗಿಯಿರಿ ಮತ್ತು ಹೆಬ್ಬೆರಳಿನ ಭಾಗವನ್ನು ಹೊಟ್ಟೆಯ ಮೇಲೆ, ಹೊಕ್ಕುಳಿಗಿಂತ ಕೊಂಚ ಮೇಲಕ್ಕೆ; ಕ್ಸಿಫಾಯ್ಡ ಪ್ರಾಸೆಸ್‌ನ ತುದಿಗಿಂತ ಸಾಕಷ್ಟು ಕೆಳಗೆ ಇರಿಸಿ. (ಚಿತ್ರ 3)
ಹಂತ 3. ಇನ್ನೊಂದು ಹಸ್ತದಿಂದ ಮುಷ್ಠಿಯನ್ನು ಹಿಡಿದುಕೊಳ್ಳಿ ಮತ್ತು ಮೇಲ್ಮುಖ ಹಾಗೂ ಒಳಮುಖವಾಗಿ ಅಮುಕಿ. ಪ್ರತೀ ಅಮುಕುವಿಕೆಯೂ ಪ್ರತ್ಯೇಕ ಮತ್ತು ವಿಭಿನ್ನ ಚಲನೆಯಾಗಿರಬೇಕು.
ಹಂತ 4. ಶ್ವಾಸಾಂಗದಲ್ಲಿ ಸಿಲುಕಿರುವ ಅಡಚಣೆ ಹೊರಬೀಳುವವರೆಗೆ ಅಥವಾ ಮಗು ಪ್ರಜ್ಞೆ ಕಳೆದುಕೊಳ್ಳುವವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಿ.
ಚಿತ್ರ 3: ಶಿಶುವಿನ ಶ್ವಾಸ ಮಾರ್ಗದಿಂದ ಬಾಹ್ಯವಸ್ತುವನ್ನು ಹೊರಹಾಕಲು ಹೊಟ್ಟೆಯನ್ನು ಅಮುಕುವುದು.
ನಿರ್ಬಂಧಾತ್ಮಕ ಕ್ರಮಗಳು
- ಗಟ್ಟಿಯಾದ ಮತ್ತು ದುಂಡನೆಯ ಆಹಾರದ ತುಣುಕುಗಳನ್ನು ನಾಲ್ಕು ವರ್ಷ ವಯಸ್ಸಿಗಿಂತ ಸಣ್ಣ ಮಕ್ಕಳಿಗೆ ನೀಡಬಾರದು – ಇವುಗಳಲ್ಲಿ ಗಟ್ಟಿಯಾದ ಕ್ಯಾಂಡಿಗಳು, ನೆಲಗಡಲೆ, ಮಾಂಸದ ತುಣುಕುಗಳು, ದ್ರಾಕ್ಷಿ, ಒಣದ್ರಾಕ್ಷಿ, ಸೇಬಿನ ತುಣುಕುಗಳು, ಬೀಜಗಳು, ಪಾಪ್‌ಕಾರ್ನ್, ಕಲ್ಲಂಗಡಿ ಬೀಜಗಳು ಮತ್ತು ಹಸಿ ತರಕಾರಿಗಳು ಸೇರಿವೆ.
- 2 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ಗಿವುಚಿ ಕೊಡಬಹುದು.
- ಎಳೆಯ ಮಕ್ಕಳಿಗೆ ಹೆತ್ತವರು/ ಹಿರಿಯರೇ ಘನ ಆಹಾರ ತಿನ್ನಿಸಬೇಕು ಮತ್ತು ಅವರನ್ನು ನೇರವಾಗಿ ಕುಳಿತುಕೊಂಡಿರುವ ಭಂಗಿಯಲ್ಲಿ ಮಾತ್ರ ಆಹಾರ ತಿನ್ನಿಸಬೇಕು.
