Advertisement

ಇಂಧನ ಬೆಲೆ ಹೆಚ್ಚಳಕ್ಕೆ ಎಸ್‌ಯುಸಿಐ ಆಕ್ರೋಶ

06:03 PM Mar 25, 2022 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತಿದೆ ಎಂದು ಆರೋಪಿಸಿ ಗುರುವಾರ ಸೋಷಲಿಸ್ಟ್‌ ಯೂನಿಟ್‌ ಸೆಂಟರ್‌ ಆಫ್‌ ಇಂಡಿಯಾ (ಕಮ್ಯುನಿಸ್ಟ್‌ ) ಮುಖಂಡರು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನಾಕಾರರು ಕಟ್ಟಿಗೆ ಒಲೆಯಲ್ಲಿ ಚಹಾ ತಯಾರಿಸುವ ಮೂಲಕ ಕೇಂದ್ರ ಸರ್ಕಾರದ ಇಂಧನ ಬೆಲೆ ಹೆಚ್ಚಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಉತ್ತರಪ್ರದೇಶ ಒಳಗೊಂಡಂತೆ ಐದು ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಕೆಲವೇ ದಿನಗಳಲ್ಲಿ ಮತ್ತೆ ತೈಲೋತ್ಪನ್ನಗಳ ಬೆಲೆ ಏರಿಸಲಾಗಿದೆ. ಪೆಟ್ರೋಲ್‌ ಬೆಲೆ ಏರಿಕೆ ಬಗ್ಗೆ ಸರ್ಕಾರವನ್ನು ಟೀಕಿಸಿದಾಗ ಅದು ಜಾಗತಿಕ ನಗರಗಳ ಕಡೆಗೆ ಮತ್ತು ತೈಲ ಕಂಪನಿಗಳಿಗೆ ಕಡೆ ಕೈತೋರಿಸುತ್ತದೆ. ಆದರೆ ಚುನಾವಣೆ ಸಂದರ್ಭದಲ್ಲಿ ಬೆಲೆ ಏರಿಕೆ ಆಗದಿರುವುದನ್ನು ಈ ದೇಶ ಕಂಡಿದೆ. ಕೇಂದ್ರದ ಬಿಜೆಪಿ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ದೇಶದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆ ಗರಿಷ್ಠ ಪ್ರಮಾಣದಲ್ಲಿದೆ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಬಡ ಮಧ್ಯಮ ವರ್ಗದ ಜನರ ಬದುಕು ದುಸ್ತರವಾಗಿದೆ. ಕೊರೊನಾ ಮಹಾಮಾರಿ ಕಾಲದಲ್ಲಂತೂ ಯಾವುದನ್ನೂ ಲೆಕ್ಕಿಸದೆ ಲಾಭ ಮಾಡಿಕೊಂಡ ಶ್ರೀಮಂತರಿಗೆ ಯಾವುದೇ ತೆರಿಗೆ ವಿಧಿ ಸದ ಕೇಂದ್ರ ಸರ್ಕಾರ, ಬಡವರ ಮೇಲೆ ತೆರಿಗೆಯ ಬರೆ ಎಳೆದಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು, ತಕ್ಷಣ ಬೆಲೆ ಏರಿಕೆಯನ್ನು ಹಿಂಪಡೆಯಬೇಕು ಎಂದು
ಒತ್ತಾಯಿಸಿದರು.

ರಷ್ಯಾ ಮತ್ತು ಉಕ್ರೇನ್‌ ಯುದ್ಧದ ನೆಪವೊಡ್ಡಿ ಬೆಲೆ ಏರಿಕೆ ಮಾಡಲಾಗಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ ಗೆ 135 ಡಾಲರ್‌ನಿಂದ 100 ಡಾಲರ್‌ ಗೆ ಇಳಿದಿದೆ. ಆದರೂ ಡೀಸೆಲ್‌ ಸಗಟು ದರವನ್ನು ಲೀಟರ್‌ಗೆ 25 ರೂಪಾಯಿ ಏರಿಕೆ ಮಾಡಿರುವುದರಿಂದ ಸಾರಿಗೆ ಸಾಗಾಟದ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ. ಪೆಟ್ರೋಲ್‌ ದರದ ಹೆಚ್ಚಳದಿಂದ ದಿನ ನಿತ್ಯ ಬಳಸುವ ದ್ವಿಚಕ್ರ ಸೇರಿದಂತೆ ಎಲ್ಲ ವಾಹನಗಳ ವೆಚ್ಚವೂ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ್‌ ಕೈದಾಳೆ, ಪರಶುರಾಮ್‌, ಅನಿಲ್‌ಕುಮಾರ್‌, ಅಣಬೇರು ತಿಪ್ಪೇಸ್ವಾಮಿ, ಭಾರತಿ, ನಾಗಜ್ಯೋತಿ, ನಾಗಸ್ಮಿತಾ, ಪುಷ್ಪಾ,
ಕಾವ್ಯ, ಪೂಜಾ ನಂದಿಹಳ್ಳಿ, ಶಿವಾಜಿ ರಾವ್‌, ಚಿರಂಜೀವಿ, ಬೀರಲಿಂಗಪ್ಪ, ಲೋಕಪ್ಪ, ಡಿ.ರವಿ, ಹಿರೇಮಠ, ವಿರೂಪಾಕ್ಷಪ್ಪ ದೊಡ್ಡಮನಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next