ಕಾರವಾರ: ರಾಜ್ಯದ ಏಕೈಕ ಅಣುವಿದ್ಯುತ್ ಸ್ಥಾವರ ಕೈಗಾದ ಘಟಕ-1 ಸತತ 856 ದಿನ ವಿದ್ಯುತ್ ಉತ್ಪಾದಿಸಿ ಜಾಗತಿಕ ದಾಖಲೆ ಬರೆದಿದೆ.
ಸತತ 895 ದಿನಗಳವರೆಗೆ ಅಂದರೆ ಅಕ್ಟೋಬರ್ 24ರವರೆಗೆ ಮುಂದುವರಿಸಲು ಎಇಆರ್‌ಬಿ ಅಣು ವಿದ್ಯುತ್ ಶಕ್ತಿ ನಿಯಂತ್ರಣ ನಿಗಮ ಮತ್ತು ಭಾರತದ ಅಣುಸ್ಥಾವರ ವೀಕ್ಷಣಾ ಕೇಂದ್ರಗಳು ಅನುಮತಿ ನೀಡಿದ್ದು, ವಿದ್ಯುತ್ ಉತ್ಪಾದನೆ ಸುಗಮವಾಗಿ ನಡೆದಿದೆ. ಇನ್ನುಳಿದ 39 ದಿನ ಕೈಗಾ ಅಣುಸ್ಥಾವರ ಸ್ಥಗಿತಗೊಳ್ಳದೆ ಕಾರ್ಯನಿರ್ವಹಿಸಿದಲ್ಲಿ ಸತತವಾಗಿ ಅಣು ವಿದ್ಯುತ್ ಉತ್ಪಾದನೆ ಮಾಡಿದ ವಿಶ್ವದ ಎರಡನೇ ರಿಯಾಕ್ಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಸಾಮಾನ್ಯವಾಗಿ ಅಣು ಸ್ಥಾವರಗಳನ್ನು 365 ದಿನ ಸತತವಾಗಿ ನಡೆಸಿ, ಘಟಕದ ರಿಯಾಕ್ಟರ್ ನಿರ್ವಹಣೆಗೆ 30 ದಿನ ಬಿಡುವು ನೀಡಲಾಗುತ್ತದೆ. ನಂತರ ಮತ್ತೆ ರಿಯಾಕ್ಟರ್‌ಗಳನ್ನು ಚಾಲನೆ ಮಾಡುವುದು ವಾಡಿಕೆ. ಆದರೆ ಕೈಗಾ ಅಣುಸ್ಥಾವರದಲ್ಲಿ ಸತತ 500 ದಿನಗಳವರೆಗೆ ರಿಯಾಕ್ಟರ್‌ಗಳನ್ನು ನಡೆಸಿದ ದಾಖಲೆ ಈತನಕ ಇತ್ತು. ದೇಶದ ವಿವಿಧ ರಾಜ್ಯಗಳ ಅಣುಘಟಕಗಳನ್ನು 450 ದಿನ, 500 ದಿನ ನಡೆಸಿದ ದಾಖಲೆ ಇದೆ. ಆದರೆ ಕೈಗಾದ ಘಟಕ-1ನ್ನು ಸತತವಾಗಿ 856 ದಿನ ನಡೆಸಿ, ವಿದ್ಯುತ್ ಉತ್ಪಾದನೆ ಮುಂದುವರಿಸಲಾಗಿದೆ.
ಕೈಗಾದಲ್ಲಿ ಸ್ಥಾವರದ ನಿರ್ದೇಶಕ ಸಂಜಯ್ ಕುಮಾರ್, ಸ್ಟೇಶನ್ ಡೈರೆಕ್ಟರ್ ಜೆ.ಆರ್.ದೇಶಪಾಂಡೆ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, 895 ದಿನದ ಗುರಿ ತಲುಪುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಸ್ಥಾನದಲ್ಲಿ ಕೆನಡಾ: ಅಣುಸ್ಥಾವರದ ಘಟಕದ ರಿಯಾಕ್ಟರ್‌ನ್ನು ಸತತ 940 ದಿನ ಕಾರ್ಯನಿರ್ವಹಿಸಿ ವಿದ್ಯುತ್ ಉತ್ಪಾದಿಸಿದ ದಾಖಲೆ ಕೆನಡಾ ದೇಶದ ಹೆಸರಿನಲ್ಲಿದೆ. 893 ದಿನ ಸತತವಾಗಿ ವಿದ್ಯುತ್ ಉತ್ಪಾದಿಸಿ ಬ್ರಿಟನ್ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಈಗ ಕೈಗಾ ಘಟಕ-1ರ ರಿಯಾಕ್ಟರ್ ಸೋಮವಾರ (ಸೆ.17) ತನಕ ಸತತವಾಗಿ 856 ದಿನ ವಿದ್ಯುತ್ ಉತ್ಪಾದಿಸಿ ಮೂರನೇ ಸ್ಥಾನ ಪಡೆದಿದೆ ಎಂದು ಕೈಗಾದ ವಿಜ್ಞಾನಿ ಮೋಹನ್ ರಾಮ್ ತಿಳಿಸಿದ್ದಾರೆ.