Advertisement

ಹಿರಿಯರಿಗೆ ಪೌಷ್ಟಿಕಾಂಶ ಸಮೃದ್ಧ ಆಹಾರ

03:34 PM Apr 30, 2017 | |

ಒಳ್ಳೆಯ, ಪೌಷ್ಟಿಕಾಂಶಭರಿತ ಆಹಾರ ಸೇವನೆ ಎಲ್ಲ ವಯಸ್ಸಿನವರಿಗೂ ಅತ್ಯಂತ ಪ್ರಾಮುಖ್ಯವಾದುದು. ನಿಮ್ಮ ಆರೋಗ್ಯ, ನಿಮ್ಮ ದೇಹ ಮತ್ತು ನಿಮ್ಮ ಯೋಗಕ್ಷೇಮದಲ್ಲಿ ನಿಮ್ಮ ದೈನಂದಿನ ಆಹಾರದ ಆಯ್ಕೆಗಳು ಗಮನಾರ್ಹ ವ್ಯತ್ಯಯಗಳನ್ನು ಉಂಟು ಮಾಡಬಲ್ಲವು. 

Advertisement

ಸಮತೋಲನಪೂರ್ಣವಾಗಿ ಚೆನ್ನಾಗಿ ಯೋಜಿತವಾಗಿರುವ ಮಿಶ್ರ ಆಹಾರ ವಸ್ತುಗಳನ್ನು ದಿನವೂ ಸೇವಿಸುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ, ಒಳ್ಳೆಯ ಆಹಾರ ಸೇವನೆಯು ಹೃದ್ರೋಗಗಳು, ಲಕ್ವಾ, ಟೈಪ್‌ 2 ಮಧುಮೇಹ, ಎಲುಬಿನ ಅನಾರೋಗ್ಯ, ಕೆಲವು ವಿಧದ ಕ್ಯಾನ್ಸರ್‌ಗಳು ಮತ್ತು ಅನೀಮಿಯಾ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ದೀರ್ಘ‌ಕಾಲಿಕ ಅನಾರೋಗ್ಯಗಳಲ್ಲಿ ಯಾವುದಾದರೂ ಒಂದು ನಿಮಗೆ ಈಗಾಗಲೇ ಇರುವುದಾದರೆ, ಒಳ್ಳೆಯ ಆಹಾರ ಸೇವಿಸುವುದು ಮತ್ತು ದೈಹಿಕವಾಗಿ ಸಕ್ರಿಯರಾಗಿರುವುದರಿಂದ ಆ ಅನಾರೋಗ್ಯವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಬಹುದು. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವುದು, ಕೊಲೆಸ್ಟರಾಲ್‌ ಆಧಿಕ್ಯವನ್ನು ಇಳಿಸುವುದು ಮತ್ತು ಮಧುಮೇಹವನ್ನು ನಿಭಾಯಿಸುವುದರಲ್ಲಿಯೂ ಆರೋಗ್ಯಕರ ಆಹಾರ ಸೇವನೆ ನೆರವಾಗುತ್ತದೆ.

ನಮ್ಮ ಸ್ನಾಯುಗಳು, ಎಲುಬುಗಳು, ಅಂಗಾಂಗಗಳು ಮತ್ತು ದೇಹದ ಇತರ ಭಾಗಗಳನ್ನು ಜೀವನಪೂರ್ತಿ ಆರೋಗ್ಯಕರವಾಗಿ ಇರಿಸಿಕೊಳ್ಳಲು ಬೇಕಾದ ಅಗತ್ಯ ಪೌಷ್ಟಿಕಾಂಶಗಳನ್ನು ಒಳ್ಳೆಯ ಆಹಾರ ಸೇವನೆ ಒದಗಿಸುತ್ತದೆ. ಈ ಪೌಷ್ಟಿಕಾಂಶಗಳೆಂದರೆ, ವಿಟಮಿನ್‌ಗಳು, ಖನಿಜಾಂಶಗಳು, ಪ್ರೊಟೀನ್‌ಗಳು, ಪಿಷ್ಟ, ಕೊಬ್ಬುಗಳು ಮತ್ತು ನೀರು.

