ಮೈಸೂರು: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಕೆ.ಆರ್.ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ ಗುತ್ತಿಗೆ(ಶಿಷ್ಯ ವೇತನ) ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶುಶ್ರೂಷಕರು ಗುರವಾರ ಪ್ರತಿಭಟನೆ ನಡೆಸಿದರು.
ನಗರದ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕಳೆದ ಅನೇಕ ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರೂ, ಸಂಬಳ ಹೆಚ್ಚು ಮಾಡಿಲ್ಲ. ಇದರಿಂದ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶುಶ್ರೂಷಕರು ಹಾಗೂ ಇತರ ಸಿಬ್ಬಂದಿ ತೊಂದರೆ ಅನುಭವಿಸುತ್ತಿದ್ದಾರೆ.
ಹೀಗಾಗಿ ಸಂಬಂಧಪಟ್ಟವರು ನಮಗೆ 17500 ರೂ. ಸಂಬಳ ನೀಡಬೇಕು, ಕರ್ತವ್ಯದ ಅವಧಿ ಮುಗಿದ ನಂತರ ಒಂದು ದಿನ ಕಡಿತಗೊಳಿಸಿ ಮರು ನೇಮಕಾತಿ ಮಾಡಿಕೊಳ್ಳಬೇಕು, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.
ರಸ್ತೆ ಕಳಪೆ ಕಾಮಗಾರಿ: ಪ್ರತಿಭಟನೆ
ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ನಗರದ ಅಶೋಕಪುರಂನಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಮುಖ್ಯರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಯುವ ದಲಿತ ಸಂಘಟನೆಗಳ ಒಕ್ಕೂಟದ ಸದಸ್ಯರು ಗುರುವಾರ ಮುಡಾ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಕಳೆದ 3 ವರ್ಷಗಳಿಂದ ನಡೆಯುತ್ತಿರುವ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು,
ಕಾಮಗಾರಿ ಗುಣಮಟ್ಟ ಅತ್ಯಂತ ಕಳಪೆಯಾಗಿದೆ. ಈ ಬಗ್ಗೆ ಮುಡಾ ಆಯುಕ್ತರಿಗೆ ಹಲವು ಬಾರಿ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಇಂಜಿನಿಯರ್‌ಗಳನ್ನು ಅಮಾನತುಪಡಿಸಿ, ಕ್ರಮಕೈಗೊಳ್ಳಬೇಕು. ಗುತ್ತಿಗೆದಾರರನ್ನು ಕಪ್ಪು$ಪಟ್ಟಿಗೆ ಸೇರಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪಾಲಿಕೆ ಸದಸ್ಯ ವಿ.ಶೈಲೇಂದ್ರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಶೋಕಪುರಂನ ನಿವಾಸಿಗಳು, ಸಂಘಟನೆ ಸದಸ್ಯರಿದ್ದರು.