Advertisement

ಹಿರಿಯರಿಗೆ ಪೌಷ್ಟಿಕಾಂಶಯುಕ್ತ ಆಹಾರ

10:12 AM Oct 16, 2022 | Team Udayavani |

ಯಾವುದೇ ವಯಸ್ಸಿನಲ್ಲಿರಲಿ; ಸರಿಯಾದ, ಸೂಕ್ತವಾದ ಆಹಾರ ಸೇವನೆ ಬಹಳ ಮುಖ್ಯ. ಆರೋಗ್ಯಕರವಾದ ವೃದ್ಧಾಪ್ಯವನ್ನು ಅನುಭವಿಸಲು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆ ಅಗತ್ಯವಾಗಿದೆ.

Advertisement

ಆದರೆ ಆರೋಗ್ಯಯುತವಾದ ದೀರ್ಘ‌ಕಾಲಿಕ ಬದುಕನ್ನು ಬದುಕುವುದಕ್ಕಾಗಿ ಯಾವುದನ್ನು, ಎಂತಹ ಆಹಾರ ವಸ್ತುಗಳನ್ನು ಸೇವಿಸಬೇಕು ಎಂದು ನಾವು ಸದಾ ಪ್ರಶ್ನಿಸಿಕೊಳ್ಳುತ್ತಿರುತ್ತೇವೆ. ನಮಗೆ ವಯಸ್ಸಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಹಲವಾರು ಬಗೆಯ ಬದಲಾವಣೆಗಳು ಉಂಟಾಗುತ್ತವೆ. ಇವು ನಮ್ಮ ಆಹಾರ ಸೇವನೆಯ ಮೇಲೆಯೂ ಪರಿಣಾಮ ಬೀರುತ್ತವೆ. ವಯಸ್ಸಾಗುತ್ತ ಹೋದ ಹಾಗೆ ವಯೋವೃದ್ಧರಿಗೆ ಬೇಕಾಗುವ ಕ್ಯಾಲೋರಿ ಪ್ರಮಾಣ ಶೇ. 25ರಷ್ಟು ಕಡಿಮೆಯಾಗುತ್ತದೆ. ಹೀಗಾಗಿ ವಯೋವೃದ್ಧ ಗಂಡಸರಿಗೆ ದಿನದಲ್ಲಿ ಸುಮಾರು 1,800 ಕಿಲೊ ಕ್ಯಾಲೊರಿ ಅಗತ್ಯಬಿದ್ದರೆ ವಯೋವೃದ್ಧ ಮಹಿಳೆಯರಿಗೆ ಸುಮಾರು 1,400 ಕಿಲೊ ಕ್ಯಾಲೊರಿ ಬೇಕಾಗುತ್ತದೆ.

ಮುಪ್ಪಿನಲ್ಲಿ ದೈಹಿಕ ಚಟುವಟಿಕೆಗಳು ಕಡಿಮೆಯಾಗುವುದು, ದೇಹದಲ್ಲಿ ಸ್ನಾಯು ಸಮೂಹ ಕಡಿಮೆಯಾಗುವುದು ಇತ್ಯಾದಿ ಅನೇಕ ಅಂಶಗಳು ಒಟ್ಟಾಗಿ ಕ್ಯಾಲೋರಿ ಅಗತ್ಯ ಕಡಿಮೆಯಾಗುತ್ತದೆ. ವಯೋವೃದ್ಧರ ಆಹಾರ ಸೇವನೆಯನ್ನು ಪ್ರಭಾವಿಸುವ ಇನ್ನೊಂದು ಅಂಶವೆಂದರೆ ರುಚಿ ಮತ್ತು ಘ್ರಾಣ ಶಕ್ತಿ ಚುರುಕು ಕಳೆದುಕೊಳ್ಳುವುದು. ಇದರಿಂದಾಗಿ ವಯಸ್ಸಾಗುತ್ತಿದ್ದಂತೆ ಸೂಕ್ಷ್ಮ-ನವಿರಾದ ಪರಿಮಳಗಳು, ಸೂಕ್ಷ್ಮವಾದ ರುಚಿಗಳನ್ನು ಗುರುತಿಸುವ ಶಕ್ತಿ ಕಡಿಮೆಯಾಗುತ್ತದೆ.

