Advertisement

ಹೊಸ ವರ್ಷಕ್ಕೆ ನಿರೀಕ್ಷೆ ಮೂಡಿಸಿದ ಅಡಿಕೆ ದರ

01:59 PM Jan 15, 2018 | Team Udayavani |

ಸುಳ್ಯ: ಹೊಸ ಮತ್ತು ಹಳೆ ಅಡಿಕೆ ಧಾರಣೆಯಲ್ಲಿ ಕೊಂಚ ಪ್ರಗತಿ ಕಂಡಿದ್ದು, ಹೊಸ ವರ್ಷದಲ್ಲಿ ಧಾರಣೆ ಏರುವ ನಿರೀಕ್ಷೆ
ಮೂಡಿಸಿದೆ. ಸಿಂಗಲ್‌ ಚೋಲ್‌ ಹಾಗೂ ಹೊಸ ಅಡಿಕೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ವ್ಯಕ್ತವಾಗಿರುವುದು ಧಾರಣೆ ಏರಿಕೆಗೆ ಕಾರಣ ಎನ್ನಲಾಗಿದೆ.

Advertisement

ನೋಟು ನಿಷೇಧ, ಜಿಎಸ್‌ಟಿ ಜಾರಿ ಬಳಿಕ ಮಾರುಕಟ್ಟೆ ಅಸ್ಥಿರತೆ ಉಂಟಾಗಿದ್ದು, ಧಾರಣೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿತ್ತು. ಕಳೆದ ವರ್ಷವಿಡೀ ಧಾರಣೆ ಇಳಿಮುಖವಾಗಿದ್ದು ರೈತರನ್ನು ಕಂಗಲಾಗಿಸಿತ್ತು. ಜುಲೈ ಮೊದಲ ವಾರದಲ್ಲಿ ಹಳೆ ಅಡಿಕೆಗೆ 260 ರೂ. ಇದ್ದ ಧಾರಣೆ ಜುಲೈ 3ನೇ ವಾರದಲ್ಲಿ ಕೊಂಚ ಏರಿಕೆಯಾಗಿತ್ತು. ಅನಂತರ ಇಳಿಮುಖಗೊಂಡ ಧಾರಣೆ ಡಿಸೆಂಬರ್‌ 3ನೇ ವಾರದಲ್ಲಿ ಚೇತರಿಕೆಯಾಗಿತ್ತು.

ಧಾರಣೆ ವಿವರ
ಶನಿವಾರ ಪುತ್ತೂರು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹೊಸ ಅಡಿಕೆ 222 ರೂ. ಹೊರ ಮಾರುಕಟ್ಟೆಯಲ್ಲಿ 225 ರೂ., ಸಿಂಗಲ್‌ ಚೋಲ್‌ಗೆ 261 ರೂ., ಹೊರ ಮಾರುಕಟ್ಟೆಯಲ್ಲಿ 262-265 ರೂ.,ಡಬ್ಬಲ್‌ ಚೋಲ್‌ಗೆ 270 ರೂ, ಹೊರ ಮಾರುಕಟ್ಟೆಯಲ್ಲಿ 272ರಿಂದ 275 ರೂ. ತನಕ ಖರೀದಿ ಆಗಿದೆ.

ಕಳೆದ ಸೋಮವಾರದ ಧಾರಣೆಗೆ ಹೋಲಿಸಿದರೆ, ಹೊಸ ಅಡಿಕೆಗೆ ಕ್ಯಾಂಪ್ಕೋ ದಲ್ಲಿ 215 ರೂ., ಹಳೆ ಅಡಿಕೆ (ಸಿಂಗಲ್‌ ಚೋಲ್‌) 258 ರೂ.ಗೆ ಖರೀದಿ ಆಗಿತ್ತು. ಡಬ್ಬಲ್‌ ಚೋಲ್‌ ಧಾರಣೆ ಯಥಾಸ್ಥಿತಿಯಲ್ಲಿತ್ತು. ಕೃಷಿ ಮಾರುಕಟ್ಟೆ ತಜ್ಞರು ಹಾಗೂ ಅಡಿಕೆ ಖರೀದಿ ಸಹಕಾರಿ ಸಂಸ್ಥೆಗಳ ಲೆಕ್ಕಾಚಾರ ಪ್ರಕಾರ ಹೊಸ ಅಡಿಕೆ, ಸಿಂಗಲ್‌ ಮತ್ತು ಡಬ್ಬಲ್‌ ಚೋಲ್‌ ಅಡಿಕೆಗೆ ಜನವರಿಯಲ್ಲಿ ದರ ಏರಿಕೆಯಾಗಬಹುದು. ಆದರೆ ಕಳೆದ ಕೆಲ ವರ್ಷಕ್ಕೆ ಹೋಲಿಸಿದರೆ, ಈಗಿನ ಏರಿಕೆ ಪ್ರಮಾಣ ಅಷ್ಟೇನೂ ಪ್ರಗತಿದಾಯಕವಾಗಿಲ್ಲ ಅನ್ನುತ್ತಾರೆ ಮಾರುಕಟ್ಟೆ ಮೂಲಗಳು. 

