ಬೆಂಗಳೂರು: ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಸರಿ ಸುಮಾರು ಅರ್ಧ ಲಕ್ಷ ಸೋಂಕಿತರು ಗುಣಮುಖರಾಗುವ ಮೂಲಕ ಒಟ್ಟಾರೆ ಸೋಂಕಿನಿಂದ ಮುಕ್ತರಾದವರ ಸಂಖ್ಯೆ ಒಂದು ಲಕ್ಷದ ಸಮೀಪಕ್ಕೆ ಬಂದು ನಿಂತಿದೆ.
ಸೋಮವಾರ ಹೊಸದಾಗಿ 4,267 ಮಂದಿಗೆ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ 5,218 ಮಂದಿ ಗುಣಮುಖರಾಗಿದ್ದಾರೆ. 114 ಮಂದಿ ಚಿಕಿತ್ಸೆ ಫಲಕಾರಿಯಾಗದೆ ವೈರಸ್‌ಗೆ ಬಲಿಯಾಗಿದ್ದಾರೆ.
ಈ ಮೂಲಕ ಒಟ್ಟಾರೆ ಸೋಂಕು ಪ್ರಕರಣಗಳು 1,82,354ಕ್ಕೆ, ಸೋಂಕಿ ನಿಂದ ಜೀವ ಕಳೆದುಕೊಂಡವರ ಸಂಖ್ಯೆ 3,312ಕ್ಕೆ, ಗುಣಮುಖರಾದವರ ಸಂಖ್ಯೆ 99,126ಕ್ಕೆ ಏರಿಕೆಯಾಗಿದೆ. ಸದ್ಯ 79,908 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೈಕಿ 681 ಮಂದಿ ಆರೋಗ್ಯ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಜ್ಯದಲ್ಲಿ ಆ.1ಕ್ಕೆ ಗುಣಮುಖರ ಸಂಖ್ಯೆ 50 ಸಾವಿರ ಗಡಿದಾಟಿತ್ತು. ಆ ಬಳಿಕ ಹೊಸದಾಗಿ ಸೋಂಕಿತರಾಗುತ್ತಿರುವವರ ಪ್ರಮಾಣದಷ್ಟೇ ಸೋಂಕಿನಿಂದಮುಕ್ತರಾಗುತ್ತಿರುವವರ ಪ್ರಮಾಣವು ಹೆಚ್ಚಳವಾಗಿದೆ. ಕಳೆದ 10 ದಿನಗಳಲ್ಲಿ 49,330 ಮಂದಿ ಗುಣ ಮುಖರಾಗುವ ಮೂಲಕ ಒಟ್ಟಾರೆ ಗುಣಮುಖರ ಸಂಖ್ಯೆ ಲಕ್ಷದ ಸಮೀಪಕ್ಕೆ ಬಂದು ನಿಂತಿದೆ. ಮಂಗಳ ವಾರ ಬಹುತೇಕ ಒಂದು ಲಕ್ಷ ಗಡಿ ದಾಟಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಸೋಂಕು ಪ್ರಕರಣ ಇಳಿಮುಖ : 2 ದಿನಗಳಿಂದ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಇಳಿಮುಖ ಹಾದಿಯಲ್ಲಿ ಸಾಗಿವೆ. ಶನಿವಾರ (ಆ.8) ಮೊದಲ ಬಾರಿ ಏಳು ಸಾವಿರ ಗಡಿದಾಟಿದ್ದವು. ಭಾನುವಾರ ಮತ್ತೆ 5,985ಕ್ಕೆ ಇಳಿಕೆಯಾಗಿದ್ದು, ಸೋಮವಾರ 4,267ಕ್ಕೆ ಕುಸಿದಿವೆ. ಪ್ರಸ್ತುತ ತಿಂಗಳಲ್ಲಿ ವರದಿಯಾದ ಕನಿಷ್ಠ ಸೋಂಕು ಪ್ರಕರಣಗಳು ಇವಾಗಿವೆ. ಇನ್ನು ಸೋಂಕು ಪರೀಕ್ಷೆ ಕಡಿಮೆಯಾಗಿರುವುದೇ ಪ್ರಕರಣಗಳು ಇಳಿಮುಖವಾಗಲು ಕಾರಣ ಎನ್ನಲಾಗಿದೆ. ಶನಿವಾರ 44 ಸಾವಿರ, ಭಾನುವಾರ 38 ಸಾವಿರ ಇದ್ದ ಪರೀಕ್ಷೆಗಳು ಸೋಮವಾರ 22 ಸಾವಿರಕ್ಕೆ ಇಳಿಕೆಯಾಗಿವೆ.