ಇದರಿಂದಾಗಿ ವಯೋವೃದ್ಧರಿಗೆ ಎಲ್ಲ ಆಹಾರವಸ್ತುಗಳೂ ರುಚಿ, ಸುವಾಸನೆ ಕಳೆದುಕೊಂಡಂತೆ ಅನ್ನಿಸುತ್ತದೆ. ಇದರ ಜತೆಗೆ ಇಳಿವಯಸ್ಸಿನಲ್ಲಿ ಸಾಮಾನ್ಯವಾಗಿರುವ ಕಿಡ್ನಿ ಕಾಯಿಲೆಗಳು, ಸೈನಸೈಟಿಸ್‌, ಕ್ಯಾನ್ಸರ್‌ ಗಳು, ಹಲ್ಲು ಬಿದ್ದುಹೋಗಿರುವುದು ಮತ್ತು ವಸಡುಗಳ ಕಾಯಿಲೆಗಳಿಂದಾಗಿ ವಯೋವೃದ್ಧರ ರುಚಿ ಗ್ರಹಿಕೆಯಲ್ಲಿ ವ್ಯತ್ಯಯವುಂಟಾಗುತ್ತದೆ. ಹಿರಿಯ ವಯಸ್ಕರು ಸಾಮಾನ್ಯವಾಗಿ ದೀರ್ಘ‌ಕಾಲಿಕ ಅನಾರೋಗ್ಯಗಳಿಗೆ ಬಹುವಿಧ ಔಷಧ (ಆ್ಯಂಟಿಬಯೋಟಿಕ್‌ಗಳು, ಆ್ಯಂಟಿ ಕ್ಯಾನ್ಸರ್‌ ಔಷಧಗಳು, ಅನಾಲ್ಜೆಸಿಕ್‌ಗಳು ಇತ್ಯಾದಿ)ಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ.

ಇವುಗಳಿಂದಾಗಿಯೂ ರುಚಿ ಗ್ರಹಿಕೆಯಲ್ಲಿ ಬದಲಾವಣೆ ಉಂಟಾಗುತ್ತದೆಯಲ್ಲದೆ ಹಲವು ಬಗೆಯ ಖಾದ್ಯಗಳ ಪರಿಮಳ, ರುಚಿಗಳನ್ನು ಗುರುತಿಸಿ ಇಷ್ಟಪಡುವುದು ವಯೋವೃದ್ಧರಿಗೆ ಸಾಧ್ಯವಾಗುವುದಿಲ್ಲ. ವಯೋವೃದ್ಧರಲ್ಲಿ ಪ್ರೊಟೀನ್‌ ಮತ್ತು ಸೂಕ್ಷ್ಮ ಪೌಷ್ಟಿಕಾಂಶಗಳಾದ ಕ್ಯಾಲ್ಸಿಯಂ ಮತ್ತು ಖನಿಜಾಂಶಗಳ ಕೊರತೆ ಇರುವುದನ್ನು ಗಮನಿಸಲಾಗಿದೆ.

Advertisement

ಮೇಲೆ ಚರ್ಚಿಸಲಾದಂತೆ ನಮಗೆ ವಯಸ್ಸಾಗುತ್ತಿದ್ದ ಹಾಗೆ ಆಹಾರ ಸೇವನೆಯಲ್ಲಿ ಏಕತಾನತೆಯು ಕಾಡಲಾರಂಭವಾಗುತ್ತದೆ. ಜಗಿಯುವುದು ಮತ್ತು ನುಂಗುವುದರಲ್ಲಿಯೂ ಅಡಚಣೆಗಳು ಎದುರಾಗುವುದರಿಂದ ವಯೋವೃದ್ಧರು ಆಹಾರ ಸೇವನೆಯಲ್ಲಿ ಸುಲಭದ ದಾರಿಗಳತ್ತ ವಾಲುತ್ತಾರೆ. ತರಕಾರಿಗಳು, ಪ್ರೊಟೀನ್‌ಗಳು ಮತ್ತು ಕೊಬ್ಬಿನಂಶ ಸಹಿತ ಆಹಾರಗಳನ್ನು ಸೇವಿಸುವುದರ ಬದಲಾಗಿ ಮೃದುವಾದ ಪಿಷ್ಟ ಸಹಿತ ಆಹಾರವಸ್ತುಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಇವು ಅರೆ ಘನ ರೂಪದಲ್ಲಿದ್ದು, ನುಂಗಲು ಸುಲಭವಾಗುತ್ತದೆ ಮತ್ತು ಊಟವನ್ನು ಹೆಚ್ಚು ಕಷ್ಟಪಡದೆ ಮುಗಿಸಲು ಸಹಾಯ ಮಾಡುತ್ತದೆ.

