Advertisement

ಎನ್‌ಟಿಪಿಸಿ ವಿದ್ಯುತ್‌ ಉತ್ಪಾದನೆ ಜೂನ್‌ನಲ್ಲಿ ಆರಂಭ?

12:45 PM May 28, 2017 | Harsha Rao |

ವಿಜಯಪುರ: ರಾಜ್ಯದ ಬಹು ದೊಡ್ಡ ವಿದ್ಯುತ್‌ ಉತ್ಪಾದನೆಯ ರಾಷ್ಟ್ರೀಯ ಯೋಜನೆಯಾದ ಕೂಡಗಿ ಎನ್‌ಟಿಪಿಸಿಯಿಂದ ಕಲ್ಲಿದ್ದಲು ಆಧಾರಿತ ಶಾಖೋತ್ಪನ್ನ ವಿದ್ಯುತ್‌ ಉತ್ಪಾದನೆಗೆ ಜಿಲ್ಲೆಯಲ್ಲಿ ವೇದಿಕೆ ಸಿದ್ಧವಾಗುತ್ತಿದೆ. ಮೊದಲ ಹಂತದ ಎರಡು ಘಟಕಗಳಿಂದ ವಿದ್ಯುತ್‌ ಉತ್ಪಾದನೆಗೆ ಸದ್ದಿಲ್ಲದೇ ಸಿದ್ಧತೆ ನಡೆದಿದೆ. ಜೂನ್‌ ಮಾಸಾಂತ್ಯದೊಳಗೆ ವಿದ್ಯುತ್‌
ಉತ್ಪಾದನೆ ಆರಂಭಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Advertisement

ಬಸವನಬಾಗೇವಾಡಿ ತಾಲೂಕಿನ ಕೂಡಗಿ ಗ್ರಾಮದ ಬಳಿ 4,000 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನಾ ಕೇಂದ್ರ
ಸ್ಥಾಪನೆ ಆಗುತ್ತಿದ್ದು, ಮೊದಲ ಹಂತದಲ್ಲಿ ತಲಾ 800 ಮೆ.ವ್ಯಾ.ಸಾಮರ್ಥ್ಯದ 3 ಘಟಕ ನಿರ್ಮಿಸಬೇಕಿದೆ. ಕೂಡಗಿ ಎನ್‌
ಟಿಪಿಸಿ ಕೇಂದ್ರದ ಪ್ರತಿ ಘಟಕ ಪ್ರಾಯೋಗಿಕ ಹಂತದಲ್ಲಿ ನಿರಂತರ 72 ಗಂಟೆ ಉತ್ಪಾದನಾ ಸ್ಥಿರತೆ ಕಾಯ್ದುಕೊಳ್ಳಬೇಕು. ಮೊದಲ ಘಟಕದ ಪ್ರಾಯೋಗಿಕ ಪರೀಕ್ಷೆ 2016ರ ಡಿಸೆಂಬರ್‌ 25ರಂದು ನಡೆದಿದ್ದು, ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆಗೆ ಸಿದ್ಧವಾಗಿದೆ. ಇದೀಗ ಎರಡನೇ ಘಟಕದ ಪ್ರಾಯೋಗಿಕ ಪರೀಕ್ಷೆ ಅಂತಿಮ ಘಟ್ಟ ತಲುಪಿದೆ. 450 ಮೆ.ವ್ಯಾ.ಉತ್ಪಾದನೆ ಹಾದಿ ಸವೆಸಿದ್ದು, ಜೂನ್‌ ಮಧ್ಯದ ವೇಳೆಗೆ ಪೂರ್ಣ ಪ್ರಮಾಣದ (800 ಮೆ.ವ್ಯಾ.) ಉತ್ಪಾದನೆಗೆ ಸಿದ್ಧವಾಗುವ ನಿರೀಕ್ಷೆ ಹೊಂದಲಾಗಿದೆ.

ಜೂ.15ಕ್ಕೆ ಆರಂಭ?: ರಾಜ್ಯದ ಬಹು ನಿರೀಕ್ಷಿತ ಈ ಬೃಹತ್‌ ವಿದ್ಯುತ್‌ ಉತ್ಪಾದನಾ ಕೇಂದ್ರದ ಮೊದಲ ಹಂತದ ವಿದ್ಯುತ್‌ ಉತ್ಪಾದನಾ ಯೋಜನೆ ಅನುಷ್ಠಾನಕ್ಕಾಗಿ ಕೂಡಗಿ ಎನ್‌ಟಿಪಿಸಿ ಅಧಿಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಹಗಲು-ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಮೂಲಗಳ ಪ್ರಕಾರ ಜೂನ್‌ 15ರೊಳಗೆ ಎರಡನೇ ಘಟಕ ಪೂರ್ಣ ಪ್ರಮಾಣದ ವಿದ್ಯುತ್‌ ಉತ್ಪಾದನೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಆದರೆ ಎರಡೂ ಘಟಕಗಳಿಂದ ಜೂನ್‌ ಮಾಸಾಂತ್ಯದವರೆಗೆ ಏಕಕಾಲಕ್ಕೆ 1,600 ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ಆರಂಭಿಸುವ ಗುರಿಯಿದೆ.

