Advertisement

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

05:27 PM Apr 16, 2024 | Team Udayavani |

ಹದಿಹರಯ ಎಂಬುದು ಮಗು ಪ್ರೌಢಾವಸ್ಥೆ ತಲುಪಿದಲ್ಲಿಂದ ಯೌವ್ವನವನ್ನು ಮುಟ್ಟುವ ವರೆಗಿನ ಕಾಲಾವಧಿ. ಪ್ರೌಢ ಮನುಷ್ಯನೊಬ್ಬನ ಬದುಕಿನಲ್ಲಿ ಈ ಅವಧಿಯನ್ನು ಚಿನ್ನದಂತಹ ಸಮಯ ಎಂದು ಪರಿಗಣಿಸಲಾಗುತ್ತದೆ.

Advertisement

ಈ ಅವಧಿಯಲ್ಲಿ ಮಕ್ಕಳು ಎತ್ತರ ಮತ್ತು ತೂಕದಲ್ಲಿ ಹೆಚ್ಚಳದ ಜತೆಗೆ ಇತರ ಹಾರ್ಮೋನ್‌ ಬದಲಾವಣೆಗಳನ್ನು ಅನುಭವಿಸುತ್ತಾರೆ. ಹದಿಹರಯದವರು ಬಹಳ ಸುಲಭವಾಗಿ ಇತರರಿಂದ, ಜಾಹೀರಾತುಗಳಿಂದ ಪ್ರಭಾವಕ್ಕೊಳಗಾಗುತ್ತಾರೆ, ಈ ಸಮಯದಲ್ಲಿ ಬಾಹ್ಯ ಅಂಶಗಳ ಪ್ರಭಾವಕ್ಕೆ ಒಳಗಾಗುವುದರಿಂದ ಒತ್ತಡ, ಖನ್ನತೆ, ಚಿಂತೆಯನ್ನು ಅನುಭವಿಸುತ್ತಾರೆ. ತಮ್ಮ ಗೆಳೆಯ-ಗೆಳತಿಯರಂತೆ ಇರಬೇಕು ಎಂದು ಬಯಸುವುದರಿಂದಾಗಿ ಬಹಳ ಸಪೂರ ಅಥವಾ ತೀರಾ ದಪ್ಪ ಆಗುತ್ತಾರೆ. ಇದಕ್ಕಾಗಿ ಅವರು ಕ್ರ್ಯಾಶ್‌ ಡಯಟ್‌, ಸೆಲ್ಫ್-ಎಮೆಸಿಸ್‌, ವೈದ್ಯರ ಸಲಹೆ ಪಡೆಯದೆಯೇ ತೂಕ ಗಳಿಸುವ ಅಥವಾ ಕಳೆದುಕೊಳ್ಳುವ ಔಷಧಗಳನ್ನು ತೆಗೆದುಕೊಳ್ಳುವುದು ಇತ್ಯಾದಿಗಳನ್ನು ಮಾಡುವ ಮೂಲಕ ಪೌಷ್ಟಿಕಾಂಶ ಕೊರತೆಗೆ ಒಳಗಾಗುತ್ತಾರೆ, ವೈದ್ಯಕೀಯ ಸಲಹೆ- ಆರೈಕೆ ಅಗತ್ಯವಾಗುವಂತಹ ಮಾನಸಿಕ ತೊಂದರೆಗಳಿಗೆ ತುತ್ತಾಗುತ್ತಾರೆ.

ಸಹಜ ಆರೋಗ್ಯದ ಹದಿಹರಯದ ವ್ಯಕ್ತಿಯೊಬ್ಬರು ಒಂದು ದಿನಕ್ಕೆ 1,800ರಿಂದ 3,000 ಕೆಸಿಎಎಲ್‌ ಮತ್ತು 35ರಿಂದ 60 ಗ್ರಾಂ ಪ್ರೊಟೀನ್‌ ಹಾಗೂ ಹಾಲು ಮತ್ತು ಹಾಲಿನ ಉತ್ಪನ್ನಗಳು, ತರಕಾರಿಗಳು, ಹಸುರು ಹದಿಹರಯದಲ್ಲಿ ಸೊಪ್ಪು ತರಕಾರಿಗಳು, ಕೊಬ್ಬುಗಳು ಮತ್ತು ಎಣ್ಣೆಕಾಳುಗಳು, ನಾರಿನಂಶದಂತಹ ಎಲ್ಲ ಆಹಾರ ವರ್ಗಗಳಿಂದ ಆಹಾರ ವಸ್ತುಗಳನ್ನು ಮತ್ತು ನೀರನ್ನು ಸೇವಿಸಬೇಕು. ಮೇಲೆ ಹೇಳಲಾದ ಎಲ್ಲ ಆಹಾರ ವರ್ಗಗಳ ಆಹಾರವಸ್ತುಗಳನ್ನು ಒಳಗೊಂಡಿರುವ ಸಮತೋಲಿತ ಆಹಾರ ಮತ್ತು ಯಾವುದೇ ವಿಧವಾದ ನಿಯಮಿತ ದೈಹಿಕ ಚಟುವಟಿಕೆಗಳು ಆರೋಗ್ಯಪೂರ್ಣವಾಗಿ ಇರುವುದಕ್ಕೆ ಮುಖ್ಯ. ಅತಿಯಾದ ಆಹಾರ ಸೇವನೆಯಿಂದ ಅಧಿಕ ದೇಹತೂಕವೂ ಕಡಿಮೆ ಆಹಾರ ಸೇವನೆಯಿಂದ ಪೌಷ್ಟಿಕಾಂಶ ಕೊರತೆಯೂ ಉಂಟಾಗಬಹುದು.