ಇದರ ಪರಿಣಾಮವೆಂದರೆ ಆಹಾರವು ಸಂಪೂರ್ಣವಾಗಿ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದ್ದಾಗಿರುತ್ತದೆ ಹಾಗೂ ಪ್ರೊಟೀನ್‌ ಮತ್ತು ನಾರಿನಂಶಗಳು, ಸೂಕ್ಷ್ಮ ಪೋಷಕಾಂಶಗಳು ಅದರಲ್ಲಿ ಇರುವುದಿಲ್ಲ. ಸ್ನಾಯುಗಳ ಸದೃಢತೆ ಮತ್ತು ಅವುಗಳ ಕಾರ್ಯಚಟುವಟಿಕೆ ಬೆಳೆಯಲು ಮತ್ತು ನಿರ್ವಹಣೆಗೆ ಪ್ರೊಟೀನ್‌ ದೇಹಕ್ಕೆ ಪೂರೈಕೆಯಾಗುವುದು ಅತ್ಯವಶ್ಯಕ.

ವಯೋವೃದ್ಧರ ಒಟ್ಟು ಆಹಾರದ ಶೇ. 12ರಿಂದ 14ರ ವರೆಗೆ ಪ್ರೊಟೀನ್‌ ಇರುವುದು ಅಗತ್ಯ. ವಯೋವೃದ್ಧರಿಗೆ ಅವರ ಕುಟುಂಬದಲ್ಲಿರುವ ಇತರ ಕಿರಿಯ ಸದಸ್ಯರಿಗಿಂತ ಹೆಚ್ಚು ಪ್ರೊಟೀನ್‌ ಅಗತ್ಯವಾಗಿರುತ್ತದೆ. ವಯೋಸಹಜ ಸ್ನಾಯು ಸಮೂಹ ನಷ್ಟ (ಸಾರ್ಕೊಪೇನಿಯಾ ಎಂದು ಕರೆಯಲಾಗುತ್ತದೆ) ವಾಗುವುದು ಮತ್ತು ಹೆಚ್ಚು ಪ್ರೊಟೀನ್‌ ಸಹಿತ ಆಹಾರ ಪೂರೈಕೆಯಾಗದೆ ಇದ್ದರೆ ಸ್ನಾಯು ಸಮೂಹ ನಷ್ಟವನ್ನು ಹೆಚ್ಚಿಸಬಲ್ಲ ದೀರ್ಘ‌ಕಾಲಿಕ ಕಾಯಿಲೆಗಳು ಅವರಿಗಿರುವುದೇ ಇದಕ್ಕೆ ಕಾರಣ.

ಬೀನ್ಸ್‌ಗಳು, ಬೇಳೆ ಕಾಳುಗಳು, ಬಟಾಣಿ, ಮೀನು ಮತ್ತು ಕೋಳಿಮಾಂಸ, ಮೊಟ್ಟೆ ಇತ್ಯಾದಿ ಹೆಚ್ಚು ಪ್ರೊಟೀನ್‌ಯುಕ್ತ ಆಹಾರ. ಜಗಿಯಲು, ನುಂಗಲು ಸಮಸ್ಯೆ ಹೊಂದಿರುವ ವಯೋವೃದ್ಧರಿಗೆ ಈ ಪ್ರೊಟೀನ್‌ಯುಕ್ತ ಆಹಾರಗಳನ್ನು ಮೃದುವಾಗುವಂತೆ ಬೇಯಿಸಿ ನೀಡಬಹುದಾಗಿದೆ.

ಪ್ರೊಟೀನ್‌ನ ಇನ್ನೊಂದು ಉತ್ತಮ ಮೂಲವೆಂದರೆ ಕೊಬ್ಬಿನಂಶ ಹೆಚ್ಚಿಲ್ಲದ ಹೈನು ಉತ್ಪನ್ನಗಳಾದ ಕೆನೆರಹಿತ ಹಾಲು ಮತ್ತು ಚೀಸ್‌; ಇವುಗಳು ಕೂಡ ನುಂಗುವುದಕ್ಕೆ ಸುಲಭಸಾಧ್ಯ. ವಯೋವೃದ್ಧರ ಆಹಾರದಲ್ಲಿ ಕೊಬ್ಬಿನಂಶ ಸಹಿತ ಆಹಾರಗಳು ಶೇ. 10ರಿಂದ 30ನ್ನು ಮೀರಬಾರದು.

