ಔರಾದ: ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಪಟ್ಟಣದಲ್ಲಿ ಗುರುವಾರ ಅವರ ಪತ್ನಿ ಶೀಲಾ ಖೂಬಾ ಹಾಗೂ ಬಿಜೆಪಿ ಕಾರ್ಯಕರ್ತರು ಮತ ಯಾಚನೆ ಮಾಡಿದರು.
ಬೆಳಗ್ಗೆ ಉದ್ಭವಲಿಂದ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಟ್ಟಣದ ಪ್ರತಿಯೊಂದು ವಾರ್ಡ್ ಹಾಗೂ ವ್ಯಾಪಾರಿ ಮಳಿಗೆಗಳಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆ ಹಾಗೂ ಬೀದರ ಕ್ಷೇತ್ರಕ್ಕೆ ಸಂಸದ ಭಗವಂತ ಖೂಬಾ ನೀಡಿದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡಿದರು.
ಬೀದರ ಜಿಲ್ಲೆಯ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಹಾಗೂ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈ ಬಲ ಪಡಿಸಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ, ನೆಮ್ಮದಿ ಹಾಗೂ ರಕ್ಷಣೆ ಸಿಗಲು ಸಾಧ್ಯವಾಗುತ್ತದೆ ಎಂದರು.
ಮುಖಂಡ ದೀಪಕ ಪಾಟೀಲ ಮಾತನಾಡಿ, ಬೀದರ ಸಂಸದ ಭಗವಂತ ಖೂಬಾ ಅವರ ತವರು ತಾಲೂಕು ಔರಾದ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ತಾಲೂಕಿನಿಂದ ಅತಿ ಹೆಚ್ಚು ಮತಗಳನ್ನು ನೀಡಲು ಈ ಭಾಗದ ಜನರು ಮುಂದಾಗಬೇಕು ಎಂದು ಮನವಿ ಮಾಡಿದವರು. ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರು ತಮ್ಮ ವಾರ್ಡ್ ಹಾಗೂ ಬಡಾವಣೆಯಲ್ಲಿ ಕೇಂದ್ರ ಸರ್ಕಾರ ಯೋಜನೆ ಹಾಗೂ ರಾಜ್ಯಸರ್ಕಾರದ ಜನ ವಿರೋಧಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಪಕ್ಷದ ಕಡೆಗೆ ಸೆಳೆಯುವ ಪ್ರಯತ್ನ ಮಾಡಬೇಕು ಎಂದರು.
ಬೀದರ ಲೋಕಸಭೆ ಕ್ಷೇತ್ರದಲ್ಲಿಯೇ ಔರಾದ ತಾಲೂಕಿನಿಂದ ಅತಿ ಹೆಚ್ಚು ಮತಗಳು ಬಿಜೆಪಿಗೆ ಬರುತ್ತವೆ. ಅದನ್ನು ತಪ್ಪಿಸಲು ಯಾರಿದಂಲೂ ಸಾಧ್ಯವಿಲ್ಲ. ಕಾಂಗ್ರೆಸ್ ಮುಖಂಡರು ಹಾಗೂ ಅಭ್ಯರ್ಥಿಗಳು ಚುನಾವಣೆ ಸಮಯದಲ್ಲಿ ನೀಡುವ ಹಣ ಹೆಂಡ ತೆಗೆದುಕೊಳ್ಳದೆ ಸ್ವಾಭಿಮಾನದಿಂದ ನವ ಭಾರತ ನಿರ್ಮಾಣ ಮಾಡುವ ಉದ್ದೇಶದಿಂದ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೀಲಾ ಭಗವಂತ ಖೂಬಾ, ಪ್ರಸನ್ನಲಕ್ಷ್ಮೀ ದೇಶಪಾಂಡೆ, ಜ್ಯೋತಿ ನೆಳಗೆ, ದೀಪಕ ಪಾಟೀಲ, ಚಂದ್ರಶೇಖರ ದೇಶಮುಖ, ಶರಣಪ್ಪ ಪಂಚಾಕ್ಷರೆ, ಸಚಿನ ಎಡವೆ, ಪ್ರವೀಣ ಬುಟ್ಟೆ, ರಾಜಕುಮಾರ ಪಟೆ°, ರಮೇಶ ದೇವಕತೆ, ಶಿವಾಜಿ ಬೋಗಾರ, ಪ್ರಕಾಶ ಅಲ್ಮಾಜೆ ಹಾಗೂ ಇನ್ನಿತರರ ಮುಖಂಡರು ಪಾಲ್ಗೊಂಡಿದ್ದರು.