ಕಲ್ಲಿದ್ದಲು ಕೊರತೆ?: ಮೊದಲ ಘಟಕ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆಗೆ ಸಿದ್ಧವಾಗಿದ್ದರೂ ಕಲ್ಲಿದ್ದಲು
ಸಮಸ್ಯೆಯ ಕಾರಣ ಉತ್ಪಾದನೆಗೆ ಮುಂದಾಗಿಲ್ಲ. ಏಕೆಂದರೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಿದರೆ ಸತತ 6 ತಿಂಗಳ ಕಾಲ ಪೂರ್ಣ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಿ ಪೂರೈಕೆ ಮಾಡಲೇಬೇಕು.
ಹೀಗಾಗಿ ಕಲ್ಲಿದ್ದಲು ಕೊರತೆ ನೆಪ ಹೇಳದೆ ತಾಂತ್ರಿಕ ಪರಿವೀಕ್ಷಣೆ ಎಂದು ಹೇಳಿಕೊಂಡು ಎರಡನೇ ಘಟಕದೊಂದಿಗೆ
ಮೊದಲ ಘಟಕದ ವಿದ್ಯುತ್‌ ಉತ್ಪಾದನೆ ಆರಂಭಿಸಲು ಚಿಂತನೆ ನಡೆದಿದೆ.

ಎನ್‌ಟಿಪಿಸಿ ಕೂಡಗಿ ಘಟಕ 4000 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯ ಬಹುದೊಡ್ಡ ಯೋಜನೆ ಹೊಂದಿರುವ ಕಾರಣ
ಜಾರ್ಖಂಡ್‌ ರಾಜ್ಯದ ಫಾರಿಕಬರವಾಡಿ ಗಣಿಯನ್ನು ಕೂಡಗಿ ಕೇಂದ್ರಕ್ಕೆ ಮೀಸಲು ಇರಿಸಲಾಗಿದೆ. ಆದರೆ ಕಲ್ಲಿದ್ದಲು ಪೂರೈಕೆಗೆ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣ ಹಂತದಲ್ಲಿದ್ದು, ಮೊದಲ ಎರಡು ಘಟಕಗಳಿಗೆ ಈಗಿನ ಸ್ಥಿತಿಯಲ್ಲಿ ಕಲ್ಲಿದ್ದಲು ಪೂರೈಕೆ ಅಸಾಧ್ಯ.

Advertisement

ತೆಲಂಗಾಣ ಅವಲಂಬನೆ: ತೆಲಂಗಾಣದ ರಾಮಗುಂಡಂ ಕೇಂದ್ರದ ಕಲ್ಲಿದ್ದಲನ್ನು ಕೂಡಗಿ ಕೇಂದ್ರಕ್ಕೆ ಪಡೆಯಲಾಗುತ್ತಿದೆ.
ರಾಮಗುಂಡಂ ಕೇಂದ್ರಕ್ಕೆ ಸಿಂಗ್ರೇಣಿ ಗಣಿಯಿಂದ ಕಲ್ಲಿದ್ದಲು ಪಡೆಯಲಾಗುತ್ತಿದೆ. 2,600 ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯ ರಾಮಗುಂಡಂ ಕೇಂದ್ರವನ್ನು 4000 ಮೆ.ವ್ಯಾ.ಉತ್ಪಾದನಾ ಸಾಮರ್ಥ್ಯಕ್ಕಾಗಿ ಮೇಲ್ದರ್ಜೆಗೆ ಏರಿಸುವ ಕಾರ್ಯ ನಡೆದಿದೆ. ತೆಲಂಗಾಣದ ಈ ಕೇಂದ್ರ ಮೇಲ್ದರ್ಜೆಗೆ ಏರುವ ಹಂತದವರೆಗೆ ಕೂಡಗಿ ಮೊದಲ ಹಂತದ ಘಟಕಗಳಿಗೆ ಸಿಂಗ್ರೇಣಿ ಗಣಿಯ ಕಲ್ಲಿದ್ದಲು ಮೇಲಿನ ಅವಲಂಬನೆ ಅನಿವಾರ್ಯ. ಇನ್ನು ಕೂಡಗಿ ಎನ್‌ಟಿಪಿಸಿ ಅಧಿಕಾರಿಗಳು ನೆಪ ಹೇಳಿಕೊಂಡು ವಿದ್ಯುತ್‌ ಉತ್ಪಾದನೆ ವಿಳಂಬ ಮಾಡುವಂತಿಲ್ಲ.

ವಿಳಂಬ ಮಾಡಿದಲ್ಲಿ ತಾನು ವಿದ್ಯುತ್‌ ಪೂರೈಕೆಗೆ ಒಪ್ಪಂದ ಮಾಡಕೊಂಡಿರುವ ದೇಶದ ವಿವಿಧ ರಾಜ್ಯಗಳ ವಿದ್ಯುತ್‌
ಕಂಪನಿಗಳಿಗೆ ದಂಡ ಕಟ್ಟಬೇಕು. ಈ ಅವಮಾನ ತಪ್ಪಿಸಿ ಕೊಳ್ಳಲು ಇದೀಗ ತೆಲಂಗಾಣ ರಾಜ್ಯದ ರಾಮಗುಂಡಂ
ಕಲ್ಲಿದ್ದಲ್ಲನ್ನು ಕೂಡಗಿ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಸದ್ಯ ಕೂಡಗಿ ಕೇಂದ್ರದಲ್ಲಿ 100 ಮೆಟ್ರಿಕ್‌ ಟನ್‌ ಕಲ್ಲಿದ್ದಲು ಸಂಗ್ರಹ ವಿದ್ದು ಈ ಸಂಗ್ರಹ ಪ್ರಮಾಣವನ್ನು ನಿರಂತರ ಕಾಯ್ದುಕೊ ಳ್ಳಲು ಅಧಿಕಾರಿಗಳ ತಂಡ ಹೆಣಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next