Advertisement
ಹೊಸ ವರ್ಷದ ಆರಂಭದಲ್ಲಿ ಹೊಸ ಮತ್ತು ಹಳೆ ಅಡಿಕೆ ಧಾರಣೆಯಲ್ಲಿ ಕೊಂಚ ಪ್ರಗತಿ ಕಂಡು, ಧಾರಣೆ ಮತ್ತಷ್ಟು ಏರುವ ನಿರೀಕ್ಷೆ ಮೂಡಿಸಿತ್ತು. ಮಾರ್ಚ್‌ನಲ್ಲಿ ಧಾರಣೆ ಹಿಮ್ಮುಖವಾಗಿ ಚಲಿಸಿ, ಬೆಳೆಗಾರರಿಗೆ ನಿರಾಶೆ ಮೂಡಿಸಿತ್ತು. ಆದರೆ ಕಳೆದ ಕೆಲ ವರ್ಷಗಳ ಅಂಕಿ-ಅಂಶವನ್ನು ಗಮನಿಸಿದರೆ, ಮಾರ್ಚ್‌ನಲ್ಲಿ ಧಾರಣೆ ಇಳಿಕೆಯಾಗುತ್ತಿರುವ ಅಂಶ ದಾಖಲಾಗಿದೆ. ಈ ಕುಸಿತ ಬೇಡಿಕೆ ಇಲ್ಲದೇ ಇರುವುದರ ಪರಿಣಾಮ ಅಲ್ಲ. ಬದಲಿಗೆ ಮಾರುಕಟ್ಟೆ ಲಾಭದ ತಂತ್ರಗಾರಿಕೆ ಅಡಗಿದೆ ಅನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
Related Articles
Advertisement
ಮಾರುಕಟ್ಟೆ ತಂತ್ರಗಾರಿಕೆ
ಪ್ರತಿ ವರ್ಷವೂ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಅಡಿಕೆ ಧಾರಣೆ ಇಳಿಸುವ ತಂತ್ರಗಾರಿಕೆ ಮಾರು ಕಟ್ಟೆ ಯಲ್ಲಿ ನಡೆಯುತ್ತದೆ. ಅದಕ್ಕೆ ಮುಖ್ಯ ಕಾರಣ ಮಾರ್ಚ್ ನಲ್ಲಿ ಬ್ಯಾಂಕ್ ಸಾಲ ಪಾವತಿಸಬೇಕಿದ್ದು, ಹೆಚ್ಚಿನ ಬೆಳೆಗಾರರು ಅಡಿಕೆ ಮಾರಾಟ ಮಾಡಲು ಮುಂದಾಗುತ್ತಾರೆ. ಇದೇ ಸಂದರ್ಭ ಧಾರಣೆ ಇಳಿಮುಖಗೊಳಿಸಿ, ಬೆಳೆಗಾರರಿಂದ ಕಡಿಮೆ ಧಾರಣೆಗೆ ಅಡಿಕೆ ಖರೀದಿಸಿ ಅನಂತರ ಹೆಚ್ಚು ಬೆಳೆಗೆ ಮಾರಾಟ ಮಾಡಿ ಲಾಭ ಗಳಿಸುವ ತಂತ್ರಗಾರಿಕೆ ಮಾರುಕಟ್ಟೆಯಲ್ಲಿ ನಡೆಯುತ್ತದೆ.
ಬೆಳೆಗಾರರ ಪ್ರತಿತಂತ್ರ
ಈ ಬಾರಿ ಕೃಷಿಕರು ಅದನ್ನು ಎದುರಿಸಲು ಸಿದ್ಧತೆ ನಡೆಸಿದ್ದರು. ಅಗತ್ಯ ಪ್ರಮಾಣದ ಅಡಿಕೆಯನ್ನು ಮಾತ್ರ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಹಾಗಾಗಿ ಕಳೆದ ಬಾರಿಗೆ ಹೋಲಿಸಿದರೆ ಸುಳ್ಯ, ಪುತ್ತೂರು ಭಾಗ ದಲ್ಲಿ ಉತ್ಪಾದಕರು ಫೆಬ್ರವರಿ, ಮಾರ್ಚ್‌ನಲ್ಲಿ ಮಾರುಕಟ್ಟೆಗೆ ಬಂದ ಅಡಿಕೆ ಪ್ರಮಾಣದಲ್ಲಿ ಗಣನೀಯ ಇಳಿಮುಖವಾಗಿದೆ. ಧಾರಣೆ ಏರಿಕೆ ಅನಂತರವೇ ಮಾರುವ ಪ್ರತಿ ತಂತ್ರಗಾರಿಕೆ ರೂಪಿಸಿದ್ದಾರೆ. ಇದರಿಂದ ಧಾರಣೆ ಸಹಜವಾಗಿ ಏರುವ ಸಾಧ್ಯತೆ ಕಂಡು ಬಂದಿದೆ.