ಒಳ್ಳೆಯ ಆಹಾರ ಸೇವನೆಯು ನಮ್ಮನ್ನು ಶಕ್ತಿಭರಿತರೂ ಆಗಿರಿಸುತ್ತದೆ. ಆಹಾರದಿಂದ ನಾವು ಪಡೆಯುವ ಶಕ್ತಿಯನ್ನು ಅಳೆಯುವ ಮಾನದಂಡ ಕ್ಯಾಲೊರಿ; ಇಂಥ ಕ್ಯಾಲೊರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ದಿನದುದ್ದಕ್ಕೂ ವಿವಿಧ ಕಾರ್ಯಚಟುವಟಿಕೆಗಳಲ್ಲಿ ನಿರತರಾಗಿರಲು ನಮ್ಮ ದೇಹಕ್ಕೆ ಅಗತ್ಯವಾದ ಇಂಧನವನ್ನು ನಾವು ದೇಹಕ್ಕೆ ಒದಗಿಸುತ್ತೇವೆ. ನಮಗೆ ಎಷ್ಟು ಕ್ಯಾಲೊರಿ ಅಗತ್ಯ ಎಂಬುದು ನಮ್ಮ ವಯಸ್ಸೆಷ್ಟು, ಪುರುಷನೇ ಅಥವಾ ಮಹಿಳೆಯೇ, ನಮ್ಮ ಎತ್ತರ ಮತ್ತು ತೂಕ ಹಾಗೂ ನಾವು ಎಷ್ಟು ಚಟುವಟಿಕೆಯಿಂದ ಇದ್ದೇವೆ ಅನ್ನುವುದನ್ನು ಆಧರಿಸಿರುತ್ತದೆ.  

ಆಹಾರದ ಆಯ್ಕೆ ದೇಹತೂಕವನ್ನು 
ಪ್ರಭಾವಿಸಬಲ್ಲುದು

ವಯಸ್ಸಾಗುತ್ತಿದಂತೆ ದೇಹತೂಕ ನಮ್ಮ ದುರ್ಬಲತೆಯನ್ನು ಪ್ರಭಾವಿಸಬಲ್ಲುದು.ನಮ್ಮ ದೈಹಿಕ ಚಟುವಟಿಕೆಗಳ ಪ್ರಮಾಣಕ್ಕೆ ಸರಿಯಾಗಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಕ್ಯಾಲೊರಿಗಳನ್ನು ಸೇವಿಸುವುದು ನಮ್ಮ ದೇಹತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಿರಿಯರಲ್ಲಿ ಅಧಿಕ ದೇಹತೂಕ ಕಳವಳಕ್ಕೆ ಕಾರಣವಾಗುತ್ತದೆ – ಏಕೆಂದರೆ ಅದು ಟೈಪ್‌ 2 ಮಧುಮೇಹ ಮತ್ತು ಹೃದ್ರೋಗಗಳಂತಹ ಅನಾರೋಗ್ಯಗಳು ಉಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಸಂದುಗಳಲ್ಲಿ ಸಮಸ್ಯೆಗಳಿಗೆ ಕಾರಣವಾಗಬಲ್ಲುದು. ನಮ್ಮ ದೈಹಿಕ ಚಟುವಟಿಕೆಗಳನ್ನು ನಡೆಸಲು ನಮ್ಮ ದೇಹಕ್ಕೆ ಎಷ್ಟು ಬೇಕೋ ಅದಕ್ಕಿಂತ ಹೆಚ್ಚು ಪ್ರಮಾಣದ ಕ್ಯಾಲೊರಿಗಳಿರುವ ಆಹಾರ ಸೇವಿಸುವುದು ಬೊಜ್ಜು ಸಂಚಯಗೊಳ್ಳಲು ದಾರಿಯಾಗುತ್ತದೆ. 

Advertisement

ವಯಸ್ಸು ಹೆಚ್ಚುತ್ತಿದ್ದಂತೆ ದೈಹಿಕ ಚಟುವಟಿಕೆಗಳು ಕಡಿಮೆಯಾದರೆ, ಆಗ ಸಮತೂಕವನ್ನು ಉಳಿಸಿಕೊಳ್ಳಲು ಕಡಿಮೆ ಕ್ಯಾಲೊರಿ ಸೇವಿಸಿದರೆ ಸಾಕು. ಪೌಷ್ಟಿಕಾಂಶಗಳು ಸಾಂದ್ರವಾಗಿರುವ ಆಹಾರ, ಅಂದರೆ ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ಕ್ಯಾಲೊರಿ ಕಡಿಮೆ ಇರುವ ಆಹಾರಗಳನ್ನು ಆರಿಸಿಕೊಂಡು ಸೇವಿಸಿದರೆ ಕ್ಯಾಲೊರಿ ಸೇವನೆಯನ್ನು ನಿಯಂತ್ರಣದಲ್ಲಿರಿಸಿಕೊಂಡು ದೇಹಕ್ಕೆ ಅಗತ್ಯವಿದ್ದಷ್ಟು ಪೌಷ್ಟಿಕಾಂಶಗಳನ್ನು ಪಡೆಯಲು ಸಾಧ್ಯ. 

