ಅಡಿಕೆ ಬೆಲೆ ಏರಿಕೆ, ಇಳಿಕೆಯು ಗುಮ್ಮ ಬಂತು ಗುಮ್ಮ ಎಂಬ ಕಥೆಯಂತಾಗಿದೆ. ಪ್ರತೀ ವರ್ಷ ಈ ಅವಧಿಯಲ್ಲಿ ಅಡಿಕೆ ಬೆಲೆ ಇಳಿಕೆಯಾಗುವುದು ವಾಡಿಕೆ. ಈ ಬಾರಿ ಅನೇಕ ಕಾರಣಗಳು ಇದಕ್ಕೆ ಜತೆಯಾಗಿವೆ. ಚುನಾವಣೆ ಹತ್ತಿರವಿರುವ ಕಾರಣ ಅದು ರಾಜಕೀಯಗೊಳ್ಳುತ್ತಿದೆ.
ಅಸಲಿಗೆ ಕೆಂಪು ಅಡಿಕೆ ಬೆಲೆ ಸೆಪ್ಟಂ ಬರ್‌ನಲ್ಲಿ 58,000ರೂ.ವರೆಗೆ ಹೋಗಿ ಅಕ್ಟೋಬರ್‌ನಲ್ಲಿ 48ರಿಂದ 50 ಸಾವಿರ ರೂ. ವರೆಗೆ ಇತ್ತು. ಡಿಸೆಂಬರ್ ಮೊದಲ ವಾರ 40 ಸಾವಿರಕ್ಕೆ ಇಳಿಕೆಯಾಗಿತ್ತು. ಇದು ರೈತರಲ್ಲಿ ಆತಂಕ ಮೂಡಿಸಿದೆ. ಈಗ ಹೊಸ ಬೆಳೆ ಬಂದಿದ್ದು ಭರದಿಂದ ಕೊಯ್ಲು ಸಾಗಿದೆ. ಮಾರುಕಟ್ಟೆಗೆ ಹೊಸ ಅಡಿಕೆ ಬರುತ್ತಿದೆ. ಈ ಹಂತದಲ್ಲಿ ಬೆಲೆ ಇಳಿಕೆ ಸಹಜವಾಗಿ ಆತಂಕ ಮೂಡಿಸಿದೆ. ಐದಾರು ಜಿಲ್ಲೆಗಳ ರೈತರ ಪ್ರಮುಖ ಆದಾಯ ಮೂಲವೂ ಇದೇ. ಅಡಿಕೆ ವಿಚಾರವು ಪ್ರತೀ ಚುನಾವಣ ವಸ್ತುವಾಗಿ ರುವುದು ತಿಳಿದಿರುವ ವಿಚಾರ.
ನಾಲ್ಕು ವರ್ಷಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಡಿಕೆ ಬೆಳೆ ಕೊಳೆ ರೋಗ, ಎಲೆಚುಕ್ಕಿ ರೋಗಕ್ಕೆ ತುತ್ತಾಗಿದೆ. ಸರಕಾರವೇ 42 ಸಾವಿರ ಹೆಕ್ಟೇರ್ ಅಡಿಕೆ ತೋಟಕ್ಕೆ ತೊಂದರೆ ಯಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ಈ ಹಂತದಲ್ಲಿ ಮಾರುಕಟ್ಟೆಗೆ ಅಡಿಕೆ ಆವಕ ಕಡಿಮೆಯಾಗಬಹುದು, ಬೆಲೆ ಏರಬಹುದು ಎಂದು ಅಂದುಕೊಳ್ಳಲಾಗಿತ್ತಾದರೂ ಅದು ಈಗ ವಿರುದ್ಧವಾಗಿದೆ. ವ್ಯಾಪಾರಿಗಳು ಹೇಳುವಂತೆ ಮಾರುಕಟ್ಟೆಗೆ ಮೊದಲಿನಂತೆ ಅಡಿಕೆ ಬರುತ್ತಿದೆ.
