Advertisement
ಉಡುಪಿ: ಇಸ್ರೋ ಮೂಲಕ ದೇಶದ ಪ್ರಗತಿಗೆ ಅಗಾಧವಾದ ಕೊಡುಗೆ ನೀಡಿರುವ ಯು.ಆರ್. ರಾವ್ ಅವರ ಸಂಶೋಧನೆ, ಸಾಧನೆ ಅಪಾರ. ಸರಳ, ಸಜ್ಜನ ವ್ಯಕ್ತಿತ್ವದ ಅವರಿಗೆ ಸಿಗಬೇಕಾದ ಮನ್ನಣೆ ಮಾತ್ರ ಸಿಗದಿರುವುದು ಖೇದಕರ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ಸೋಮವಾರ ಇಹಲೋಕ ತ್ಯಜಿಸಿದ ಪ್ರಸಿದ್ಧ ಬಾಹ್ಯಾಕಾಶ ವಿಜ್ಞಾನಿ ಡಾ| ಉಡುಪಿ ರಾಮಚಂದ್ರ ರಾವ್ (ಯು. ಆರ್. ರಾವ್) ಅವರಿಗೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಭಾರತದ ಬಾಹ್ಯಾಕಾಶ ಕ್ಷೇತ್ರದ ಪ್ರಗತಿಗೆ ಬಹುದೊಡ್ಡ ಕಾಣಿಕೆ ನೀಡಿದ ಮಹಾನ್ ವ್ಯಕ್ತಿ ಅವರು. ಅವರ ಸಾಧನೆಗಳು ಶಾಶ್ವತವಾಗಿ ಉಳಿಯಲಿ. ಇತ್ತೀಚೆಗೆ ರಾವ್ ಅವರೊಂದಿಗೆ ಕೊನೆಯ ಬಾರಿ ಫೋನ್‌ನಲ್ಲಿ ಮಾತನಾಡಬೇಕೆಂಬ ಆಸೆ ಕೈತಪ್ಪಿ ಹೋಗಿರುವುದು ದುಃಖ ತಂದಿದೆ ಎಂದು ಶ್ರೀಗಳು ಇದೇ ವೇಳೆ ಹೇಳಿದರು.
ರಾವ್ ಒಡನಾಡಿ, ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ| ಎ.ಪಿ. ಭಟ್ ಅವರು ಮಾತನಾಡಿ ಶಿಕ್ಷಣ, ಆರೋಗ್ಯ, ಸಂಪರ್ಕ ಸಾಮಾನ್ಯರಿಗೂ ಸಿಗಬೇಕು ಎನ್ನುವುದು ಅವರ ಮೂಲ ಉದ್ದೇಶವಾಗಿತ್ತು. 40 ವರ್ಷಗಳ ಕಾಲ ಇಸ್ರೋವನ್ನು ಕಟ್ಟಿ ಬೆಳೆಸಿದ ರಾವ್ ಹೊಸತನದ ಕನಸುಗಾರರಾಗಿದ್ದು, ಭಾರತದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ಶ್ರೀ ಸಾಗಕಟ್ಟೆ ಮಠದ ಶ್ರೀ ಪ್ರಜ್ಞಾತ್ಮತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಘಟಕ ವಿಜಯ ಕುಮಾರ್ ಹೆಗ್ಡೆ ಪ್ರಸ್ತಾವನೆಗೈದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
Related Articles
ಉಡುಪಿಯಂತಹ ಪುಟ್ಟ ಊರಿನಲ್ಲಿ ಹುಟ್ಟಿ ಬೆಳೆದು ಇಸ್ರೋ ಮೂಲಕ ಮಹತ್ತರ ಸಾಧನೆಗೈದ ಯು.ಆರ್. ರಾವ್ ಅವರು ಈ ಊರಿನ ಹೆಸರನ್ನು ಆಕಾಶದೆತ್ತರಕ್ಕೇರಿಸಿದ ಅನೇಕರಲ್ಲಿ ಒಬ್ಬರು. ವಿಜ್ಞಾನ ಕ್ಷೇತ್ರದಲ್ಲಿನ ಅವರ ಅಪಾರ ಕೊಡುಗೆಗೆ ನಾವು ಕೃತಜ್ಞರಾಗಿರುಬೇಕು. ಆದರೆ ಅಂತಹ ಪ್ರವೃತ್ತಿ ಈಗ ಕಡಿಮೆಯಾಗುತ್ತಿದೆ. ಐಟಿ- ಬಿಟಿ ಮಾತ್ರ ವಿದ್ಯಾರ್ಥಿಗಳ ಗುರಿಯಾಗಿರಬಾರದು. ವಿಜ್ಞಾನ ಕ್ಷೇತ್ರದಲ್ಲಿ ಜನರಿಗೆ ನೆರವಾಗುವಂತಹ ಸಾಧನೆ ಮಾಡುವತ್ತ ಚಿತ್ತ ಹರಿಸಬೇಕು ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದರು.
Advertisement