Advertisement

ಅಡಕೆಗೆ ಪೋಷಕಾಂಶ ಕೊರತೆ

03:20 PM Jun 28, 2020 | Suhan S |

ರಾಣಿಬೆನ್ನೂರ: ಲಘು ಪೋಷಕಾಂಶ ಕೊರತೆ, ಅತೀ ಹೆಚ್ಚು ಕೆರೆ ಮಣ್ಣನ್ನು ತೋಟಗಳಲ್ಲಿ ಹಾಕಿದಾಗ ಅಡಕೆ ತೋಟಗಳಲ್ಲಿ ಕಾಯಿ ಮತ್ತು ಈಚು ಉದುರುವ ಸಮಸ್ಯೆ ಕಂಡು ಬರುತ್ತದೆ ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ| ಅಶೋಕ ಪಿ. ಹೇಳಿದರು.

Advertisement

ತಾಲೂಕಿನ ಮೆಣಸಿನಹಾಳ ಹಾಗೂ ತಿಮ್ಮೇನಹಳ್ಳಿ ಗ್ರಾಮದ ಪ್ರಗತಿಪರ ರೈತರಾದ ತಿಮ್ಮಪ್ಪ ಮೆಣಸಿನಾಳ ಮತ್ತು ಚಂದ್ರಪ್ಪ ಅವರ ಅಡಕೆ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು.

ಹಿರೇಕೆರೂರ ಮತ್ತು ಹಾನಗಲ್‌ ತಾಲೂಕಿನಲ್ಲೂ ಅಡಕೆ ಕೃಷಿಯನ್ನು ರೈತರು ಕೈಗೊಳ್ಳುತ್ತಿದ್ದು, ಕಾಯಿ ಮತ್ತು ಈಚು ಉದುರುವ ಸಮಸ್ಯೆ ಸಾಮಾನ್ಯವಾಗಿದೆ ಎಂದರು. ಇದಕ್ಕೆ ಕಾರಣಗಳು ಹಲವು ಇದ್ದು. ಅವುಗಳಲ್ಲಿ ಮುಖ್ಯವಾಗಿ ನೀರು ಬಸಿಯದೇ ಇರುವ ತೋಟಗಳಲ್ಲಿ ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣಾಂಶವಿದ್ದಾಗ ಒಮ್ಮೊಮ್ಮೆ ತೇವಾಂಶದ ಕೊರತೆಯೂ ಈ ಸಮಸ್ಯೆಗೆ ಕಾರಣ. ತೋಟಗಳಲ್ಲಿ ಬಹಳ ದೀರ್ಘ‌ವಾಗಿ ನೀರು ಬಿಡದೇ ಒಮ್ಮೆಲೇ ಹೆಚ್ಚು ನೀರು ಕೊಟ್ಟಾಗ ಅಥವಾ ಅತಿಯಾದ ಮಳೆಯಾದಾಗ ಕಾಯಿ ಮತ್ತು ಈಚು ಉದುರುವ ಸಮಸ್ಯೆ ಕಂಡು ಬರುತ್ತದೆ ಎಂದರು.

ಮಣ್ಣು ವಿಜ್ಞಾನಿ ಡಾ| ರಾಜಕುಮಾರ ಜಿ.ಆರ್‌ ಮಾತನಾಡಿ, ಇದರ ನಿರ್ವಹಣೆಗೆ ಸಮತೋಲನದಿಂದ ಪೋಷಕಾಂಶ ಪೂರೈಸಬೇಕು. ಪೋಟ್ಯಾಷ-150 ಗ್ರಾಂ, ಬೋರಾಕ್ಸ್‌-25 ಗ್ರಾಂ, ಸತುವಿನ ಸಲ್ಪೇಟ್‌-50 ಗ್ರಾಂ ಪ್ರತಿ ಮರಕ್ಕೆ ನೀಡಬೇಕು. ಮರದ ಸುತ್ತಲೂ ಗುಣಿ ಮಾಡಿ ತಿಪ್ಪೆಗೊಬ್ಬರ ಅಥವಾ ಎರೆಹುಳು ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಈ ಪೋಷಕಾಂಶಗಳನ್ನು ನೀಡಬೇಕು. ನೀರು ಬಸಿಯದ ತೋಟಗಳಲ್ಲಿ ಬಸಿಗಾಲುವೆಗಳ ನಿರ್ಮಾಣ ಮಾಡಬೇಕು. ಈಗಾಗಲೇ ಕೆರೆಗೋಡು ಹಾಕಿರುವ ತೋಟಗಳಲ್ಲಿ ಹಸಿರೆಲೆ ಗೊಬ್ಬರದ ಬಳಕೆ, ಹೆಚ್ಚು ಸಾವಯವ ಪರಿಕರಗಳನ್ನು ಬಳಸುವುದು ಜೀವಾಮೃತ ಹಾಕಬೇಕು ಎಂದರು.

ಬೇರುಗಳ ಬೆಳವಣಿಗೆ ವೃದ್ಧಿಸಲು ಗೊಬ್ಬರವನ್ನು 20ಗ್ರಾಂ ಪ್ರತಿಗಿಡಕ್ಕೆ ನೀಡಿ, ಬೇಸಿಗೆಯಲ್ಲಿ ಸಮನಾಗಿ ಹನಿ ನೀರವರಿ ಮೂಲಕ ತೇವಾಂಶ ನಿರ್ವಹಿಸುವುದು ಒಳಿತು. ಶಿಫಾರಸ್ಸಿನ ಗೊಬ್ಬರವನ್ನುಜೂನ್‌-ಜುಲೈ ಮತ್ತು ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಲ್ಲಿ ಕೊಡಬೇಕು. ಜನೆವರಿಯಲ್ಲಿ ಹೊಸ ಸಿಂಗಾರ ಬಂದಾಗ ಲಘು ಪೋಷಕಾಂಶದ ಮಿಶ್ರಣವನ್ನು ಪ್ರತಿ ಲೀಟರ್‌ ನೀರಿಗೆ 0.5 ಗ್ರಾಂ ಬೆರೆಸಿ ಸಿಂಪಡಿಸಿ ಎಂದರು. ನಗರದ ಎನ್‌ಜಿಒ ಸಂಸ್ಥೆಯ ವನಸಿರಿ ಅಧಿಕಾರಿ ಶಂಶುದ್ದೀನ ಬಳಿಗಾರ ಸೇರಿದಂತೆ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next