ಔರಾದ: ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಸರ್ಕಾರ 32 ಕೋಟಿ ರೂ. ಅನುದಾನ ಖರ್ಚು ಮಾಡಿದರೂ ಇಲ್ಲಿನ ನಿವಾಸಿಗಳಿಗೆ ನೀರಿನ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ನಿವಾಸಿಗಳು ಪ್ರತಿ ವರ್ಷದ ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಎದರಿಸುವಂತಾಗಿದೆ.
ಈ ಹಿಂದಿನ ಬಿಜೆಪಿ ಸರ್ಕಾರದ ಆಡಳಿತಾವಧಿ ಯಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ತಾಲೂಕಿನ ಹಲಳ್ಳಿ ಗ್ರಾಮದಿಂದ ಔರಾದ ಪಟ್ಟಣಕ್ಕೆ ಶಾಸ್ವತ ಹಾಗೂ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದರು. ಇದರಿಂದ ಔರಾದ ಪಟ್ಟಣ ಸೇರಿದಂತೆ ಆರು ಗ್ರಾಮಕ್ಕೂ ನೀರು ಸರಬರಾಜು ಮಾಡಲು ಸರ್ಕಾರ ಮುಂದಾಗಿತ್ತು. ಆದರೆ ಕಾಮಗಾರಿ ಪೂರ್ಣವಾಗಿದ್ದರೂ ಸಹ ಈಗಲೂ ನೀರಿನ ಸಮಸ್ಯೆಯಿಂದ ಜನರಿಗೆ ಮುಕ್ತಿ ಸಿಗುತ್ತಿಲ್ಲ.
ತಾಲೂಕು ಕೇಂದ್ರದಲ್ಲಿರುವ ಜನರಿಗೆ ತೇಗಂಪುರ, ಬೋರಾಳ ಹಾಗೂ ಹಾಲಳ್ಳಿ ಗ್ರಾಮದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಮೂರು ಗ್ರಾಮದ ಜಲಮೂಲಗಳು ಬತ್ತಿವೆ. ಇದರಿಂದ ಜನರಿಗೆ ಆತಂಕ ಶುರುವಾಗಿದೆ. ಅದಲ್ಲದೆ ನೀರು ಸರಬರಾಜು ಮಾಡುವ ಅಧಿಕಾರಿಗಳಿಗೆ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎನ್ನುವುದು ತಿಳಿಯದಾಗಿದೆ.
ಸದ್ಯ ಪಟ್ಟಣದ ನಿವಾಸಿಗಳಿಗೆ ಎರಡು ದಿನಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಮೂರು ಗ್ರಾಮದಲ್ಲಿನ ನೀರಿನ ಮೂಲಗಳು ಬತ್ತಿವೆ. ಆದರೆ ನೀರು ಪೂರೈಸುವಂತೆ ಪಟ್ಟಣ ಪಂಚಾಯತ ಸದಸ್ಯರು ಹಾಗೂ ಔರಾದ ಪಟ್ಟಣದ ನಿವಾಸಿಗಳು ಪ್ರತಿಭಟನೆ ನಡೆಸುವ ವಿಚಾರದಲ್ಲಿದ್ದಾರೆ.
Related Articles
ತಾಲೂಕಿನ ತೇಗಂಪುರ ಗ್ರಾಮದಿಂದ ನಿತ್ಯ ಎರಡು ಗಂಟೆ ಕಾಲ ಮಾತ್ರ ನೀರು ಸರಬರಾಜು ಮಾಡಲಾಗುತ್ತಿದೆ. ಹಲಳ್ಳಿ ಗ್ರಾಮದಲ್ಲಿ ನೀರಿನ ಮೂಲ ಸಂಪೂರ್ಣ ಬತ್ತಿದ್ದು, ಬೋರಾಳ ಗ್ರಾಮದಲ್ಲಿ ನೀರಿನ ಮೂಲದ ಮಟ್ಟ ಕಡಿಮೆಯಾಗಿದ್ದರಿಂದ ಗ್ರಾಮಸ್ಥರಿಗೆ ನೀರು ಸಾಕಾಗುತ್ತಿಲ್ಲ.ನಮ್ಮೂರಿನಿಂದ ಔರಾದಗೆ ನೀರು ಸರಬರಾಜು ಮಾಡಬೇಡಿ ಎಂದು ಗ್ರಾಮಸ್ಥರು ಕೂಡ ಈಗಾಗಲೆ ಅಧಿಕಾರಿಗಳಿಗೆ ಮೌಖೀಕವಾಗಿ ಹೇಳಿದ್ದಾರೆ.
ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕಾದ ಪಟ್ಟಣ ಪಂಚಾಯ ಮುಖ್ಯಾಧಿಕಾರಿಗಳು ಇದಕ್ಕೂ ತಮಗೂ ಸಬಂಧವಿಲ್ಲ ಎನ್ನುವಂತೆ ಕೆಲಸ ಮಾಡುತ್ತಿದ್ದಾರೆ ಎಂಬುದು ಪಪಂ ಸದಸ್ಯರ ಮಾತಾಗಿದೆ.
ಔರಾದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ತೇಗಂಪುರದ ಬಾವಿಯಲ್ಲಿ ಹೂಳು ತುಂಬಿದೆ. ಹೂಳು ತೆಗೆದರೆ ನೀರು ಹೆಚ್ಚಾಗುತ್ತದೆ.
ಬೋರಾಳ ಗ್ರಾಮದ ಜನರಿಗೆ ನೀರು ಸಾಕಾಗುತ್ತಿಲ್ಲ. ಆ ಗ್ರಾಮಸ್ಥರು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ನಮಗೆ ಅಡ್ಡಿ ಪಡಿಸುತ್ತಿದ್ದಾರೆ. ಈ ಕುರಿತು ಪಪಂ ಮುಖ್ಯಾಧಿಕಾರಿಗಳಿಗೆ ತಿಳಿಸಿದ್ದೇನೆ.
•ಧನರಾಜ ಕುಡ್ಲೆ, ಪಪಂ ಕಚೇರಿ ಸಿಬ್ಬಂದಿ
ಪಟ್ಟಣದ ಜನರಿಗೆ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನೆವಾಗುತ್ತಿಲ್ಲ. ತೇಗಂಪುರ ಗ್ರಾಮದ ಬಾವಿಯಲ್ಲಿನ ಹೂಳು ತೆಗೆದರೆ ಪಟ್ಟಣದ ಜನತೆಗೆ ಸಾಕಾಗುವಷ್ಟು ನೀರು ಬರುತ್ತವೆ. ಇಲ್ಲವಾದಲ್ಲಿ ಬಾವಿ ಪಕ್ಕದಲ್ಲಿಯೇ ಒಂದು ಕೊಳವೆ ಬಾವಿ ಕೊರೆಸಲು ಪಪಂ ಅಧಿಕಾರಿಗಳು ಮುಂದಾಗಬೇಕು.
•ದಯಾನಂದ ಘೂಳೆ, ಪಟ್ಟಣದ ನಿವಾಸಿ
ಪಟ್ಟಣ ಪಂಚಾಯತ ಅಧಿಕಾರಿಗಳ ನಿಲಕ್ಷ್ಯತನದಿಂದ ಪಟ್ಟಣದ ಜನತೆಗೆ ನೀರು ಸೇರಿದಂತೆ ಇನ್ನಿತರ ಸೌಕರ್ಯಗಳ ಸಮಸ್ಯೆ ಕಾಡುತ್ತಿದೆ. ಈ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗುತ್ತಿಲ್ಲ.
•ಬಂಟಿ ದರ್ಬಾರೆ, ಮುಖಂಡ
ರವೀಂದ್ರ ಮುಕ್ತೇದಾರ್