ಸಿಟ್ರಸ್‌ ಹಣ್ಣುಗಳು, ಹಸುರು ತರಕಾರಿಗಳು, ಧಾನ್ಯಗಳು, ಕೊಬ್ಬು ರಹಿತ ಮೀನು, ಕೋಳಿ ಮತ್ತು ಕೋಳಿಯ ಉತ್ಪನ್ನಗಳು, ಹಾಲು ಮತ್ತು ಹೈನು ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸಬೇಕು. ಇದರಿಂದ ವಯೋವೃದ್ಧರಿಗೆ ಫೋಲಿಕ್‌ ಆ್ಯಸಿಡ್‌, ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ನಾರಿನಂಶ ಗಳಂತಹ ಸೂಕ್ಷ್ಮ ಪೋಷಕಾಂಶ ಲಭ್ಯವಾಗುತ್ತವೆ.

ನೀರು ಇನ್ನೊಂದು ಪ್ರಮುಖ ಪೌಷ್ಟಿಕಾಂಶವಾಗಿದ್ದು, ಸಾಮಾನ್ಯವಾಗಿ ನಿರ್ಲಕ್ಷಿತವಾಗಿರುತ್ತದೆ. ಮೂತ್ರಪಿಂಡದ ಸಮಸ್ಯೆಗಳು, ಹೃದಯ ವೈಫ‌ಲ್ಯ ಅಥವಾ ಸೋಡಿಯಂ ಅಂಶ ಕಡಿಮೆಯಾಗಿರುವ ಸ್ಥಿತಿಯಂತಹ ಅನಾರೋಗ್ಯಗಳು* ಇಲ್ಲದೆ ಇದ್ದರೆ ವಯೋವೃದ್ಧರು ಸಾಕಷ್ಟು ನೀರು ಕುಡಿಯುವುದನ್ನು ಶಿಫಾರಸು ಮಾಡಲಾಗುತ್ತದೆ.

ವಯೋವೃದ್ಧರಿಗೆ ಬಾಯಾರಿಕೆಯ ಅನುಭವ ಉಂಟಾಗುವುದು ಕಡಿಮೆಯಾಗಿರುತ್ತದೆಯಲ್ಲದೆ ದೇಹಕ್ಕೆ ನೀರಿನ ಅಗತ್ಯ ಉಂಟಾಗುವುದು ಕೂಡ ಅವರ ಗಮನಕ್ಕೆ ಬರುವುದಿಲ್ಲ. ಹಾಸಿಗೆ ಹಿಡಿದಿರುವ ಅಥವಾ ಕೊಳವೆಯ ಮೂಲಕ ಆಹಾರ ಪಡೆಯುತ್ತಿರುವ ವಯೋವೃದ್ಧರು ನಿರ್ಜಲೀಕರಣಕ್ಕೆ ತುತ್ತಾಗುವ ಸಾಧ್ಯತೆಗಳು ಅಧಿಕವಾಗಿರುತ್ತದೆ. ವಯೋವೃದ್ಧರು ದಿನಕ್ಕೆ ಪ್ರತೀ ಕಿ.ಗ್ರಾಂ. ದೇಹ ತೂಕಕ್ಕೆ 30 ಮಿ.ಲೀ.ಗಳಂತೆ ನೀರು/ ದ್ರವಾಹಾರ ಸೇವಿಸುವ ಅಗತ್ಯವಿರುತ್ತದೆ. ಅಂದರೆ 50 ಕಿ.ಗ್ರಾಂ. ದೇಹತೂಕ ಹೊಂದಿರುವ ವಯೋವೃದ್ಧರೊಬ್ಬರು ದಿನಕ್ಕೆ 1,500 ಮಿ.ಲೀ. ನೀರು ಕುಡಿಯಬೇಕಾಗಿರುತ್ತದೆ. ನೀರಿನಂಶ ಕೊರತೆಯಿಂದ ನಿರ್ಜಲೀಕರಣ ಉಂಟಾಗಬಹುದಾಗಿದ್ದು, ಇದರಿಂದಾಗಿ ಗೊಂದಲ, ದಣಿವು, ಕಂಗಾಲುತನ ಅಥವಾ ಸಿಂಕೋಪ್‌ ಉಂಟಾಗಬಹುದಾಗಿದೆ.

