Advertisement

ಎಕ್ಕಾರು ನದಿಗೆ ಕಟ್ಟಕಟ್ಟಿದ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು

12:31 PM Jan 14, 2018 | Team Udayavani |

ಎಕ್ಕಾರು: ಇಲ್ಲಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನೂದಬೈಲು ಪಡ್ಡಾಯಿ ಗುಂಡಿಯಲ್ಲಿ ಎಕ್ಕಾರು ನದಿಗೆ ಕಟ್ಟ ಕಟ್ಟಿ ನೀರು ಶೇಖರಣೆಯಾಗುವಂತೆ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಶನಿವಾರ ಊರಿನ ಕೃಷಿಕರೊಂದಿಗೆ ಒಗ್ಗೂಡಿ ಮಾಡಿದ್ದಾರೆ. ಇದು ಈ ಪ್ರದೇಶದಲ್ಲಿ ಕೃಷಿಗೆ ಹೆಚ್ಚು ಸಹಕಾರಿಯಾಗಿದೆ.

Advertisement

ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟಿನ ಬೇಡಿಕೆಯನ್ನು ಗ್ರಾಮಸ್ಥರು ಮಾಡಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ. ಹೀಗಾಗಿ ಶನಿವಾರ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪದವಿ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ನದಿಯ ನೀರಿಗೆ ಕಟ್ಟ ಕಟ್ಟುವ ಮೂಲಕ ನೀರನ್ನು ಶೇಖರಣೆ ಮಾಡಿದ್ದಾರೆ.

ಎಕ್ಕಾರು ನದಿಗೆ ಕಿಂಡಿ ಅಣೆಕಟ್ಟು ಸುಮಾರು 2 ಕಿ.ಮೀ. ದೂರದಲ್ಲಿದೆ. ಇದರಿಂದ ಈ ಪ್ರದೇಶದ ಕೃಷಿಕರಿಗೆ ಹೆಚ್ಚು ಪ್ರಯೋಜನವಾಗುತ್ತಿರಲಿಲ್ಲ. ಇದನ್ನು ಮನಗಂಡು ಕೃಷಿಕರು, ಕಾಲೇಜಿನ ಎನ್ನೆಸ್ಸೆಸ್‌ ಯೋಜನಾಧಿಕಾರಿಯ ಬಳಿ ನೆರವು ಕೇಳಿದ್ದರು. ನದಿಯ ನೀರು ಈಗಾಗಲೇ 6 ಅಡಿಯಷ್ಟು ಏರಿಕೆಯಾಗಿದೆ. ಇಲ್ಲಿ ಶೇಖರಣೆಯಾಗುವ ನೀರಿನಿಂದ ಸುಮಾರು 30 ಎಕರೆ ಕೃಷಿ ಭೂಮಿಗೆ ನೀರುಣಿಸುವ ಜತೆಗೆ ಸುಮಾರು 50 ಮನೆಗಳ ಬಾವಿಯ ನೀರಿನ ಮಟ್ಟ ಏರಿಕೆಯಾಗಲು ಸಾಧ್ಯವಾಗುತ್ತದೆ.

ಎನ್ನೆಸ್ಸೆಸ್‌ ಯೋಜನಾಧಿಕಾರಿ ಶಾಲಿನಿ, ಉಪನ್ಯಾಸಕಿ ಪವಿತ್ರಾ, ದೈಹಿಕ ಶಿಕ್ಷಣ ನಿರ್ದೇಶಕ ಅಶ್ವತ್ಥ್ ಅವರೊಂದಿಗೆ ಊರಿನ ಕೃಷಿಕರಾದ ದೇವದಾಸ್‌, ವಿಜೇತ್‌, ರಾಜೇಶ್‌, ತಿಮ್ಮಪ್ಪ, ದಯಾನಂದ, ವಸಂತ ಅವರು ಸಹಕರಿಸಿದ್ದಾರೆ.

ಕಳೆದ ರವಿವಾರ ಕೊಳಂಬೆಯಲ್ಲಿ ಒಡ್ಡು ನಿರ್ಮಾಣ ಮಾಡಿದ ಈ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಶನಿವಾರ
ಎಕ್ಕಾರು ನದಿಗೆ ಕಟ್ಟ ಕಟ್ಟಿ ಓಡುವ ನೀರನ್ನು ಶೇಖರಣೆ ಮಾಡಿದ್ದಾರೆ. ಇಲ್ಲಿಯೂ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಪ್ರದೇಶ ಅದರಲ್ಲೂ ಕುಗ್ರಾಮವೆನಿಸಿದ ಈ ಪ್ರದೇಶಕ್ಕೆ ಬಂದು ನೀರಿನ ಬಗ್ಗೆ ಕಾಳಜಿ ವಹಿಸಿ, ಸಹಕಾರ ನೀಡಿದ ವಿದ್ಯಾರ್ಥಿಗಳು, ಉಪನ್ಯಾಸಕರಿಗೆ ಕೃಷಿಕರು ಕೃತಜ್ಞತೆ ಸಲ್ಲಿಸಿದರು.

Advertisement

ವಿದ್ಯುತ್‌, ಸೀಮೆಎಣ್ಣೆ ಉಳಿಕೆ
ಈ ಕಟ್ಟ ನಿರ್ಮಾಣದಿಂದ ಅಂತರ್ಜಲ ಮಟ್ಟ ಏರಿಕೆ ಕಂಡಿದೆ. ಇದರಿಂದ ವಿದ್ಯುತ್‌, ಸೀಮೆಎಣ್ಣೆ ಪಂಪ್‌ಗ್ಳ ಬಳಕೆ ಕಡಿಮೆಯಾಗಲಿದೆ. ಈಗಾಗಲೇ ತೋಟದಲ್ಲಿ ನೀರಿನ ಅಂಶ ಕಂಡು ಬಂದಿದೆ. ಇದರಿಂದ ವಿದ್ಯುತ್‌, ಸೀಮೆಎಣ್ಣೆ ಉಳಿಕೆಯಾಗಲಿದೆ. ವಿದ್ಯುತ್‌ ಉಳಿಕೆಯಾಗಲಿದೆ ಎನ್ನುತ್ತಾರೆ ಕೃಷಿಕರು.

Advertisement

Udayavani is now on Telegram. Click here to join our channel and stay updated with the latest news.

Next