Advertisement

ಪ್ರೌಢ ಮಕ್ಕಳಿಗಿಲ್ಲ ಮೊಟ್ಟೆ,ಬಾಳೆಹಣ್ಣು,ಚಿಕ್ಕಿ! ಸರಕಾರದ ತಾರತಮ್ಯ ನೀತಿಗೆ ಆಕ್ಷೇಪ

12:06 AM Aug 22, 2022 | Team Udayavani |

ಕಾಪು: ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸರಕಾರಿ ಮತ್ತು ಅನುದಾನಿತ ಶಾಲೆಗಳ 1ರಿಂದ 8ನೇ ತರಗತಿ ವರೆಗಿನ ಮಕ್ಕಳಿಗೆ ವಾರಕ್ಕೆ 2 ದಿನ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೆಹಣ್ಣು, ನೆಲಗಡಲೆಯ ಚಿಕ್ಕಿ ವಿತರಿಸುತ್ತಿವೆ. ಆದರೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಯೋಜನೆಯಿಂದ ಕೈಬಿಟ್ಟಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Advertisement

ಎರಡು ವಾರಗಳ ಹಿಂದೆ ಆರಂಭವಾದ ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌ ಯೋಜನೆಯನ್ನು ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಜಾರಿಗೆ ತರುವ ಮುನ್ನವೇ ಯೋಜನೆಯ ಬಗ್ಗೆ ಅಪಸ್ವರ ಎದ್ದಿದೆ. 9 ಮತ್ತು 10ನೇ ತರಗತಿಯ ಮಕ್ಕಳನ್ನು ಹೊರಗಿಟ್ಟಿರುವುದು ವಿದ್ಯಾರ್ಥಿಗಳಲ್ಲಿ ಭಾರೀ ನಿರಾಸೆಗೆ ಕಾರಣವಾಗಿದೆ.

ಪ್ರತೀ ವಿದ್ಯಾರ್ಥಿಗೆ 6 ರೂ. ವೆಚ್ಚ
ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿದ್ದು ಕೇಂದ್ರ ಸರಕಾರ ಶೇ. 60, ರಾಜ್ಯ ಸರಕಾರ ಶೇ. 40 ಅನುದಾನವನ್ನು ಭರಿಸಲಿದೆ. ಶೈಕ್ಷಣಿಕ ಸಾಲಿನ 46 ದಿನ ವಾರಕ್ಕೆ 2 ಮೊಟ್ಟೆ, ಅಥವಾ 2 ಬಾಳೆ ಹಣ್ಣು ಇಲ್ಲವೇ ನೆಲಕಡಲೆ, ಏಲಕ್ಕಿ ಮತ್ತು ಬೆಲ್ಲದಿಂದ ತಯಾರಿಸಿದ ಚಿಕ್ಕಿಯನ್ನು ವಿತರಿಸಲಾಗುತ್ತದೆ. ಇದಕ್ಕಾಗಿ ಪ್ರತೀ ವಿದ್ಯಾರ್ಥಿಗೆ ದಿನವೊಂದಕ್ಕೆ 6 ರೂ. – ವಾರ್ಷಿಕ 280 ರೂ. ಖರ್ಚಾಗಲಿದೆ. ಎಸ್‌ಡಿಎಂಸಿ ಮತ್ತು ಶಿಕ್ಷಕರಿಗೆ ಇದರ ಹೊಣೆ ವಹಿಸಲಾಗಿದೆ ಎಂದು ಉಡುಪಿ ಜಿ.ಪಂ. ಅಕ್ಷರ ದಾಸೋಹ ವಿಭಾಗದ ಅಧಿಕಾರಿ ವಿವೇಕಾನಂದ ಗಾಂವ್ಕರ್‌ ತಿಳಿಸಿದ್ದಾರೆ.

ಶಿಕ್ಷಕರಿಗೆ ಸಂಕಷ್ಟ
ಸರಕಾರಿ, ಅನುದಾನಿತ ಪ್ರೌಢ ಶಾಲೆಗಳಲ್ಲಿ 1ರಿಂದ 7 ಮತ್ತು 8, 9, 10ನೇ ತರಗತಿಗಳು ಜತೆಗೇ ಇದ್ದು ಸರಕಾರದ ನಿಯಮಾವಳಿಯಿಂದಾಗಿ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ನಡುವೆ ತಾರತಮ್ಯ ಎಸಗುತ್ತಿದ್ದೇವೆ ಎಂಬ ಅಪರಾಧಿ ಭಾವ ಶಿಕ್ಷಕರನ್ನು ಕಾಡುತ್ತಿದೆ. 1ರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ತಿನ್ನುತ್ತಿದ್ದರೆ 9 ಮತ್ತು 10ನೇ ತರಗತಿಯ ಮಕ್ಕಳು ಆಸೆಗಣ್ಣುಗಳಿಂದ ನೋಡುವಾಗ ಶಿಕ್ಷಕರ ಮನಸ್ಸು ಮರುಗುತ್ತದೆ.
ಸರಕಾರದ ಯೋಜನೆ ಉಪಯುಕ್ತವಾಗಿದೆ. ಆದರೆ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳನ್ನು ಹೊರಗಿಟ್ಟಿರುವುದು ಸರಿಯಲ್ಲ; ಸರಕಾರ ಅವರಿಗೂ ವಿತರಿಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಆಗ್ರಹಿಸಿದ್ದಾರೆ.

ರಾಜ್ಯ ಸರಕಾರದ ನಿಯಮದಂತೆ 1ರಿಂದ 7ನೇ ತರಗತಿ ಪ್ರಾಥಮಿಕ ವಿಭಾಗದಲ್ಲಿದ್ದು ಈ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ಮತ್ತು ಚಿಕ್ಕಿ ವಿತರಿಸಲಾಗುತ್ತಿದೆ. ಆರ್‌ಟಿಇ ಪ್ರಕಾರದಲ್ಲಿ 8ನೇ ತರಗತಿ ಕೂಡ ಪ್ರಾಥಮಿಕ ವಿಭಾಗದಲ್ಲಿ ಇರುವುದರಿಂದ ಆ ಮಕ್ಕಳಿಗೂ ಪೌಷ್ಟಿಕಾಂಶಯುಕ್ತ ಆಹಾರ ನೀಡಲಾಗುತ್ತಿದೆ. ಎಲ್ಲರಿಗೂ ಮೊಟ್ಟೆ ಅಥವಾ ಪೌಷ್ಟಿಕಾಂಶಯುತ ಆಹಾರ ಪೂರೈಕೆ ಕಷ್ಟ ಸಾಧ್ಯ. ಈ ಬಗ್ಗೆ ಮುಂದೆ ಯೋಚಿಸಲಾಗುವುದು.
– ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವರು

Advertisement

-ರಾಕೇಶ್‌ ಕುಂಜೂರು

Advertisement

Udayavani is now on Telegram. Click here to join our channel and stay updated with the latest news.

Next