- ಮಕ್ಕಳಿಗೆ ಆಹಾರವನ್ನು ಸರಿಯಾಗಿ ಜಗಿದು ತಿನ್ನಲು ಹೇಳಿಕೊಡಬೇಕು, ಆಹಾರ ಸೇವಿಸುವಾಗ ಕಿರುಚುವುದು, ಆಟವಾಡುವುದು, ಮಾತನಾಡುವುದು, ಓಡುವುದು, ಅಳುವುದು ಮತ್ತು ನಗುವುದು ಮಾಡಬಾರದು.
- ಚೀಪಿ ತಿನ್ನುವ ಔಷಧಗಳನ್ನು ಮೂರು ವರ್ಷ ವಯಸ್ಸಿನ ಬಳಿಕ ಮಾತ್ರ ನೀಡಬೇಕು (ಕಡೆ ಹಲ್ಲುಗಳು ಮೂಡಿದ ಬಳಿಕ).
- ಪುಟ್ಟ ಮಕ್ಕಳಿಗೆ ನಾಣ್ಯ ಇತ್ಯಾದಿ ದುಂಡನೆಯ, ಸಣ್ಣ ವಸ್ತುಗಳನ್ನು ಬಹುಮಾನವಾಗಿ ನೀಡಬಾರದು.
- ಶಾಲಾ ಪರಿಕರಗಳು ಮತ್ತು ಇತರ ಸಣ್ಣ ವಸ್ತುಗಳನ್ನು ಬಾಯಿಗೆ ಹಾಕುವುದು, ಕಚ್ಚುವುದು ಮಾಡದೆ ಇರುವಂತೆ ತಿಳಿಹೇಳಬೇಕು (ಪೆನ್ಸಿಲ್, ಸ್ಕೇಲ್, ರಬ್ಬರ್ ಇತ್ಯಾದಿ).
- ಸಣ್ಣ ಬಿಡಿಭಾಗಗಳು ಇರುವ ಆಟಿಕೆಗಳಂತಹ ವಸ್ತುಗಳನ್ನು, ದಿನ ದಿನಬಳಕೆಯ ವಸ್ತುಗಳನ್ನು ಮಕ್ಕಳು, ಶಿಶುಗಳ ಕೈಗೆಟಕದಂತೆ ಇರಿಸಬೇಕು.
- ಆಟಿಕೆಗಳ ಪ್ಯಾಕೇಜ್ ಮೇಲೆ ಉಲ್ಲೇಖೀಸಲಾಗಿರುವ ವಯೋಮಾನ ಸೂಚನೆಗಳನ್ನು ಪಾಲಿಸಬೇಕು.
- ಪುಟ್ಟ ಮಕ್ಕಳು ಯಾವುದೇ ಪ್ರಾಣಾಂತಿಕ ಸನ್ನಿವೇಶಗಳಿಗೆ ಸಿಲುಕುವುದನ್ನು ತಪ್ಪಿಸಲು ಪುಟ್ಟ ಮಕ್ಕಳಿಗೆ ಅವರ ಸಹೋದರ -ಸಹೋದರಿಯರು ಯಾವುದೇ ಅಪಾಯಕಾರಿ ವಸ್ತುಗಳನ್ನು ನೀಡದಂತೆ ಹೆತ್ತವರು ಎಚ್ಚರ ವಹಿಸಬೇಕು.
- ಹೆತ್ತವರು, ಶಿಕ್ಷಕ-ಶಿಕ್ಷಕಿಯರು, ಮಕ್ಕಳ ಆರೈಕೆದಾರರು ಮತ್ತು ಮಕ್ಕಳ ದೇಖರೇಖೀಯನ್ನು ನೋಡಿಕೊಳ್ಳುವ ಇತರರು ಪ್ರಾಣಾಂತಿಕ ಸನ್ನಿವೇಶಗಳಲ್ಲಿ ಅನುಸರಿಸಬೇಕಾದಂತಹ ಕ್ರಮಗಳನ್ನು ತಿಳಿದುಕೊಳ್ಳಲು ಪ್ರಾಥಮಿಕ ಪ್ರಥಮ ಚಿಕಿತ್ಸೆ ತರಬೇತಿಯನ್ನು ಪಡೆದುಕೊಳ್ಳಬೇಕು.