Advertisement

ನಗರದಲ್ಲಿ ಬಡವರ ಸಂಖ್ಯೆ ಅರ್ಧದಷ್ಟು ಕುಸಿತ!

06:00 AM Oct 10, 2017 | |

ನವದೆಹಲಿ: ಶೀಘ್ರದಲ್ಲೇ ನಗರ ಪ್ರದೇಶಗಳಲ್ಲಿರುವ ಅರ್ಧದಷ್ಟು ಬಡವರು ಸಿರಿವಂತರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ!

Advertisement

ಕೇಂದ್ರ ಸರ್ಕಾರ ರಚಿಸಿದ್ದ ನೀತಿ ಆಯೋಗದ ಸದಸ್ಯ ಮತ್ತು ಇತ್ತೀಚೆಗಷ್ಟೇ ಪ್ರಧಾನಿಯವರ ಸಲಹಾ ಮಂಡಳಿಯ ನೇತೃತ್ವ ವಹಿಸಿರುವ ವಿವೇಕ್‌ ದೇಬ್‌ರಾಯ್‌ ಅವರ ಸಮಿತಿ ಈ ಬಗ್ಗೆ ಕೆಲವೊಂದು ಶಿಫಾರಸುಗಳನ್ನು ಮಾಡಿದ್ದು, ಇದು ಜಾರಿಗೆ ಬಂದರೆ ನಗರಗಳಲ್ಲಿರುವ ಅರ್ಧಕ್ಕರ್ಧ ಮಂದಿ ಸಿರಿವಂತರ ಪಟ್ಟಿಗೆ ಸೇರಲಿದ್ದಾರೆ. ಅಂದರೆ ಈಗಿರುವ ಬಡವರ ಪ್ರಮಾಣ 18 ಕೋಟಿಯಿಂದ 7.20 ಕೋಟಿಗೆ ಇಳಿಕೆಯಾಗಲಿದೆ.

ಅಂದರೆ, ಈ ಸಮಿತಿ ಬಡವರ ಗುರುತಿಸುವಿಕೆಗೆ ಪಾಲನೆ ಮಾಡಲಾಗುತ್ತಿದ್ದ ಮಾನದಂಡಗಳನ್ನು ಬದಿಗಿಟ್ಟು, ಹೊಸ ಮಾನದಂಡಗಳನ್ನು ರೂಪಿಸಿಕೊಟ್ಟಿದೆ. ಈ ಸಮಿತಿಯ ಉದ್ದೇಶ ಕೇಂದ್ರ ಸರ್ಕಾರದ ವಸತಿ ಯೋಜನೆಗಳು ಅನರ್ಹರಿಗೆ ಸೇರಬಾರದು ಎಂದು. ಹೀಗಾಗಿಯೇ ವಿವೇಕ್‌ ದೇಬ್‌ರಾಯ್‌ ಸಮಿತಿಯ ಶಿಫಾರಸುಗಳು ಅರ್ಧದಷ್ಟು ಬಡವರನ್ನು ಸಿರಿತನಕ್ಕೆ ತೆಗೆದುಕೊಂಡು ಹೋಗಲಿವೆ.

ಇದು ಕೇವಲ ಸಿರಿವಂತ, ಬಡವರನ್ನು ಮೇಲೆತ್ತುವುದಷ್ಟೇ ಅಲ್ಲ, ನಿಜವಾದ ಬಡವರಿಗೆ ಸರ್ಕಾರದ ಸವಲತ್ತುಗಳು ಸಿಗುವ ಹಾಗೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. ಕಳೆದ ಜನವರಿಯಲ್ಲಿ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯ ವಿವೇಕ್‌ ದೇಬ್‌ರಾಯ್‌ ಸಮಿತಿಯನ್ನು ನೇಮಕ ಮಾಡಿತ್ತು. ಇದರ ಪ್ರಮುಖ ಉದ್ದೇಶ, 2011ರಲ್ಲಿ ಎಸ್‌.ಆರ್‌. ಹಾಶೀಂ ಅವರ ಸಮಿತಿ ನೀಡಿದ್ದ ಶಿಫಾರಸುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವುದಾಗಿತ್ತು. ಆಗಿನ ಯುಪಿಎ ಸರ್ಕಾರ ಹಾಶೀಂ ಸಮಿತಿಯನ್ನು ನಗರ ಪ್ರದೇಶಗಳಲ್ಲಿರುವ ಬಡವರನ್ನು ಗುರುತಿಸುವ ಮಾನದಂಡಗಳಿಗಾಗಿ ನೇಮಕ ಮಾಡಿತ್ತು.