ಚಳಿಗಾಲದಲ್ಲಿ ಅಡಿಕೆ ಉತ್ಪನ್ನಗಳ (ಗುಟ್ಕಾ) ಸೇವನೆ ಕಡಿಮೆಯಾಗುತ್ತದೆ. ಈ ಅವಧಿಯಲ್ಲಿ ಕಂಪೆನಿಗಳು ಉತ್ಪಾದನೆ ನಿಲ್ಲಿಸುತ್ತವೆ. ಗುಜ ರಾತ್, ಹಿಮಾಚಲ ಪ್ರದೇಶದ ಚುನಾ ವಣೆ ಇದ್ದ ಕಾರಣ ಗುಟ್ಕಾ ಕಂಪೆನಿಗಳ ವಹಿವಾಟಿಗೆ ಅಡ್ಡಿಯಾಗಿತ್ತು. ಖರೀದಿ ನಿಲ್ಲಿಸಿದ್ದರೂ ಇವೆಲ್ಲವೂ ಅಡಿಕೆ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಬೆಲೆ ಮತ್ತೆ ಏರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಹುತೇಕ ಅಡಿಕೆ ಬೆಳೆಗಾರರು ಮತ್ತು ರೈತ ಸಂಘಟನೆಗಳು ಭೂತಾನ್ ಅಡಿಕೆ ಆಮದಿಗೆ ಕೇಂದ್ರ ಸರಕಾರ ತೆರಿಗೆ ರಹಿತ ಅವಕಾಶ ನೀಡಿರುವುದು ಅಕ್ರಮಕ್ಕೆ ನಾಂದಿಯಾಗಿದೆ ಎಂದು ಆರೋಪಿಸಿವೆ. ಪ್ರತೀ ವರ್ಷ 13 ಸಾವಿರ ಮೆ.ಟ. ಅಡಿಕೆ ಆಮದಿಗೆ ಅವಕಾಶ ನೀಡಿದೆ. ಇದು ಕಳ್ಳ ಮಾರ್ಗದಲ್ಲಿ ಅಡಿಕೆ ಬರಲು ಅವಕಾಶ ನೀಡಿದೆ. ಗುಟ್ಕಾ ಕಂಪೆನಿಗಳು ದೇಶೀ ಅಡಿಕೆ ಖರೀದಿಗೆ ಹಿಂದೇಟು ಹಾಕುತ್ತಿರುವುದೇ ಬೆಲೆ ಕುಸಿತಕ್ಕೆ ಕಾರಣ ಎಂದು ಆರೋಪಿಸಿವೆ. ಆದರೆ ಇದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ.
ನಮ್ಮ ದೇಶದಲ್ಲಿ ಪ್ರತೀ ವರ್ಷ 10 ಲಕ್ಷ ಮೆ. ಟ. ಅಡಿಕೆ ಉತ್ಪಾದನೆಯಾಗುತ್ತದೆ. ಅದರಲ್ಲಿ ಶೇ.80 ರಷ್ಟು ಕರ್ನಾಟಕದಲ್ಲೇ ಆಗುತ್ತದೆ. ಇದು ತಾತ್ಕಾಲಿಕ ಸಮಸ್ಯೆ ಎನ್ನುತ್ತಾರೆ ವ್ಯಾಪಾರಿಗಳು. ಈಗಾಗಲೇ ಅಡಿಕೆ ಕೊಯ್ಲು ಆರಂಭವಾಗಿದ್ದು ಮಳೆ ಯಿಂದಾಗಿ ಒಣಗಲು ಹಾಕಿದ್ದ ಅಡಿಕೆಗೆ ಬೂಸ್ಟ್ ಬರುತ್ತಿದೆ. ಬೆಲೆ ಇಳಿದಿದೆ. ವ್ಯಾಪಾರಿಗಳು ಕೊಯ್ಲು ಸಂದರ್ಭದಲ್ಲಿ ಬೆಲೆ ಇಳಿಸಿ ಲಾಭ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳೂ ಇವೆ.
-ಶರತ್ ಭದ್ರಾವತಿ