ಪ್ರಚಾರಕಷ್ಟೇ ಬೆಂಬಲ ಬೆಲೆ ..!
ಅಡಿಕೆ ಧಾರಣೆ ಏರಿಳಿತದ ಮಧ್ಯೆ ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ 2016 ಡಿ. 9ಕ್ಕೆ ಕೆಂಪಡಿಕೆ ಮತ್ತು ಚಾಲಿ ಅಡಿಕೆ ಸೇರಿ 40,000 ಟನ್‌ ಅಡಿಕೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸುವುದಾಗಿ ಪ್ರಕಟಿಸಿತ್ತು. ಅದಕ್ಕಾಗಿ 161 ಕೋ. ರೂ. ಬಿಡುಗಡೆಗೊಳಿಸಿರುವುದಾಗಿ ಹೇಳಿತ್ತು. ಪ್ರತಿ ಕೆ.ಜಿ. ಚಾಲಿ ಅಡಿಕೆಗೆ 251 ರೂ. ನೀಡಿ ಸಹಕಾರಿ ಸಂಸ್ಥೆಗಳ ಮೂಲಕ ಖರೀದಿಸುವ ಆಶ್ವಾಸನೆ ನೀಡಿತ್ತು. ಖರೀದಿಗೆ ಡಿಸೆಂಬರ್‌ 31 ಕೊನೆ ದಿನಾಂಕವೆಂದು ಹೇಳಿತ್ತು. ಆದರೆ ಅಂತಿಮ ದಿನದ ಗಡುವು ದಾಟಿದರೂ ಬೆಂಬಲ ಬೆಲೆ ಸಿಗಲಿಲ್ಲ. ಅನಂತರ ದಿನಾಂಕ ವಿಸ್ತರಣೆ ಭರವಸೆ ಸಿಕ್ಕಿದ್ದರೂ, ವರ್ಷ ಕಳೆದರೂ ಆಗಿಲ್ಲ. ಬೆಂಬಲ ಬೆಲೆ ಘೋಷಣೆಗೆ ಮಾತ್ರ ಸೀಮಿತವಾಗಿತ್ತು.

Advertisement

ದುಬಾರಿ ನಿರ್ವಹಣೆ ವೆಚ್ಚ 
ಈ ಬಾರಿಗೆ ಮದ್ದು ಸಿಂಪಡಣೆ ಕೂಲಿ 1,200 ದಾಟಿದೆ. ಐದು ವರ್ಷದ ಹಿಂದೆ 500 ರೂ. ಇತ್ತು. ರಾಸಾಯನಿಕ ಗೊಬ್ಬರ ಧಾರಣೆ ಈಗ 980ಕ್ಕೆ ಏರಿದೆ. ಐದು ವರ್ಷದ ಹಿಂದೆ 600 ರೂ. ಆಸುಪಾಸಿನಲ್ಲಿತ್ತು. ಆದರೆ, ಅಡಿಕೆ ಧಾರಣೆ ಈಗ 287 ಇದೆ. ಐದು ವರ್ಷದ ಹಿಂದೆ 350ಕ್ಕೂ ಹೆಚ್ಚಿತ್ತು. ಅಡಿಕೆ ಬೆಳೆಯಲು ರೈತ ವ್ಯಯಿಸುವ ಖರ್ಚು ವರ್ಷಂಪ್ರತಿ ಏರಿಕೆ ಪ್ರಮಾಣದಲ್ಲಿ ಇದ್ದರೆ, ಆತನಿಗೆ ದೊರೆಯುವ ಧಾರಣೆ ಪ್ರತಿ ವರ್ಷ ಇಳಿಕೆಯತ್ತ ಸಾಗುತ್ತಿದೆ. ಆದ್ದರಿಂದ ಸ್ಥಿರ ಧಾರಣೆ ಬೇಕು ಎನ್ನುವ ಆಗ್ರಹವಿದೆ. 

ಬೆಲೆ ಏರುವ ಕಾಲ
ಡಿಸೆಂಬರ್‌ ಕೊನೆ, ಜನವರಿ ಆರಂಭದಲ್ಲಿ ಅಡಿಕೆಗೆ ಬೆಲೆ ಏರಿಕೆ ಕಾಣುವುದು ಸಹಜ. ನೋಟು ನಿಷೇಧದ ಅನಂತರ, ನಗದು ವಹಿವಾಟಿನಲ್ಲಿ ಚೇತರಿಕೆ ಕಂಡಿರುವುದು ಕೂಡ ಧಾರಣೆ ಏರಿಕೆಗೆ ಕಾರಣ ಆಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಆ ಪ್ರಮಾಣದಲ್ಲಿ ಧಾರಣೆ ಏರಿಕೆ ಸಾಗಿಲ್ಲ. ಈಗಿನ ಬೆಳವಣಿಗೆ ಒಂದಷ್ಟು ನಿರೀಕ್ಷೆ ಮೂಡಿಸಿದೆ.
–  ಡಾ| ವಿಘ್ನೇಶ್ವರ ವರ್ಮುಡಿ
   ಕೃಷಿ ಮಾರುಕಟ್ಟೆ ತಜ್ಞ

ಕಿರಣ್‌ ಪ್ರಸಾದ್‌ ಕುಂಡಡ್ಕ 

Advertisement

Udayavani is now on Telegram. Click here to join our channel and stay updated with the latest news.

Next