ಉಪ್ಪಿನಂಗಡಿ: ಅಡಿಕೆ ಕಳವು ಪ್ರಕರಣವನ್ನು ವಾರದೊಳಗೆ ಬೇಧಿಸಿರುವ ಉಪ್ಪಿನಂಗಡಿ ಪೊಲೀಸರು ಓರ್ವನನ್ನು ಬಂಧಿಸಿ, ಆತನಿಂದ 1 ಕಾರು ಸಹಿತ ಒಟ್ಟು 4.25 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೌಕ್ರಾಡಿ ಗ್ರಾಮದ ನೆಲ್ಯಾಡಿ ಬಳಿಯ ಕುಂಡಡ್ಕ ನಿವಾಸಿ ಸರ್ಪ ರಾಜ್ ಯಾನೆ ಹುಸೈನ್ ಸರ್ಫ್ರಾಜ್ (30) ಬಂಧಿತ ಆರೋಪಿ. ಈತನ ನೆರೆಮನೆಯವನಾದ ಅಶ್ಫಾಕ್ ಪೊಲೀಸರ ಕಾರ್ಯಾಚರಣೆ ಸಂದರ್ಭ ತಪ್ಪಿಸಿಕೊಂಡಿದ್ದಾನೆ.
ಮಠದ ಕೆರೆಮೂಲೆ ನಿವಾಸಿ ಮಹಮ್ಮದ್ ಹನೀಫ್ ಅವರ ನೆಲ್ಯಾಡಿ ಯಲ್ಲಿರುವ ಎಚ್. ಎನ್. ಸುಪಾರಿ ಟ್ರೇಡರ್ನಿಂದ ಮಾ.25ರಂದು ರಾತ್ರಿ ಅಂಗಡಿಯ ಮಾಡಿನ ಹಂಚು ತೆಗೆದು ಒಳ ನುಗ್ಗಿದ ಆರೋಪಿಗಳು 520 ಕೆ.ಜಿ. ಅಡಿಕೆ ಕಳವು ಮಾಡಿದ್ದರು. ಸೋಮವಾರ ಬೆಳಗ್ಗೆ ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ಬೆಳಕಿಗೆ ಬಂದಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿತ್ತು.
ಕಳ್ಳರ ಪತ್ತೆಗಾಗಿ ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕ ನಂದ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ, ತನಿಖೆ ಕೈಗೆತ್ತಿಕೊಂಡಿದ್ದರು. ಮಾ. 31ರಂದು ಮುಂಜಾನೆ ಬಿಳಿಯೂರು ಕಡೆಯಿಂದ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಅಡಿಕೆ ತುಂಬಿಸಿಕೊಂಡು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉಪ್ಪಿನಂಗಡಿ ಪೊಲೀಸರು 34ನೇ ನೆಕ್ಕಿಲಾಡಿ ಗ್ರಾಮದ ಕರುವೇಲುನಲ್ಲಿ ಕಾರನ್ನು ತಡೆದು ನಿಲ್ಲಿಸಿದಾಗ, ಅಡಿಕೆ ಇರುವುದು ಪತ್ತೆಯಾಗಿತ್ತು. ವಿಚಾರಣೆ ನಡೆಸಿದಾಗ ಇದನ್ನು ನೆಲ್ಯಾಡಿಯ ಅಂಗಡಿಯಿಂದ ಕಳವುಗೈದಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಬಂಧಿತ ಸರ್ಪರಾಜ್ ವಿದೇಶದಿಂದ ಬಂದಿದ್ದು, ಕಳ್ಳತನವಾದ ಅಡಿಕೆ ಅಂಗಡಿಯಿದ್ದ ಕಟ್ಟಡದ ಮಾಲಕನಾಗಿದ್ದಾನೆ.
ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಜಿತ್ ಕುಮಾರ್, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಶ್ರೀನಿವಾಸ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಎಂ. ಗೋಪಾಲ ನಾಯ್ಕ ಹಾಗೂ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಸಿಬಂದಿ ವರ್ಗದ ಹರಿಶ್ಚಂದ್ರ, ಪ್ರವೀಣ್ ರೈ, ಜಗದೀಶ್, ಇರ್ಷಾದ್, ಶ್ರೀಧರ್, ಚಾಲಕ ನಾರಾಯಣ ಗೌಡ ಮತ್ತು ನೆಲ್ಯಾಡಿ ಹೊರಠಾಣಾ ಎಎಸ್‌ಐ ಚೆನ್ನಪ್ಪ ಗೌಡ ಮತ್ತು ಸಿಬಂದಿ ಶೇಖರ ಗೌಡ ಹಾಗೂ ದ.ಕ. ಜಿಲ್ಲಾ ಗಣಕ ಯಂತ್ರ ಸಿಬಂದಿ ವರ್ಗದ ಸಂಪತ್ ಮತ್ತು ದಿವಾಕರ್ ಭಾಗವಹಿಸಿದ್ದರು.
ಪ್ರಶಂಸೆ
ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ತಂಡಕ್ಕೆ ಮೇಲಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಂಗಡಿ ಪಕ್ಕದ ಖಾಲಿ ಕೋಣೆಯಲ್ಲಿ ತುಂಬಿಸಿಟ್ಟಿದ್ದ ಆರೋಪಿಯ ಮಾಲಕತ್ವದ ಆರು ಕೋಣೆಗಳ ಪೈಕಿ ಅಡಿಕೆ ಅಂಗಡಿಯ ಪಕ್ಕದ ಕೊಠಡಿ ಆರು ತಿಂಗಳಿಂದ ಖಾಲಿ ಇದೆ. ಸ್ನೇಹಿತನ ಸಹಕಾರದಿಂದ ಕಳವು ಸಂಚು ರೂಪಿಸಿದ ಸರ್ಫ್ರಾಜ್ ಕೋಣೆಯ ಛಾವಣಿಯ ಹಂಚು ತೆಗೆದು ಒಳ ನುಗ್ಗಿ ಏಣಿ ಇಟ್ಟು ಸತತ ನಾಲ್ಕು ಗಂಟೆಗಳಲ್ಲಿ 30-40 ಕೆ.ಜಿ. ಗೋಣಿಯಲ್ಲಿ ಕಟ್ಟಿ ಸಂಗ್ರಹಿಸಿಟ್ಟ 520 ಕೆ.ಜಿ. ಅಡಿಕೆಯನ್ನು ಖಾಲಿ ಕೋಣೆಯಲ್ಲಿ ಒಟ್ಟುಗೂಡಿಸಿದ್ದಾನೆ.