ಅದು 2022ರ ಜೂನ್ ತಿಂಗಳ ಕೊನೆಯ ವಾರ. ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ವಿದ್ಯಾರ್ಥಿಗಳಾದ ಪ್ರತೀಕ್, ದೀಪಕ್, ಅಕ್ಷಯ್, ಆಶೀಶ್ ಹಾಗೂ ನನ್ನನ್ನು ಉಡುಪಿಯ ಅಂಬಲಪಾಡಿಯಲ್ಲಿ ನಡೆಯುತ್ತಿದ್ದ ವಿಪತ್ತು ನಿರ್ವಹಣಾ ಶಿಬಿರಕ್ಕೆ ಕಳುಹಿಸಿದ್ದರು.
ಅದು ಹನ್ನೆರಡು ದಿನಗಳ ಶಿಬಿರ. ಅಲ್ಲಿ ನಮಗಿದ್ದ ಕೆಲಸ ಅವರು ಹೇಳಿದ್ದನ್ನು ಕಿವಿಯರಳಿಸಿ ಕೇಳುವುದು ಮಾತ್ರ. ಶಿಬಿರ ಬೆಳಗ್ಗೆ 10 ಗಂಟೆಗೆ ಪ್ರಾರಂಭವಾದರೆ ಮುಗಿಯುತ್ತಿದ್ದದ್ದು ಸಂಜೆ 4ರ ಹೊತ್ತಿಗೆ. ಹೆಚ್ಚು ಕಡಿಮೆ ಕಾಲೇಜಿನ ಸಮಯವೇ. ಕಾಲೇಜಿನಲ್ಲಿ ಕೂರಲು ಸಿದ್ಧವಿರದ ಮಾನಸ್ಸುಗಳು ಕೆಲವೊಮ್ಮೆ ಇಲ್ಲಿ ಏಕಾಗ್ರತೆಯಿಂದ ಹೇಳಿದ್ದನ್ನು ಕೇಳುತಿದ್ದವು. ಏಕೆಂದರೆ ಅಲ್ಲಿ ಸಿಗುತ್ತಿದ್ದ ಮಾಹಿತಿ ಅಂತಹದ್ದಾಗಿತ್ತು.
ಆ ಹನ್ನೆರಡು ದಿನದಲ್ಲಿ ಅದು 4ನೇ ದಿನ, ಪ್ರತೀ ದಿನ ಕಾರ್ಯಕ್ರಮದ ನಡುವೆ 11 ಗಂಟೆಗೆ ಚಹಾ ವಿರಾಮ ಎಂದು 10 ನಿಮಿಷಗಳ ಬಿಡುವಿ ರುತ್ತಿತ್ತು. ಅಂದು ಕೂಡ ವಿರಾಮ ಕೊಟ್ಟಿದ್ದರು. ಎಂದಿನಂತೆ ನಾವು ನೇರವಾಗಿ ಚಹಾಗಾಗಿ ಸರತಿ ಸಾಲಿನಲ್ಲಿ ನಿಂತೆವು. ಆದರೆ ನಮ್ಮಲೊಬ್ಬ ಬಂದಿರಲಿಲ್ಲ. ನೇರವಾಗಿ ಆತ ಉಳಿದುಕೊಂಡಿದ್ದ ಕೊಣೆ ಕಡೆಗೆ ಜಾರಿದೆವು. ಹೋಗುತಿದ್ದಂತೆ ಅಲ್ಲಿದ್ದ ನಾಲ್ವರಲ್ಲಿ ಒಬ್ಬ ತಿರುಗುವುದಕ್ಕೆ ಹೋಗೋಣ ಎಂದ.
ಆ ಧ್ವನಿ ಮಾತ್ರ ಯಾರದ್ದು ಎಂಬುದು ಇಂದಿಗೂ ತಿಳಿದಿಲ್ಲ. ಆದರೆ ಅದಕ್ಕೆ ಪ್ರತಿಧ್ವನಿ ನನ್ನದೆ “ಆಗುಂಬೆ’ ಎಂದು, ಮತ್ತೂಬ್ಬ “ನಾನು ರೆಡಿ’ ಎಂದು, ಮೂವರು ಹೊರಟ ಮೇಲೆ ನಾಲ್ಕನೆಯವನನ್ನು ಒತ್ತಾಯಿಸುವ ಆವಶ್ಯಕತೆ ಇಲ್ಲವೆಂದು ನಮಗೆ ಆದಾಗಲೇ ಅರಿವಾಗಿತ್ತು. ಅಂತೂ ಇಂತೂ ಒಂದೇ ಒಂದು ನಿಮಿಷದ ಯೋಜನೆ ನಮ್ಮನ್ನು ಮೂರು ನಿಮಿಷದೊಳಗೆ ಬಟ್ಟೆ ಬದಲಾಯಿಸಿ ಬಿಡಾರ ಬಿಟ್ಟ ಜಾಗದಿಂದ ಆಗುಂಬೆ ಕಡೆಗೆ ಗಾಡಿ ತಿರುಗಿಸುವ ಹಾಗೆ ಮಾಡಿತ್ತು.