ಇವರ ನೇತೃತ್ವದ ಸಮಿತಿಯು ಇದೀಗ ನಗರ ಪ್ರದೇಶದಲ್ಲಿ ವಾಸವಾಗಿರುವ ಬಡವರನ್ನು ಗುರುತಿಸಲು ಹೊಸ ಮಾನದಂಡಗಳನ್ನು ರೂಪಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಈ ಪಟ್ಟಿಯು ಈಗ ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯ ಅವಗಾಹನೆಯಲ್ಲಿದ್ದು ಸದ್ಯದಲ್ಲೇ ಈ ಮಾನದಂಡಗಳ ಜಾರಿ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ, “ಆಟೋಮ್ಯಾಟಿಕ್‌ ಆಗಿ ಬಡವರ ಪಟ್ಟಿ’ಗೆ ಸೇರುವವರಲ್ಲದೇ, ನಗರ ಪ್ರದೇಶಗಳಲ್ಲಿರುವ ಇತರೆ ಕುಟುಂಬಗಳಿಗೂ ಸರ್ಕಾರದ ಕನಿಷ್ಠ ಒಂದಾದರೂ ವಸತಿ ಯೋಜನೆ ಸಿಗುವಂತಿರಬೇಕು ಎಂದು ವಿವೇಕ್‌ ದೇಬ್‌ರಾಯ್‌ ಸಮಿತಿ ಶಿಫಾರಸು ಮಾಡಿದೆ. ಇದಷ್ಟೇ ಅಲ್ಲ, ಹಿಂದಿನ ಹಾಶೀಂ ವರದಿ ಹೇಳಿದ್ದಂತೆ ಮನೆಯೊಂದರಲ್ಲಿ ಇಂಟರ್ನೆಟ್‌ ಸಂಪರ್ಕವಿರುವ ಕಂಪ್ಯೂಟರ್‌ ಮತ್ತು ದೂರವಾಣಿ ಸೌಲಭ್ಯ ವ್ಯಕ್ತಿಯ ಆರ್ಥಿಕ ಶಕ್ತಿಯನ್ನು ಪ್ರತಿಪಾದಿಸುವುದಿಲ್ಲ. ಹೀಗಾಗಿ ಈ ಎರಡು ಆತನ ಮನೆಯಲ್ಲಿ ಇದ್ದ ಕಾರಣಕ್ಕೆ ಬಡತನದಿಂದ ಹೊರಗೆ ಹಾಕಲು ಸಾಧ್ಯವೂ ಇಲ್ಲ ಎಂದು ವರದಿ ಹೇಳಿದೆ. ಈ ಸೌಲಭ್ಯಗಳನ್ನು ಆರ್ಥಿಕ ವಹಿವಾಟು ಸಾಮರ್ಥ್ಯ ಮತ್ತು ಜನರ ನಡುವಿನ ಸಾಮಾಜಿಕ ಸಂವಹನ ಎಂದು ಗುರುತಿಸಿರುವ ಸಮಿತಿ, ಇದರಿಂದಲೇ ಜನರನ್ನು ಸಿರಿವಂತರು ಎಂದು ಗುರುತಿಸಿಬಿಟ್ಟರೆ ಅದು ಅಜಾಗರೂಕತೆ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಹೇಳಿದೆ.