ನಮ್ಮ ಆಹಾರದ ಆಯ್ಕೆ ನಮ್ಮ ಜೀರ್ಣಕ್ರಿಯೆಯ ಮೇಲೂ ಪ್ರಭಾವ ಬೀರುತ್ತದೆ. ಉದಾಹರಣೆಗೆ, ಅಗತ್ಯ ಪ್ರಮಾಣದಲ್ಲಿ ನಾರಿನಂಶಗಳು ಅಥವಾ ದ್ರವಾಂಶ ನಮ್ಮ ದೇಹವನ್ನು ಆಹಾರದ ಮೂಲಕ ಸೇರದೆ ಇದ್ದರೆ ಮಲಬದ್ಧತೆ ಉಂಟಾಗುತ್ತದೆ. ನಾರಿನಂಶ ಹೆಚ್ಚಿರುವ ಇಡೀ ಧಾನ್ಯಗಳ ಆಹಾರ, ಹಣ್ಣುಹಂಪಲು ಮತ್ತು ತರಕಾರಿಗಳು ಅಥವಾ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮಲಬದ್ಧತೆಯನ್ನು ದೂರವಿಡಲು ಸಹಕರಿಸುತ್ತವೆ. 

ಒಳ್ಳೆಯ, ಚೆನ್ನಾದ ಆಹಾರ ಸೇವನೆ ಎಂಬುದು ಕೇವಲ ಇಂದು ಆಚರಣೆಯಲ್ಲಿದ್ದು, ನಾಳೆ ಮಾಯವಾಗುವ “ಡಯಟ್‌’ ಅಥವಾ “ಕಾರ್ಯಕ್ರಮ’ವಲ್ಲ. ಅದು ಇಂದು ಅಳವಡಿಸಿಕೊಂಡು ಭವಿಷ್ಯದಲ್ಲಿ ನಮ್ಮದನ್ನಾಗಿ ಇರಿಸಿಕೊಳ್ಳುವ ಆರೋಗ್ಯಪೂರ್ಣ ಜೀವನ ಶೈಲಿಯ ಅವಿಭಾಜ್ಯ ಅಂಗವಾಗಿದೆ. 
ಒಳ್ಳೆಯ ಆರೋಗ್ಯಕ್ಕಾಗಿ ಒಳ್ಳೆಯ ಆಹಾರ ಸೇವನೆಯ ನಿಟ್ಟಿನಲ್ಲಿ ನೀವು ಒಮ್ಮೆಗೆ ಒಂದು ಆಹಾರ ಬದಲಾವಣೆ ಮಾಡಿಕೊಳ್ಳುವಂತಹ ಪುಟ್ಟಪುಟ್ಟ ಹೆಜ್ಜೆಗಳನ್ನಿಡುತ್ತ ಮುಂದುವರಿಯಬಹುದು. ಉದಾಹರಣೆಗೆ ನೀವು, 

ಉಪ್ಪಿನ ಡಬ್ಬಿಯನ್ನು ಊಟದ ಮೇಜಿನಿಂದ ದೂರ ಸರಿಸಿ. ಉಪ್ಪು ಸೇವನೆಯ ಪ್ರಮಾಣವನ್ನು ನಿಧಾನವಾಗಿ ಕಡಿತಗೊಳಿಸುವುದರಿಂದ ಅದಕ್ಕೆ ನಿಮಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ. 

ಖಾದ್ಯವಸ್ತುಗಳಿಗಾಗಿ ಶಾಪಿಂಗ್‌ ಮಾಡುವಾಗ ಇಡೀ ಧಾನ್ಯದ ಬ್ರೆಡ್‌, ಸಮುದ್ರ ಆಹಾರ ಅಥವಾ ತರಕಾರಿ ಕೊಳ್ಳುವುದನ್ನು ಹೆಚ್ಚಿಸಿ. 

