ಕೋಲ್ಕತಾ: ಪಶ್ಚಿಮ ಬಂಗಾಲದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅನೇಕ ಶುಶ್ರೂಷಕಿಯರು ತಮ್ಮ ಉದ್ಯೋಗಗಳನ್ನು ತ್ಯಜಿಸಿ ತಮ್ಮ ಊರುಗಳಿಗೆ ಹೊರಡಲಾರಂಭಿಸಿದ್ದು ಇದು ಹೊಸ ಟ್ರೆಂಡ್ ಹುಟ್ಟುಹಾಕಿದೆ.
ಈವರೆಗೆ ಸುಮಾರು 300 ಶುಶ್ರೂಷಕಿಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆಂದು ಹೇಳಲಾಗಿದೆ. ಪೂರ್ವ ಭಾರತದ ಆಸ್ಪತ್ರೆ ಸಂಘವು (ಎ.ಎಚ್.ಇ.ಐ) ಪಶ್ಚಿಮ ಬಂಗಾಲ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಶುಶ್ರೂಷಕಿಯರ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಒತ್ತಾಯಿಸಿದೆ.
ಮೂಲಗಳ ಪ್ರಕಾರ, ಪಶ್ಚಿಮ ಬಂಗಾಲದಲ್ಲಿ ಹೆಚ್ಚುತ್ತಿರುವ ಕೋವಿಡ್ ಸೋಂಕಿಗೆ ಹೆದರಿ ಅವರು ಜಾಗ ಖಾಲಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ, ಎ.ಎಚ್.ಇ.ಐ ಅಧ್ಯಕ್ಷ ಪ್ರದೀಪ್ ಲಾಲ್ ಮೆಹ್ತಾ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ, ‘ಈ ವಾರ ಅಂತ್ಯಕ್ಕೆ ಕನಿಷ್ಠ 185 ಮಂದಿ ಶುಶ್ರೂಷಕಿಯರು ತವರಿಗೆ ಹೊರಟಿದ್ದಾರೆ. ಅದರಲ್ಲಿ ಶನಿವಾರವೇ 169 ಮಂದಿ ಕೆಲಸ ತ್ಯಸಿದ್ದಾರೆ.
ಇದರಲ್ಲಿ 92 ಮಂದಿ ಮಣಿಪುರಕ್ಕೆ, 43 ತ್ರಿಪುರ, 32 ಮಂದಿ ಝಾರ್ಖಂಡ್‌ಗೆ ತೆರಳಿದ್ದಾರೆ. ಒಡಿಶಾಗೆ ಇಬ್ಬರು ಹೋಗಿದ್ದಾರೆ. ಈ ನಡುವೆ ಮಣಿಪುರಕ್ಕೆ ಹೋಗಿರುವ 92 ಶುಶ್ರೂಷಕಿಯರ ಮೂಲತಃ ಆ ರಾಜ್ಯದವರೇ ಆಗಿದ್ದಾರೆ.
ಅಲ್ಲಿನ ಸರಕಾರ ಅವರಿಗೆ ತವರಿಗೆ ವಾಪಸು ಬಂದರೆ ಹೆಚ್ಚಿನ ಸಂಬಳ ನೀಡುವುದಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಆಮಿಷ ಒಡ್ಡಿರುವುದರಿಂದ ಶುಶ್ರೂಷಕಿಯರು ವಲಸೆ ಹೋಗಿದ್ದಾರೆ. ಬೇರೆ ಕಾರಣಗಳು ಇಲ್ಲವೇ ಇಲ್ಲ’ ಎಂದು ಅವರು ರವಿವಾರ ಪ್ರತಿಪಾದಿಸಿದ್ದಾರೆ.
ಆಮಿಷ ಒಡ್ಡಿಲ್ಲ: ಮಣಿಪುರ ಸಿಎಂ
ಆರೋಪಗಳ ಬಗ್ಗೆ ಮಣಿಪುರ ಮುಖ್ಯಮಂತ್ರಿ ನಾಂಗ್ ಥಾಂಬಾಮ್ ಬಿರೇನ್ ಸಿಂಗ್, ‘ಕೋಲ್ಕತಾ, ದಿಲ್ಲಿ ಇತರೆಡೆ ಆರೋಗ್ಯ ವಾರಿಯರ್ ಆಗಿ ಕಾರ್ಯನಿರ್ವಹಿಸಿರುವ ನಮ್ಮ ಶುಶ್ರೂಷಕಿಯರು ನಮ್ಮ ರಾಜ್ಯದ ಗೌರವ ಹೆಚ್ಚಿಸಿದ್ದಾರೆ. ಅವರು ತವರಿಗೆ ಬಂದರೆ ಹೆಮ್ಮೆಯಿಂದ ಸ್ವಾಗತಿಸುತ್ತೇವೆಯೇ ಹೊರತು, ಅವರನ್ನು ಹಣದ ಆಮಿಷ ಒಡ್ಡಿ ಕರೆಸಿಕೊಂಡಿಲ್ಲ’ ಎಂದಿದ್ದಾರೆ.