Advertisement

ನಗರದಲ್ಲಿನ ಬಡವರ ಗುರುತಿಸುವಿಕೆ
(ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ಆಧರಿತ)

1. ಬಡವರ ಪಟ್ಟಿಯಿಂದ ಹೊರಕ್ಕೆ ಬೀಳುವವರು
ನಾಲ್ಕು ಕೊಠಡಿಗಳ ಮನೆ, ರೆಫ್ರಿಜರೇಟರ್‌, ವಾಷಿಂಗ್‌ ಮಷೀನ್‌, ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ಅಥವಾ ಏರ್‌ ಕಂಡೀಶನರ್‌ ಹೊಂದಿರುವವರು.
2. ಬಡತನದ ಪಟ್ಟಿಗೆ ಸೇರುವವರು
ವಸತಿರಹಿತರು, ಒಂದೇ ಕೊಠಡಿಯ ಮನೆಯಲ್ಲಿ ವಾಸ, ಆದಾಯ ಇಲ್ಲದೇ ಇರುವವರು, ವಿಕಲಚೇತನರು
3. ಬಡತನ ಪಟ್ಟಿಗೆ ಆಟೋಮ್ಯಾಟಿಕ್‌ ಆಗಿ ಸೇರುವುದರಿಂದ ಲಾಭ
– ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಮನೆ
– ರಾಷ್ಟ್ರೀಯ ನಗರ ಜೀವನ ಮಿಷನ್‌ನಡಿಯಲ್ಲಿ ಉದ್ಯೋಗ ಅಥವಾ ಕೌಶಲ್ಯ ತರಬೇತಿ
– ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಆರೋಗ್ಯ ಸೇವೆ
– ಉಜ್ವಲ ಯೋಜನೆಯಡಿ ಎಲ್‌ಪಿಜಿ ಸಂಪರ್ಕ

ಹಾಶಿಂ- ದೇಬ್‌ರಾಯ್‌ ಲೆಕ್ಕಾಚಾರದ ವ್ಯತ್ಯಾಸ
ಹಾಶೀಂ ಸಮಿತಿಯ ಶಿಫಾರಸುಗಳಿಂದಾಗಿ ಕೇವಲ ನಗರ ಪ್ರದೇಶದಲ್ಲಿರುವ ಬಡವರಿಗೆ ಮಾತ್ರ ಅನುಕೂಲವಾಗುವಂತಿತ್ತು. ಈ ಸಮಿತಿಯ ಆಧಾರದಲ್ಲಿ ನಗರಗಳಲ್ಲಿ ಶೇ.27 ರಷ್ಟು ಮಂದಿ ತನ್ನಿಂತಾನೇ ಬಡತನ ಪಟ್ಟಿಗೆ ಸೇರುತ್ತಿದ್ದರು. ಆದರೆ ಇದನ್ನು ಒಪ್ಪಿಕೊಳ್ಳದ ಕೇಂದ್ರ ಸರ್ಕಾರ ವರ್ಷಾರಂಭದಲ್ಲಿ ವಿವೇಕ್‌ ದೇಬ್‌ರಾಯ್‌ ಸಮಿತಿ ನೇಮಕ ಮಾಡಿತ್ತು. ಇದರ ಲೆಕ್ಕದಲ್ಲಿ ನಗರ ಪ್ರದೇಶದಲ್ಲಿ ಕೇವಲ ಶೇ.11 ರಷ್ಟ ಮಂದಿ ಮಾತ್ರ ಸೇರಿದ್ದರು.