ಜತೆಗೆ ಮಲಬದ್ಧತೆಗೂ ಇದು ಕಾರಣವಾಗಬಹುದು. ಬೇಸಗೆಯ ದಿನಗಳಲ್ಲಿ ವಾತಾವರಣದಲ್ಲಿ ಆರ್ದ್ರತೆ ಮತ್ತು ಉಷ್ಣಾಂಶ ಹೆಚ್ಚಿರುವುದರಿಂದ ಬೆವರು ಹೆಚ್ಚು ಸುರಿಯುವ ಮೂಲಕ ದೇಹದಿಂದ ಹೆಚ್ಚು ನೀರಿನಂಶ ನಷ್ಟವಾಗಬಹುದಾಗಿದ್ದು, ಈ ಬಗ್ಗೆ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಕೊನೆಯದಾಗಿ, ವಯೋವೃದ್ಧರ ಆಹಾರ ಕ್ರಮದಲ್ಲಿ ನಾರಿನಂಶ ಇರಲೇಬೇಕು. ದಿನಕ್ಕೆ ಸುಮಾರು 20ರಿಂದ 40 ಗ್ರಾಂಗಳಷ್ಟು ನಾರಿನಂಶ ಅಗತ್ಯವಾಗಿರುತ್ತದೆ. ಗೋಧಿ ತೌಡು, ಕಿರುಧಾನ್ಯಗಳು, ಹಸುರು ಸೊಪ್ಪು ತರಕಾರಿ, ಕ್ಯಾಬೇಜ್‌, ಮಾವಿನಹಣ್ಣು, ಪೇರಳೆ, ಬಾಳೆದಿಂಡು ಇತ್ಯಾದಿಗಳಲ್ಲಿ ನಾರಿನಂಶ ಅತ್ಯಧಿಕವಾಗಿರುತ್ತದೆ.

ಯಾವುದೇ ವಯಸ್ಸು ಇರಲಿ; ಆಹಾರ ಸೇವನೆಯು ಒಂದು ಸಾಮಾಜಿಕ ವಿದ್ಯಮಾನ ಎಂಬುದನ್ನು ಕೂಡ ನಾವು ಗಮನದಲ್ಲಿ ಇರಿಸಿಕೊಳ್ಳಬೇಕು. ಯಾರೂ ಒಬ್ಬಂಟಿಯಾಗಿ ಊಟ-ಉಪಾಹಾರ ಸೇವಿಸಲು ಇಷ್ಟಪಡುವುದಿಲ್ಲ. ಹಾಸಿಗೆ ಹಿಡಿದಿರುವ ವಯೋವೃದ್ಧರೊಬ್ಬರು ಕುಟುಂಬ ಸದಸ್ಯರೆಲ್ಲರೂ ಜತೆಯಾಗಿ ಕಲೆತು ಊಟ ಮಾಡುವ ಊಟದ ಮೇಜಿನಿಂದ ದೂರವಾಗಿ ತಮ್ಮ ಕೋಣೆಯ ಹಾಸಿಗೆಯಲ್ಲಿದ್ದೇ ಆಹಾರ ಸೇವಿಸಬೇಕಾಗಿರಬಹುದು; ಅದೇ ಹಾಸಿಗೆಯಲ್ಲಿದ್ದೇ ಅವರ ಡಯಾಪರ್‌ ಬದಲಾಯಿಸಿರಬಹುದು. ಇದು ಕೂಡ ಆಹಾರ ಸೇವನೆಯನ್ನು ಅವರಿಗೆ ಒಂದು ಅತೃಪ್ತಿ, ಅಸಂತೋಷದ ವಿಷಯವನ್ನಾಗಿ ಬಿಟ್ಟಿರುತ್ತದೆ.