ಇಂತಹ ಸಣ್ಣಪುಟ್ಟ ಬದಲಾವಣೆಗಳು ನೀವು ಆಲೋಚಿಸದ್ದಕ್ಕಿಂತ ಹೆಚ್ಚು ಸುಲಭ ಅನಿಸುತ್ತವೆ. ಶಾಪಿಂಗ್‌ ಮಾಡುವಾಗ ಅಥವಾ ಅಡುಗೆ ಮಾಡುವಾಗ ಅಥವಾ ನಿಮ್ಮ ಬಜೆಟ್‌ ಕಡಿಮೆಯಿದ್ದಾಗಲೂ ಕೂಡ ಇಂತಹ ಬದಲಾವಣೆಗಳು ಸಾಧ್ಯವಾಗುತ್ತವೆ. 

ಹಿರಿಯರಿಗಾಗಿ ಚುರುಕಾದ 
ಸಲಹೆಗಳು:

-ನಾರಿನಂಶ ಹೆಚ್ಚಿರುವ ಆಹಾರವಸ್ತುಗಳ ಆಯ್ಕೆಯನ್ನು ಹೆಚ್ಚಿಸಿ. 
-ಬೆರೆಸಿದ ಸಕ್ಕರೆ ಅಂಶ ಕಡಿಮೆ ಇರುವ ಪಾನೀಯಗಳು ಮತ್ತು ನೀರು ಕುಡಿಯುವುದನ್ನು ಹೆಚ್ಚಿಸಿ. 
-ನಿಮ್ಮ ವಿಟಮಿನ್‌ ಡಿ ಮತ್ತು ವಿಟಮಿನ್‌ ಬಿ12 ಅಗತ್ಯವನ್ನು ಪೂರೈಸಲು ಫೋರ್ಟಿಫೈಡ್‌ ಆಹಾರ ಅಥವಾ ಪೂರಕ ಆಹಾರಗಳನ್ನು ಉಪಯೋಗಿಸಿ.

ತರಕಾರಿಗಳು
ವೈವಿಧ್ಯವಿರಲಿ

-ಬ್ರಾಕೊಲಿ, ಹಸಿ ತರಕಾರಿ ಸಲಾಡ್‌, ಬೇಯಿಸಿದ ಹಸುರು ತರಕಾರಿ ಇತ್ಯಾದಿಯಾಗಿ ಕಡು ಹಸುರು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ. 
-ಕ್ಯಾರೆಟ್‌, ಗೆಣಸಿನಂತಹ ಕಿತ್ತಳೆ ವರ್ಣದ ತರಕಾರಿಗಳ ಬಳಕೆ ಅಧಿಕವಾಗಲಿ. 
-ಕಪ್ಪು ಮತ್ತು ಬಿಳಿಗಡಲೆ, ತೊಗರಿ, ರಾಜ್ಮಾ, ಅವರೆಗಳಂತಹ ಒಣ ಬೀಜಗಳು ಮತ್ತು ಬಟಾಣಿಗಳ ಉಪಯೋಗ ಹೆಚ್ಚಿಸಿ.
-ದಿನಕ್ಕೆ ಎರಡೂವರೆ ಕಪ್‌ಗ್ಳಷ್ಟು ಸೇವಿಸಿ

ಹಣ್ಣುಹಂಪಲು 
ಹಣ್ಣುಗಳ ಮೇಲೆ ಗಮನಹರಿಸಿ

-ಬಾಳೇಹಣ್ಣು, ಬಗೆಬಗೆಯ ಬೆರಿಗಳು, ದ್ರಾಕ್ಷಿ, ಕಿತ್ತಳೆಯಂತಹ ವೈವಿಧ್ಯಮಯ ಹಣ್ಣುಗಳನ್ನು ಸೇವಿಸಿ.
-ತಾಜಾ, ಶೀತಲೀಕರಿಸಿದ, ಕಾದಿರಿಸಿದ ಅಥವಾ ಒಣ ಹಣ್ಣುಗಳನ್ನು ಆಯ್ದುಕೊಳ್ಳಿ.
-ಹಣ್ಣುಗಳ ರಸವನ್ನು ಸೇವಿಸುವುದಕ್ಕಿಂತ ಹಣ್ಣುಗಳನ್ನು ಹಾಗೆಯೇ ತಿನ್ನುವುದು ಉತ್ತಮ.
-ಪ್ರತಿದಿನ ಒಂದೂವರೆ ಕಪ್‌ನಷ್ಟು ಸೇವಿಸಿ