ಬೆಳಗ್ಗೆ ಉತ್ತಮವಾದ, ಆರೋಗ್ಯಪೂರ್ಣವಾದ ಉಪಾಹಾರವನ್ನು ಸೇವಿಸುವುದು ಆರೋಗ್ಯಯುತವಾಗಿ ಇರುವುದಕ್ಕೆ ಮೊದಲ ಹೆಜ್ಜೆ. ಇಂತಹ ಬೆಳಗಿನ ಉಪಾಹಾರವು ಮಕ್ಕಳನ್ನು ಜಾಗೃತ ಸ್ಥಿತಿಯಲ್ಲಿ ಇರಿಸುತ್ತದೆ ಮಾತ್ರವಲ್ಲದೆ ಮುಂದಿನ ಊಟ-ಉಪಾಹಾರದ ಸಂದರ್ಭದಲ್ಲಿ ಅತಿಯಾಗಿ ಆಹಾರ ಸೇವಿಸದಂತೆ ತಡೆಯುತ್ತದೆ.

ಊಟ-ಉಪಾಹಾರಗಳ ನಡು ನಡುವೆ ಒಂದು ಹಣ್ಣು ಅಥವಾ ಒಂದು ಹಿಡಿ ಒಣಹಣ್ಣು ಸೇವಿಸುವುದರಿಂದ ಮಕ್ಕಳು ಸಕ್ರಿಯರಾಗಿರುತ್ತಾರೆ. ಕಾಬೊìಹೈಡ್ರೇಟ್‌ ಗಳು, ಪ್ರೊಟೀನ್‌ಗಳು, ತರಕಾರಿಗಳು, ಹಾಲಿನ ಉತ್ಪನ್ನಗಳನ್ನು ಒಳಗೊಂಡಿರುವ ಸಮತೋಲಿತ ಮಧ್ಯಾಹ್ನದ ಉಪಾಹಾರವು ಶಾಲೆಯಲ್ಲಿ ಉಳಿದ ಅವಧಿಗೆ ಅವರಿಗೆ ಬೇಕಾದ ಇಂಧನವನ್ನು ಒದಗಿಸುತ್ತದೆ.

Advertisement

ಸಂಜೆ ಲಘು ಉಪಾಹಾರ, ಆ ಬಳಿಕ ಯಾವುದೇ ಸ್ವರೂಪದ ದೈಹಿಕ ಚಟುವಟಿಕೆಗಳು ಅವರಿಗೆ ಶಾಲೆ ಕೆಲಸ, ಮನೆಗೆಲಸ, ಅಧ್ಯಯನದಲ್ಲಿ ಏಕಾಗ್ರತೆಯನ್ನು ಒದಗಿಸಿಕೊಡುತ್ತವೆ. ಇದಾದ ಬಳಿಕ ಬೇಗನೆ ಲಘುವಾದ ರಾತ್ರಿಯ ಭೋಜನ ಒದಗಿಸಬೇಕು.

ಸಾಮಾನ್ಯವಾಗಿ ರಾತ್ರಿ ನಿದ್ದೆ ಹೋಗುವುದಕ್ಕಿಂತ ಎರಡು ತಾಸು ಮುಂಚಿತವಾಗಿ ರಾತ್ರಿಯೂಟ ಮಾಡುವುದು ಹಿತಕರ. ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಸರಿಯಾದ ಪೌಷ್ಟಿಕಾಂಶಗಳನ್ನು ಹೊಂದಿರುವ ಆಹಾರ ಸೇವನೆಯು ಆರೋಗ್ಯಪೂರ್ಣ ಜೀವನ ನಡೆಸುವುದರ ಒಳಗುಟ್ಟು ಆಗಿದೆ.

ಅರುಣಾ ಮಲ್ಯ,

ಹಿರಿಯ ಪಥ್ಯಾಹಾರ ತಜ್ಞೆ,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next