ಮಳೆಗಾಲ ಆಗಿದ್ದರಿಂದ ಯಾವ ಸಂದರ್ಭದಲ್ಲಿ ಮಳೆ ಸುರಿಯಬಹುದೆಂದು ಹೇಳಲು ಸಾಧ್ಯವಿಲ್ಲ. ಆದರೆ ಅಂದು ಮಾತ್ರ ಉಡುಪಿಯ ಸುತ್ತಮುತ್ತ ಮುಂಜಾನೆಯಿಂದಲೂ ಸೂರ್ಯನ ಕಿರಣಗಳು ಪಿಸುಗುಡುತ್ತಿದ್ದವು. ಅದೇ ಧೈರ್ಯದ ಮೇಲೆ ಪ್ರಯಾಣ ಆರಂಭಿಸಿದೆವು. ನಾಮ್ಮ ನಾಲ್ವರ ತರಗತಿಗಳು ಬೇರೆ ಬೇರೆಯಾಗಿದ್ದರೂ ಗುಣ ಮಾತ್ರ ಒಂದೇ.
ಇದೇ ನಮ್ಮ ತಲೆಹರಟೆಗೆ ಮತ್ತೂಂದು ದಾರಿಯಾಗಿತ್ತು. ನಾವೆಷ್ಟು ಕಡಿಮೆ ಸಮಯದಲ್ಲಿ ಯೋಜನೆಯೊಂದನ್ನು ಹಾಕಿ ಹೊರಟಿದ್ದೆವೊ ಅದೇ ರೀತಿ ಮಳೆಯೂ ನಮ್ಮನ್ನು ಚಳಿಯಲ್ಲಿ ನಡುಗುವಂತೆ ಮಾಡಿತ್ತು. ಹೆಬ್ರಿ ತಲುಪುವ ಮೊದಲೇ ಮಳೆಗೆ ನೆನೆದಾಗಿತ್ತು. ಆ ಹೊತ್ತಿಗೆ ಬಿಸಿಲು ಬಂದರೆ ಅದೇ ಸ್ವರ್ಗದಂತೆ ಕಾಣುವ ಪರಿಸ್ಥಿತಿ ನಮ್ಮದಾಗಿತ್ತು, ಹಾಗೆ ಕಂಡದ್ದು ನಮಗೆ ಹೆಬ್ರಿ. ಅಲ್ಲಿಂದ ಖಾಲಿ ಹೊಟ್ಟೆಯಲ್ಲಿ ಮುಂದೆ ಹೋಗಲು ಹೆಬ್ರಿಯ ಡೋಲ್ಫಿನ್ ಹೋಟೆಲ್ ಬಿಡಲೇ ಇಲ್ಲ.
ಊಟ ಮುಗಿಸಿ, ಅಲ್ಲಿದ್ದ ಫ್ಯಾನ್ ಗಾಳಿಗೆ ಮೈ ಒಡ್ಡಿ ಬಟ್ಟೆ ಒಣಗಿಸಿಕೊಂಡು ಮತ್ತೆ ಮುಂದೆ ಹೊರಟೆವು. ಅದೆಷ್ಟು ದಿನದ ಮಳೆ ಬಾಕಿ ಇತ್ತೇನೋ ಗೊತ್ತಿಲ್ಲ, ನಾವು ಆಗುಂಬೆಯ ನಾಲ್ಕನೇ ತಿರುವು ಏರಿದ್ದೇ ತಡ ಸರ ಸರನೆ ಮಳೆ ಸುರಿಯಲಾರಂಭಿಸಿತು. ಪ್ರತೀ ತಿರುವು ಏರಿದ ಮೇಲೆ ಈಗ ಮಳೆ ಕಡಿಮೆಯಾಗಬಹುದೇನೊ ಎಂದಂದುಕೊಳ್ಳುತಿದ್ದೆವು, ಆದರೆ ಪುನಃ ಮಳೆ ಜೋರಾಗುತ್ತಿತ್ತೇ ಹೊರತು ಕಡಿಮೆಯಾಗಲಿಲ್ಲ. ಮೇಲಿನ ಕೊನೆಯ ಎರಡು ತಿರುವುಗಳಲ್ಲಿ ಏನು ಕಾಣದಂತಾಗಿತ್ತು. ಘಾಟಿಯ ಮೇಲೆ ಬಂದದ್ದೇ ತಡ, ಗಾಡಿಯನ್ನು ಬದಿಗೆ ನಿಲ್ಲಿಸಿ ಅಲ್ಲಿದ್ದ ಒಂದು ಶೀಟ್ ಹಾಕಿದ ಸಣ್ಣ ಲಗೇಜ್ ಕೊಠಡಿಯಂತಿದ್ದ ಗೂಡಲ್ಲಿ ನಿಂತೆವು.
