ಅರಂತೋಡು: ಸುಳ್ಯ ತಾಲೂಕಿನಲ್ಲಿ ಅಡಿಕೆ ಬೆಳೆ ಒಂದು ಪ್ರಮುಖ ಕೃಷಿಯಾಗಿದೆ. ಇದಕ್ಕೆ ಅನೇಕ ವರ್ಷಗಳಿಂದ ಎಲೆ ಹಳದಿ ರೋಗ ಬಾಧಿಸಿ ಕೃಷಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಡಿಕೆ ಕೃಷಿಕರ ಸಾಲ ಮನ್ನಾ ಮಾಡುವ ಅಥವಾ ಅವರಿಗೆ ಪರಿಹಾರ ಕಲ್ಪಿಸುವ ಯಾವುದೇ ಕ್ರಮವನ್ನು ಸರಕಾರ ಕೈಗೊಳ್ಳದಿರುವುದು ವಿಪರ್ಯಾಸ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಅರಂತೋಡಿನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತ ನಾಡಿದರು. ಸಚಿವ ಅಂಗಾರ ಅವರ ಊರಾದ ಸುಳ್ಯದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾಗಿಲ್ಲ. ಸೂಕ್ತ ಚರಂಡಿ ಇಲ್ಲ. ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ. ವಿದ್ಯುತ್ ಸಮಸ್ಯೆ ಇದೆ. ಅಡಿಕೆ ಎಲೆ ಹಳದಿ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಬಜೆಟ್‌ನಲ್ಲಿ ಇದಕ್ಕೆ ಹಣ ಮೀಸಲಿಟ್ಟರೂ ಅದನ್ನು ಯಾವ ರೀತಿ ಉಪಯೋಗಿಸಲಾಗುತ್ತಿದೆ ಎಂಬ ಮಾಹಿತಿ ಇಲ್ಲ ಎಂದರು.
ಬಿಜೆಪಿ ಆಡಳಿತದಿಂದ ಜನರು ಭ್ರಮನಿರಸಗೊಂಡಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುತ್ತೇವೆ. ನಮ್ಮ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ ಎಂದರು.
ಬಿಜೆಪಿಯದು ಅತ್ಯಂತ ಭ್ರಷ್ಟ ಸರಕಾರ. ಬಿಜೆಪಿಗೆ ಶೇ. 40 ಕಮಿಷನ್ ಪಡೆಯುವುದೇ ಆಲೋಚನೆ. ಮುಂದಿನ ಅವಧಿಗೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಧನಂಜಯ ಅಡ³ಂಗಾಯ, ಮಾಜಿ ಕಾರ್ಯದರ್ಶಿ ಟಿ.ಎಂ. ಶಹೀದ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ್, ಕಾರ್ಯದರ್ಶಿ ಪಿ.ಎಸ್. ಗಂಗಾಧರ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭರತ್ ಮುಂಡೋಡಿ, ಇತರ ಕಾಂಗ್ರೆಸ್ ಮುಖಂಡರು ಹಾಜರಿದ್ದರು.