ಸಿಂಧನೂರು: ಸುಕೋ ಹಾಗೂ ಐಎಂಎ ಆಸ್ಪತ್ರೆ ಒಳಗೊಂಡಂತೆ ನಗರದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೇ ಕೋವಿಡ್ ರೋಗಿಗಳಿಗೆ 203 ಬೆಡ್‌ಗಳ ಸೌಲಭ್ಯ ಒದಗಿಸಲಾಗುತ್ತಿದ್ದು, ಬೆಡ್ ಕೊರತೆ ನೀಗಿಸುವತ್ತ ಮಹತ್ವದ ಹೆಜ್ಜೆ ಇಡಲಾಗಿದೆ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಒದಗಿಸಲು 30 ಆಕ್ಸಿಜನ್ ಬೆಡ್‌ಗಳನ್ನು 50ಕ್ಕೆ ಹೆಚ್ಚಿಸುವ ಪ್ರಯತ್ನವೂ ಮುಂದುವರಿದಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಅತಿ ಹೆಚ್ಚು ಬೆಡ್‌ಗಳನ್ನು ರೋಗಿಗಳಿಗೆ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕು ಮುಂದಡಿ ಇಟ್ಟಿದೆ.
ತುರ್ತು ಚಿಕಿತ್ಸೆ ಅಗತ್ಯವಿದ್ದ ಪ್ರಕರಣದಲ್ಲಿ ಮಾತ್ರ ರಾಯಚೂರಿನ ಒಫೆಕ್ ಹಾಗೂ ಇತರ ಹೈಟೆಕ್ ಆಸ್ಪತ್ರೆಗಳಿಗೆ ರೋಗಿಗಳನ್ನು ರವಾನಿಸಲಾಗುತ್ತಿದೆ. ಆಕ್ಸಿಜನ್ ಸಹಿತ ಬೆಡ್ ಬಹುತೇಕ ಎಲ್ಲ ರೋಗಿಗಳಿಗೂ ಒದಗಿಸುವ ಪ್ರಯತ್ನ ತಾಲೂಕಿನಲ್ಲಿ ಮುಂದುವರಿದಿದೆ.
ಬೆಡ್‌ಗಳ ಸಂಖ್ಯೆ 250ಕ್ಕೆ ಏರಿಕೆ: ನಗರದ ಶಾಂತಿ ಆಸ್ಪತ್ರೆಯಲ್ಲಿ 27 ಬೆಡ್‌ಗಳಿದ್ದು, 20 ಆಕ್ಸಿಜನ್ ಬೆಡ್ ವ್ಯವಸ್ಥೆಯಾಗಿದೆ. ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿ 11, ತೋಟದ್ ಆಸ್ಪತ್ರೆಯಲ್ಲಿ 12, ರೇಣುಕಾ ಆಸ್ಪತ್ರೆಯಲ್ಲಿ 16, ವೀರಗಂಗಾಧರ ಆಸ್ಪತ್ರೆಯಲ್ಲಿ 25, ಅಕ್ಕಮಹಾದೇವಿ ಆಸ್ಪತ್ರೆಯಲ್ಲಿ 30, ಆದರ್ಶ ಆಸ್ಪತ್ರೆಯಲ್ಲಿ 26, ಟಿಜಿಎಚ್ ಆಸ್ಪತ್ರೆಯಲ್ಲಿ 15, ಸುಕೋ ಮತ್ತು ಐಎಂಎ ಸಹಭಾಗಿತ್ವದ ಆಸ್ಪತ್ರೆಯಲ್ಲಿ 30, ಗವಿಸಿದ್ದೇಶ್ವರ ಆಸ್ಪತ್ರೆಯಲ್ಲಿ 11 ಬೆಡ್‌ಗಳಿದ್ದು, ಇದರಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯೂ ಒಳಗೊಂಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿರುವ 203 ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿರುವ 30 ಬೆಡ್ ಸಹಿತ ಇನ್ನು 20 ಬೆಡ್‌ಗಳು ಸರ್ಕಾರಿ ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಿಸಲು ಸಿದ್ಧತೆಗಳು ನಡೆದಿವೆ. ಮೇ 9ರಂದು ಆರೋಗ್ಯ ಇಲಾಖೆ ನೀಡಿದ ಮಾಹಿತಿ ಪ್ರಕಾರ, 33 ಬೆಡ್‌ಗಳು ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲೇ ಖಾಲಿ ಇದ್ದವು ಎಂಬುದು ಗಮನಾರ್ಹ.
ಸರ್ಕಾರಿ ರೆಫರ್‌ಗೆ ಶುಲ್ಕ ಕಡಿತ: ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳ ಪೈಕಿ ಶೇ.50 ಬೆಡ್‌ಗಳನ್ನು ಸರ್ಕಾರಿ ಆಸ್ಪತ್ರೆ ಮೂಲಕ ಶಿಫಾರಸು ಮಾಡುವ ರೋಗಿಗಳಿಗೆ ಮೀಸಲಿಡಬೇಕಿದೆ. ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ರೋಗಿಗಳ ತಪಾಸಣೆ ನಡೆಸಿ, ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸುವುದರಿಂದ ಸೋಂಕಿತರ ಖಚಿತ ಮಾಹಿತಿಯೂ ಸರ್ಕಾರಕ್ಕೆ ಲಭ್ಯವಾಗಲಿದೆ.
ಈ ನಿಟ್ಟಿನಲ್ಲಿ ತಾಲೂಕಿನಲ್ಲಿ ಕಠಿಣ ಕ್ರಮ ಅಗತ್ಯ ಎಂಬ ವಾದ ಕೇಳಿಬಂದಿವೆ. ಇದಕ್ಕೆ ಕಡಿವಾಣ ಹಾಕಲು ಸರ್ಕಾರಿ ಆಸ್ಪತ್ರೆಯಲ್ಲೇ ಎಲ್ಲ ವಿವರ ಸಂಗ್ರಹಿಸಬೇಕೆಂದು ಈಗಾಗಲೇ ಶಾಸಕ ವೆಂಕಟರಾವ್ ನಾಡಗೌಡ ಸೂಚನೆ ನೀಡಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನೇ ಪಡೆದುಕೊಳ್ಳಬೇಕಾದರೆ ಸರ್ಕಾರಿ ಆಸ್ಪತ್ರೆಗಳ ಮೂಲಕವೇ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಬೇಕಿದೆ. ಆಗ ಮಾತ್ರ ಶುಲ್ಕದ ರಿಯಾಯಿತಿ ಲಭ್ಯವಾಗಲಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ತಾಲೂಕಿನಲ್ಲಿ ಆರಂಭಿಸಲಾಗಿದೆ.