ದುಬಾರಿ ನಿರ್ವಹಣೆ ವೆಚ್ಚ
ಪ್ರತಿ ಬಾರಿಯು ಅಡಿಕೆ ಬೆಳೆಗಾರನಿಗೆ ದುಬಾರಿ ನಿರ್ವಹಣಾ ವೆಚ್ಚ ಸವಲಾಗಿ ಪರಿಣಮಿಸಿದೆ. ವರ್ಷದಿಂದ ವರ್ಷಕ್ಕೆ ಬೆಳಗಾರನ ಉತ್ಪಾದನಾ ವೆಚ್ಚ ಮತ್ತು ನಿರ್ವಹಣೆ ವೆಚ್ಚದ ಮಧ್ಯೆ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದ್ದು, ಬೆಳೆಗಾರರ ಪಾಲಿಗೆ ಹೊರೆ ಎನಿಸಿದೆ. ಹಾಲಿ ವರ್ಷದಲ್ಲಿ ಮದ್ದು ಸಿಂಪಡಣೆ ಕೂಲಿ 1,200 ರೂ. ದಾಟಿದೆ. ಐದು ವರ್ಷದ ಹಿಂದೆ ಇದರ ಕೂಲಿ 500 ರೂ. ಇತ್ತು. ರಾಸಾಯನಿಕ ಗೊಬ್ಬರ ಧಾರಣೆ ಈಗ 980ಕ್ಕೆ ಏರಿದೆ. ಐದು ವರ್ಷದ ಹಿಂದೆ 600 ರೂ. ಆಸುಪಾಸಿನಲ್ಲಿತ್ತು. ಆದರೆ ಅಡಿಕೆ ಧಾರಣೆ ಈಗ 215 ರೂ. ಇದೆ. ಐದು ವರ್ಷದ ಹಿಂದೆ 350ಕ್ಕೂ ಹೆಚ್ಚಿತ್ತು. ಇಲ್ಲಿ ಬೆಳೆಗಾರ ವ್ಯಯಿಸುವ ಖರ್ಚು ವರ್ಷಂಪ್ರತಿ ಏರಿಕೆ ಪ್ರಮಾಣದಲ್ಲಿ ಇದ್ದರೆ, ಆತನಿಗೆ ದೊರೆಯುವ ಧಾರಣೆ ಕುಸಿತದತ್ತ ಸಾಗಿದೆ. ಹಾಗಾಗಿ ಸ್ಥಿರ ಧಾರಣೆ ನಿಗದಿಗೆ ಬೆಳೆಗಾರರು ಆಗ್ರಹಿಸುತ್ತಿದ್ದಾರೆ.
ಎಪ್ರಿಲ್‌ನಲ್ಲಿ ಏರಿಕೆ
ಎಪ್ರಿಲ್ ಮೊದಲ ವಾರದಲ್ಲಿ ಅಡಿಕೆ ಧಾರಣೆ ಏರಿಕೆ ಕಾಣಲಿದೆ. ಮಾರ್ಚ್ ತಿಂಗಳಲ್ಲಿ ಕುಸಿತ ಕಂಡರೂ ಮುಂದೆ ಧಾರಣೆ ಹೆಚ್ಚಳವಾಗಲಿದೆ. ಕ್ಯಾಂಪ್ಕೋ ಸಂಸ್ಥೆ ಗರಿಷ್ಠ ಧಾರಣೆ ನೀಡಿ ಅಡಿಕೆ ಖರೀದಿಸಿ ಬೆಳೆಗಾರರ ಹಿತ ಕಾಪಾಡಲು ಆದ್ಯತೆ ನೀಡಿದೆ.
– ಎಸ್.ಆರ್. ಸತೀಶ್ಚಂದ್ರ ಅಧ್ಯಕ್ಷರು, ಕ್ಯಾಂಪ್ಕೋ
– ಕಿರಣ್ ಪ್ರಸಾದ್ ಕುಂಡಡ್ಕ