Advertisement

ಸೇವಾ ಮನೋಭಾವ ನಾಯಕತ್ವ ಬೆಳೆಸುವ ಎನ್ನೆಸ್ಸೆಸ್‌

07:14 AM Feb 13, 2019 | |

Qವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್ನೆಸ್ಸೆಸ್‌ ಹೇಗೆ ಪೂರಕ?
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ನಮ್ಮ ಧ್ಯೇಯ ವಾಕ್ಯವೇ ‘ನನಗಲ್ಲ; ನಿನಗೆ’ ಎಂಬುದಾಗಿ. ಈಗ ಕೂಡು ಕುಟುಂಬ ಭಾಗ್ಯ ಕಡಿಮೆಯಾಗಿ ನಾನು; ನನ್ನದು ಎಂಬ ಸ್ವಾರ್ಥವೇ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಜನರೊಂದಿಗೆ ಸೇರಿಕೊಂಡು ನನಗಲ್ಲ; ನಿನಗೆ ಎಂಬ ಘೋಷದೊಡನೆ ನಮ್ಮ ಜನ, ನಮ್ಮ ದೇಶ, ನಮ್ಮ ಸಮಾಜಕ್ಕಾಗಿ ದುಡಿಯಬೇಕು ಎಂಬ ಭಾವನೆಯನ್ನು ಎನ್ನೆಸ್ಸೆಸ್‌ ಕಲಿಸಿಕೊಡುತ್ತದೆ.

Advertisement

Qಎನ್ನೆಸ್ಸೆಸ್‌ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುತ್ತದೆ ಹೇಗೆ?
ಸಣ್ಣ ಸಣ್ಣ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಎನ್ನೆಸ್ಸೆಸ್‌ ಸೃಷ್ಟಿಸಿ ಕೊಡುತ್ತದೆ. ಕಾರ್ಯಕ್ರಮ ಸಂಘಟನೆ, ಶ್ರಮದಾನ ತಂಡಗಳಿಗೆ ನಾಯಕತ್ವ ಇದೆಲ್ಲ ವಿದ್ಯಾರ್ಥಿಗಳನ್ನು ಬೆಳೆಸುವ ವೇದಿಕೆಗಳಾಗಿವೆ. ಇಂತಹ ಬೇರೆ ಬೇರೆ ಸಂದರ್ಭದಲ್ಲಿ ನಾಯಕತ್ವ ತೆಗೆದುಕೊಂಡು ಮುಂದೆ ಆತ ಉತ್ತಮ ನಾಯಕನಾಗಿ ರೂಪುಗೊಳ್ಳುವಲ್ಲಿ ಉತ್ತೇಜನ ನೀಡುತ್ತದೆ.

Qಎನ್ನೆಸ್ಸೆಸ್‌ನಲ್ಲಿ ಜೀವನ ಪಾಠವೇನಿದೆ?
ಸಂಬಂಧಗಳನ್ನು ಬೆಳೆಸಿಕೊಳ್ಳುವುದು, ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದು, ಹೊಂದಾಣಿಕೆ, ಸಹಬಾಳ್ವೆಯ ಜೀವನ ಸಹಿತ ಸ್ವಾವಲಂಬಿ ಹಾಗೂ ಸ್ವತಂತ್ರ ಬದುಕು ರೂಪಿಸುವ ಜೀವನಪಾಠ ಎನ್ನೆಸ್ಸೆಸ್‌ ಕಲಿಸುತ್ತದೆ. ಕರ್ತವ್ಯ ಅರ್ಥ ಮಾಡಿಕೊಂಡು, ಮೌಲ್ಯಾಧಾರಿತ ಬದುಕನ್ನು ರೂಪಿಸಲು ಇದೊಂದು ವೇದಿಕೆ. ವೃತ್ತಿ ಗೌರವ, ವ್ಯಕ್ತಿ ಗೌರವ ಬೆಳೆಸಿಕೊಳ್ಳುವುದು, ಸಾಮುದಾಯಿಕ, ಪರಿಸರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಮತ್ತು ಅದನ್ನು ಪರಿಹರಿಸುವ ಪ್ರಯತ್ನಕ್ಕೆ ಮುಂದಾಗುವುದನ್ನು ತಿಳಿಸಿಕೊಡುತ್ತದೆ. ಪ್ರಾಕೃತಿಕ ವಿಕೋಪ ಘಟಿಸಿದಾಗ ಯಾವ ರೀತಿಯಲ್ಲಿ ತಯಾರಾಗಬೇಕು ಎಂಬ ತರಬೇತಿಯೂ ಸಿಗುತ್ತದೆ.

Qಮನೆ ಭೇಟಿಯಿಂದ ಕಲಿಯುವುದೇನಿದೆ?
ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಗಳು ಹೆಚ್ಚಾಗಿ ಗ್ರಾಮೀಣ ಭಾಗ ಗಳಲ್ಲೇ ನಡೆಯುತ್ತದೆ. ಮನೆ ಭೇಟಿ ಕಾರ್ಯಕ್ರಮದಿಂದ ಅಲ್ಲಿನ ಸಮಸ್ಯೆ, ವಿದ್ಯಾಭ್ಯಾಸ, ಉದ್ಯೋಗಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಸಮಸ್ಯೆ ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ.

Q ಶುಚಿತ್ವ, ಪರಿಸರ ಸಂರಕ್ಷಣೆಗೆ ಎನ್ನೆಸ್ಸೆಸ್‌ ಹೇಗೆ ಸಹಕಾರಿ?
 ವೈಯಕ್ತಿಕ ಸ್ವಚ್ಛತೆ ಬಗ್ಗೆ ಶಿಬಿರದ ಆರಂಭದಲ್ಲಿಯೇ ಹೇಳಿಕೊಡಲಾಗುತ್ತದೆ. ವಿದ್ಯಾರ್ಥಿಗಳ ತಂಡ ರಚನೆ ಮಾಡುವಾಗ ಸ್ವಚ್ಛತೆಗೇ ಒಂದು ತಂಡವನ್ನು ನೇಮಿಸಲಾಗುತ್ತದೆ. ಅದನ್ನು ವಿದ್ಯಾರ್ಥಿಗಳು ಜವಾಬ್ದಾರಿ ತೆಗೆದುಕೊಂಡು ನಿರ್ವಹಿಸುತ್ತಾರೆ. ಅಷ್ಟೇ ಅಲ್ಲದೆ, ಸ್ವಚ್ಛತಾ ಸೇವೆ ಕೆಲವೊಮ್ಮ ಹಲವರ ಮನಃಪರಿವರ್ತನೆಗೂ ಕಾರಣವಾಗುತ್ತದೆ.

Advertisement

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next