ಕಳಪೆ ಪೌಷ್ಟಿಕಾಂಶಯುಕ್ತತೆಯ ಪ್ರಧಾನ ಫ‌ಲಿತಾಂಶ ಎಂದರೆ ಅಪೌಷ್ಟಿಕತೆ ಅಥವಾ ಅತೀ ಪೌಷ್ಟಿಕತೆ (ಅಥವಾ ಬೊಜ್ಜು). ಚೆನ್ನಾಗಿ ಸಮತೋಲಿತವಾಗಿರುವ ಆಹಾರ ಕ್ರಮವು ಕಾರ್ಬೋಹೈಡ್ರೇಟ್‌ಗಳು, ಪ್ರೊಟೀನ್‌, ಕೊಬ್ಬುಗಳಂತಹ ಬೃಹತ್‌ ಪೌಷ್ಟಿಕಾಂಶಗಳು ಹಾಗೂ ವಿಟಮಿನ್‌ಗಳು, ಖನಿಜಾಂಶಗಳಂತಹ ಸೂಕ್ಷ್ಮ ಪೌಷ್ಟಿಕಾಂಶಗಳು, ನೀರು, ನಾರಿನಂಶ ಇತ್ಯಾದಿಗಳನ್ನು ಸರಿಯಾದ ಪ್ರಮಾಣದಲ್ಲಿ ಹೊಂದಿರಬೇಕು. ವಯಸ್ಸಾಗುತ್ತಿದ್ದಂತೆ ಕ್ಯಾಲೊರಿ ಅಗತ್ಯ ಕಡಿಮೆಯಾಗುವುದರಿಂದಾಗಿ ಸೇವಿಸುವ ಆಹಾರದ ಪ್ರಮಾಣ ಕಡಿಮೆಯಾಗಬೇಕೇ ವಿನಾ ಗುಣಮಟ್ಟ ಕಳಪೆಯಾಗಬಾರದು ಎಂಬುದನ್ನು ನಾವು ನೆನಪಿನಲ್ಲಿ ಇರಿಸಿ ಕೊಳ್ಳಬೇಕು. ಸೂಕ್ತ ಪ್ರಮಾಣದ ಕ್ಯಾಲೊರಿಗಳು ಮತ್ತು ಸೂಕ್ಷ್ಮ ಪೌಷ್ಟಿಕಾಂಶಗಳುಳ್ಳ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಚೆನ್ನಾಗಿ ಜಗಿಯಲು ಸಾಧ್ಯವಿಲ್ಲದಿರುವ ವೃದ್ಧರಿಗೆ ಕೆಲವು ಆಯ್ಕೆಗಳು ಇಲ್ಲಿವೆ:

ಹಾಲು, ಸೋಯಾ, ಪನೀರ್‌ ಇತ್ಯಾದಿ ಪ್ರೊಟೀನ್‌ ಅಂಶ ಸಮೃದ್ಧ ಆಹಾರಗಳು

 ಆಹಾರವನ್ನು ಸಣ್ಣಕ್ಕೆ ಕತ್ತರಿಸಬಹುದು, ಗಿವುಚಿ/ ಅರೆದು ಕೊಡಬಹುದು

 ತರಕಾರಿಗಳನ್ನು ಮೃದುವಾಗುವಂತೆ ಬೇಯಿಸಿ ನೀಡಬಹುದು

 ಬಾಳೆಹಣ್ಣು, ಪಪ್ಪಾಯಿ, ಮಾವು, ಬೇಯಿಸಿದ ಸೇಬು, ಪೇರ್‌ ಇತ್ಯಾದಿ

ಮೃದುವಾಗಿ ಬೇಯಿಸಿದ ಅನ್ನ, ಪೊಂಗಲ್‌/ ಖೀಚಡಿ, ಶ್ಯಾವಿಗೆ

ಮೊಟ್ಟೆಗಳು, ಹಣ್ಣಿನ ರಸಗಳು, ಸೂಪ್‌ ಗಳು, ಬ್ರೆಡ್‌ ಮತ್ತು ಹಾಲು (*ಮೂತ್ರಪಿಂಡ ಕಾಯಿಲೆ, ಹೃದಯ ವೈಫ‌ಲ್ಯ, ಸೋಡಿಯಂ ಅಂಶ ಕಡಿಮೆ ಇರುವವರು, ಪಿತ್ತಜನಕಾಂಗ ವೈಫ‌ಲ್ಯಕ್ಕೆ ಒಳಗಾಗಿರುವ ವಯೋವೃದ್ಧರಿಗೆ ವೈದ್ಯರು ದಿನಕ್ಕೆ ಒಂದು ಲೀಟರ್‌ಗಿಂತ ಕಡಿಮೆ ದ್ರವಾಹಾರ ಸೇವಿಸುವಂತೆ ಶಿಫಾರಸು ಮಾಡಿರುತ್ತಾರೆ. ಅಂಥವರು ವೈದ್ಯರ ಶಿಫಾರಸಿನಂತೆ ನಡೆದುಕೊಳ್ಳಬೇಕು).

-ಡಾ| ಶೀತಲ್‌ರಾಜ್‌ ಎಂ., ಕನ್ಸಲ್ಟೆಂಟ್‌ ಜೆರಿಯಾಟ್ರಿಕ್ಸ್‌ ಆ್ಯಂಡ್‌ ಪಾಲಿಯೇಟಿವ್‌ ಕೇರ್‌, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next