ಧಾನ್ಯಗಳು
ಇಡೀ ಧಾನ್ಯಗಳು ಹೆಚ್ಚಿರಲಿ

-ಇಡೀ ಧಾನ್ಯಗಳ ಸೀರಿಯಲ್‌ಗ‌ಳು, ಬ್ರೆಡ್‌, ಅನ್ನ, ಗರಿಮುರಿ ತಿಂಡಿ ಅಥವಾ ದೋಸೆಗಳನ್ನು ಪ್ರತೀ ದಿನ ಸೇವಿಸಿ. 
-ಒಂದು ಸ್ಲೆ„ಸ್‌ ಇಡೀ ಕಾಳಿನ ಬ್ರೆಡ್‌, ಒಂದು ಕಪ್‌ನ ತಣ್ಣನೆಯ ಬ್ರೇಕ್‌ಫಾಸ್ಟ್‌ ಸೀರಿಯಲ್‌ ಅಥವಾ ಅರ್ಧ ಕಪ್‌ ಬೇಯಿಸಿದ ಸೀರಿಯಲ್‌, ಅನ್ನ ಅಥವಾ ದೋಸೆ.
-ವಿಟಮಿನ್‌ ಬಿ12ಯುಕ್ತ ಸೀರಿಯಲ್‌ಗ‌ಳನ್ನು ಸೇವಿಸಿ.

ಪ್ರೊಟೀನ್‌ಯುಕ್ತ ಆಹಾರ
ಅಧಿಕ ಪ್ರೊಟೀನ್‌ ಇರಲಿ

-ಕಡಿಮೆ ಕೊಬ್ಬು ಇರುವ ಅಥವಾ ತೆಳುವಾದ ಮಾಂಸ ಮತ್ತು ಕೋಳಿಮಾಂಸ ಆಯ್ದುಕೊಳ್ಳಿ.
-ಆಹಾರವನ್ನು ಹಬೆಯಲ್ಲಿ ಬೇಯಿಸಿ, ಬ್ರಾಯಿಲ್‌ ಮಾಡಿ ಅಥವಾ ಗ್ರಿಲ್‌ ಮಾಡಿ ಸೇವಿಸಿ.
-ನಿಮ್ಮ ಪ್ರೊಟೀನ್‌ಯುಕ್ತ ಆಹಾರ ಮೂಲಗಳಲ್ಲಿ ವೈವಿಧ್ಯ ಇರಲಿ. ಮೊಟ್ಟೆಗಳು, ಒಣ ಬೀಜಗಳು, ಸೊಯಾ ಮೊಸರು, ಮೀನು, ಬೀಜಗಳು ಮತ್ತು ಬೀಜಗಳನ್ನು ಹೆಚ್ಚು ಉಪಯೋಗಿಸಿ.

ಹೈನು ಉತ್ಪನ್ನಗಳು
ಕ್ಯಾಲ್ಸಿಯಂ ಸಮೃದ್ಧ ಆಹಾರ ಮೂಲ

-ಕಡಿಮೆ ಕೊಬ್ಬು ಹೊಂದಿರುವ ಅಥವಾ ಕೊಬ್ಬು ತೆಗೆದ ಹಾಲು, ಮೊಸರು ಅಥವಾ ಹಾಲಿನ ಉತ್ಪನ್ನಗಳನ್ನು ಆಯ್ದುಕೊಳ್ಳಿ.
-ಹಾಲನ್ನು ಸೇವಿಸುವುದು ಸಾಧ್ಯವಿಲ್ಲದಿದ್ದರೆ, ಲ್ಯಾಕ್ಟೋಸ್‌ ಮುಕ್ತ ಅಥವಾ ಇತರ ಫೋರ್ಟಿಫೈಡ್‌ ಆಹಾರಗಳು, ಪಾನೀಯಗಳಂತಹ ಕ್ಯಾಲ್ಸಿಯಂ ಮೂಲಗಳನ್ನು ಬಳಸಿ. 
-ಪ್ರತೀ ದಿನ 3 ಕಪ್‌ ಸೇವಿಸಿ.