ಎಷ್ಟು ಹೊತ್ತು ಕಾದರೂ ಮಳೆ ನಿಲ್ಲುವಂತೆ ಕಾಣಲಿಲ್ಲ. ಅಲ್ಲಿಯವರೆಗೆ ಆಗುಂಬೆ ಎನ್ನುತ್ತಿದ್ದ ಮನಸ್ಸು, ಮಳೆಯ ಹಠದೆದುರಿಗೆ ಕುಂದಾದ್ರಿ ಕಡೆಗೆ ಹೋಗಲೇಬೇಕು ಎಂದು ಮಳೆಗೆ ಮೈ ಒಡ್ಡಿ ಮೊಬೈಲ್ ತೋರಿಸುತಿದ್ದ ದಾರಿಯ ಮೂಲಕ ಮುಂದೆ ಸಾಗಿದೆವು. ಹೋಗುತ್ತಿರುವ ರಸ್ತೆಯ ಎರಡು ಭಾಗದಲ್ಲೂ ಕಾಡು ಆವರಿಸಿಕೊಂಡಿದ್ದರಿಂದ ಆಗೊಮ್ಮೆ ಈಗೊಮ್ಮೆ ಭಯವಾಗುತ್ತಿತ್ತು. ಕುಂದಾದ್ರಿ ಇನ್ನೇನು ಬಂದೇ ಬಿಟ್ಟಿತು ಎಂದುಕೊಂಡರೆ ಅದರ ಹಿಂದಿದ್ದ ತಿರುವುಗಳು ಮತ್ತೂಮ್ಮೆ ಆಗುಂಬೆಯನ್ನು ಕಣ್ಣೆದುರಿಗೆ ತಂದಿತ್ತು.
ಆ ಕಾಡಿನುದ್ದಕ್ಕೂ ನಮ್ಮ ಎರಡು ಗಾಡಿಗಳು ಬಿಟ್ಟರೆ ಬೇರೆ ಯಾವ ನರ ಮಾನವನೂ ಕಾಣಲೇ ಇಲ್ಲ. ಅಂತೂ ಕೊನೆಗೆ ಕುಂದಾದ್ರಿ ತಲುಪಿದೆವು. ಆದರೆ ಅಲ್ಲೊಂದು ವಿಸ್ಮಯ ನಮ್ಮನ್ನು ಬೆರಗು ಗೊಳಿಸಲು ಕಾತುರದಿಂದ ಕಾದು ಕುಳಿದಿತ್ತು. ಕುಂದಾದ್ರಿ ಸೇರಿದ ಕೂಡಲೇ ಮತ್ತೆ ಮಳೆ ಜೋರಾಗಿತ್ತು. ಆದರೂ ಅದನ್ನು ಲೆಕ್ಕಿಸದೆ ಮಳೆಯಲ್ಲೇ ನೆನೆದೆವು, ಮೊದಲು ಮೊದಲು ಏನು ಗೊತ್ತಾಗಲಿಲ್ಲ, ಆದರೆ ಅನಂತರ ಎಲ್ಲವು ತಿಳಿಯಿತು. ಅಲ್ಲಿ ಒಮ್ಮೆ ಜೋರಾಗಿ ಗಾಳಿ ಬೀಸಿದರೆ ಅದರ ಹಿಂದಿನಿಂದಲೇ ಮಳೆ ಸುರಿಯುತಿತ್ತು, ಇದು ಒಮ್ಮೆಗೆ ನಮಗೆ ಗಾಬರಿಯನ್ನುಂಟು ಮಾಡಿದ್ದರೂ ಅನಂತರ ಒಂದು ರೀತಿಯಲ್ಲಿ ಖುಷಿ ಕೊಡುತಿತ್ತು.
ಬಹುಷಃ ನನ್ನ ಬದುಕಿನಲ್ಲಿ ಅಂದು ಮಳೆಯಲ್ಲಿ ನೆನೆದಷ್ಟು ಹಿಂದೆಂದೂ ನೆನೆದಿರಲಿಲ್ಲ. ಎಲ್ಲೋ ಇದ್ದು ಏನೋ ಮಾಡುತಿದ್ದವರು ಇನ್ನೆಲ್ಲಿಗೋ ಹೋಗಿದ್ದೆವು. ನಿರೀಕ್ಷೆಗೂ ಮೀರಿ ಕುಂದಾದ್ರಿ ನಮ್ಮನ್ನು ಸ್ವಾಗತಿಸಿತ್ತು. ಪ್ರತಿಯೊಂದು ಪ್ರವಾಸ ಒಂದೊಂದು ರೀತಿಯ ಅನುಭವ ಕೊಡುತ್ತದೆ, ಆದರೆ ಇದು ಮಾತ್ರ ಎಂದಿಗೂ ಮಾಸಿ ಹೋಗದಂತಹ ಅನುಭವಗಳನ್ನು ಕಟ್ಟಿಕೊಟ್ಟಿದೆ.
–
ರಾಹುಲ್ ಆರ್. ಸುವರ್ಣ
ಆಳ್ವಾಸ್ ಕಾಲೇಜು, ಮೂಡಬಿದಿರೆ