ಹಾಶಿಂ ಸಮಿತಿ ಲೆಕ್ಕ
1. ನಗರ ಪ್ರದೇಶದಲ್ಲಿ 18 ಕೋಟಿ ಮಂದಿ ಬಡತನ ಪಟ್ಟಿಗೆ ಸೇರ್ಪಡೆ
2. ಅಂದರೆ ಒಟ್ಟಾರೆ ಜನಸಂಖ್ಯೆಯ ಶೇ.27 ರಷ್ಟು ಬಡತನ ಪಟ್ಟಿಗೆ ಸೇರಿದ್ದರು.
3. ಗ್ರಾಮೀಣ ಪ್ರದೇಶದಲ್ಲಿ ಆಟೋಮ್ಯಾಟಿಕ್‌ ಆಗಿ ಸೇರಿದ್ದವರು ಕೇವಲ ಶೇ.1 ಮಂದಿ

ದೇಬ್‌ರಾಯ್‌ ಸಮಿತಿ ಲೆಕ್ಕ
1. ನಗರ ಪ್ರದೇಶದಲ್ಲಿನ ಅರ್ಹ ಬಡವರ ಸಂಖ್ಯೆ 7.20 ಕೋಟಿ
2. ಅಂದರೆ ಒಟ್ಟಾರೆ ಜನಸಂಖ್ಯೆಯ ಶೇ. 11.1 ರಷ್ಟು ಮಂದಿ ಮಾತ್ರ ಸೇರ್ಪಡೆ
3. ಗ್ರಾಮೀಣ ಪ್ರದೇಶದಲ್ಲಿನ ಬಡವರ ಸಂಖ್ಯೆ 17.9 ಕೋಟಿ

ಹಾಶೀಂ ಸಮಿತಿ ಬಡವರ ಗುರುತಿಸಿದ್ದು ಹೇಗೆ?
ವಿವೇಕ್‌ ದೇಬ್‌ರಾಯ್‌ ಸಮಿತಿ ಕೂಡ 2011ರ ಹಾಶೀಂ ಸಮಿತಿಯ ಶಿಫಾರಸುಗಳನ್ನು ಮುಂದಿಟ್ಟುಕೊಂಡೇ ಬಡತನದ ಲೆಕ್ಕಾಚಾರ ಹಾಕಿದೆ. ಅಂದರೆ ಆಗ ಹಾಶೀಂ ಸಮಿತಿ ನಗರ ಪ್ರದೇಶಗಳಲ್ಲಿನ ಬಡವರನ್ನು ಗುರುತಿಸಲು ಮೂರು ಹಂತದ ಲೆಕ್ಕಾಚಾರ ಹಾಕಿತ್ತು. ಅಂದರೆ ಯಾವುದೇ ಕುಟುಂಬ ಬಡತನ ಪಟ್ಟಿಗೆ ಸೇರಬೇಕಾದರೆ ಅವರಿಗೆ ಮನೆ ಇರಬಾರದು, ಮಹಿಳೆಯಿಂದ ಮಾತ್ರ ಮನೆಗೆ ಆದಾಯ ಬರುತ್ತಿದ್ದರೆ, ವಿಕಲ ಚೇತನ ವ್ಯಕ್ತಿಯ ಒಡೆತನದಲ್ಲಿರಬೇಕಿತ್ತು. ಅದೇ ರೀತಿ ನಾಲ್ಕು ಕೊಠಡಿಗಳ ಮನೆ, ಕಾರು, ಏರ್‌ ಕಂಡಿಶನರ್‌ ಅಥವಾ ಕಂಪ್ಯೂಟರ್‌, ಫ್ರಿಡ್ಜ್, ಲ್ಯಾಂಡ್‌ ಲೈನ್‌ ಫೋನ್‌, ವಾಷಿಂಗ್‌ ಮಷೀನ್‌ ಅಥವಾ ದ್ವಿಚಕ್ರ ವಾಹನವಿದ್ದರೆ ಆ ಕುಟುಂಬ ಬಡತನದ ಪಟ್ಟಿಯಿಂದ ಹೊರಕ್ಕೆ ಬೀಳುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next