ಸರಿಯಾದುದನ್ನು, ಸರಿಯಾಗಿ ಸೇವಿಸಿ
-ನಿಮ್ಮ ಜೀರ್ಣಕ್ರಿಯೆ ಮತ್ತು ದೇಹಕ್ರಿಯೆಗಳನ್ನು ಚೆನ್ನಾಗಿ ಇರಿಸಿಕೊಳ್ಳಲು ನಾರಿನಂಶ ಸಮೃದ್ಧವಾಗಿರುವ ಆಹಾರ ವಸ್ತುಗಳನ್ನು ಆರಿಸಿ ಉಪಯೋಗಿಸಿ.
-ದೇಹದಲ್ಲಿ ಯಾವಾಗಲೂ ದ್ರವಾಂಶ ಚೆನ್ನಾಗಿರುವಂತೆ ನೀರು ಮತ್ತು ದ್ರವಾಹಾರಗಳನ್ನು ಸಾಕಷ್ಟು ಕುಡಿಯಿರಿ.
-ಬರೇ ಕ್ಯಾಲೊರಿಗಳು ದೇಹ ಸೇರುವುದನ್ನು ತಡೆಯಲು ಸಕ್ಕರೆ, ಸಿಹಿ ತಿನಿಸುಗಳ ಸೇವನೆಯನ್ನು ನಿಯಂತ್ರಣದಲ್ಲಿ ಇರಿಸಿ.
-ದೇಹಕ್ಕೆ ಬೇಕಾದ ಎಣ್ಣೆಯಂಶವನ್ನು ಮೀನು, ಎಣ್ಣೆಬೀಜಗಳು ಮತ್ತು ಕ್ಯಾನೊಲಾ, ಆಲಿವ್‌ ಅಥವಾ ಸೋಯಾಬೀನ್‌ ಎಣ್ಣೆಗಳಿಂದ ಪಡೆಯಿರಿ.
-ಕಡಿಮೆ ಉಪ್ಪು ಅಥವಾ ಸೋಡಿಯಂ ಉಪಯೋಗಿಸಿ ಅಡುಗೆ ಮಾಡಿ ಅಥವಾ ಅವು ಕಡಿಮೆ ಇರುವ ಆಹಾರ ಆರಿಸಿಕೊಳ್ಳಿ.
-ನೀವು ತೆಗೆದುಕೊಳ್ಳುತ್ತಿರುವ ಪೂರಕ ಆಹಾರಗಳ ಬಗ್ಗೆ ನಿಮ್ಮ ವೈದ್ಯರು ಅಥವಾ ಫಾರ್ಮಾಸಿಸ್ಟ್‌ ಬಳಿ ಸಮಾಲೋಚಿಸಿ. 

ಚಟುವಟಿಕೆಯಿಂದಿರಿ
-ದಿನವೂ ವಾಕಿಂಗ್‌ ಮಾಡಿ.
-ಮೊಮ್ಮಕ್ಕಳು, ಸಾಕುಪ್ರಾಣಿಗಳ ಜತೆಗೆ ಆಟವಾಡಿ.
-ಮನೆಯ ಹಿತ್ತಿಲು ಅಥವಾ ಉದ್ಯಾನದಲ್ಲಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಕೊಳ್ಳಿ.
-ಸಮುದಾಯ ಕೇಂದ್ರ ಅಥವಾ ವ್ಯಾಯಾಮ ಶಾಲೆಯಲ್ಲಿ ವ್ಯಾಯಾಮ ಅಥವಾ ನೃತ್ಯ ತರಬೇತಿ ಪಡೆಯಿರಿ.
-ಗೆಳೆಯ ಗೆಳತಿಯರು, ಕುಟುಂಬ ಸದಸ್ಯರ ಜತೆಗೆ ತಮಾಷೆಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
-ನೆನಪಿಡಿ: ಎಲ್ಲ ಚಟುವಟಿಕೆಗಳೂ ಮುಖ್ಯವೇ! ಎಲ್ಲವನ್ನೂ ಒಮ್ಮೆಗೇ ಮಾಡಬೇಕೆಂದಿಲ್ಲ, ಒಂದೊಂದಾಗಿ ಮಾಡಿ. 

ಸಂತಸದ ಜೀವನ ನಡೆಸಿ
ನಿಮ್ಮ ಬಗ್ಗೆ ಪ್ರೀತಿ, ಒಲುಮೆ ತೋರುವ ಸಂಗಡಿಗರ ಜತೆಗೆ ನಿಮಗೆ ಸಂತೋಷ, ಸಂತೃಪ್ತಿ ಕೊಡುವ ಚಟುವಟಿಕೆಗಳಲ್ಲಿ ತೊಡಗಿ.

ಸುವರ್ಣಾ ಹೆಬ್ಟಾರ್‌,   
ವಿಭಾಗ ಮುಖ್ಯಸ್ಥರು, ನ್ಯೂಟ್ರಿಶನ್‌ ಮತ್ತು ಡಯಟೆಟಿಕ್ಸ್‌ ವಿಭಾಗ,
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.

 

Advertisement

Udayavani is now on Telegram. Click here to join our channel and stay updated with the latest news.

Next