ಹೊಸದಿಲ್ಲಿ : ಭಾರತ ಸಂಜಾತ ಪ್ರಥಮ ವ್ಯಕ್ತಿಗಳ ಸಂಸದೀಯ ಸಮಾವೇಶ (ಪಿಐಓ)ದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಹೇಗೆ ರೂಪಾಂತರಗೊಳ್ಳುತ್ತಿದೆ ಎಂಬ ಒಳನೋಟವನ್ನು ನೀಡಿ, ಕಳೆದ ಮೂರರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶವು ಧನಾತ್ಮಕ ಬದಲಾವಣೆಯನ್ನು ಕಂಡಿದೆ ಎಂದು ಹೇಳಿದರು.
ಇಲ್ಲಿನ ಚಾಣಕ್ಯಪುರಿಯಲ್ಲಿನ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ನಡೆದಿ ಮೊದಲ ಪಿಐಓ ಸಮ್ಮೇಳನವನ್ನು ಉದ್ಘಾಟಿಸಿ ಪ್ರಧಾನಿ ಮೋದಿ ಮಾತನಾಡಿದರು. ಈ ಸಮಾವೇಶದಲ್ಲಿ ಭಾರತ ಸಂಜಾತರಾದ 23 ದೇಶಗಳ 17 ಮೇಯರ್‌ಗಳು ಮತ್ತು 124 ಸಂಸದೀಯ ಸದಸ್ಯರು ಭಾಗವಹಿಸುತ್ತಿದ್ದಾರೆ.
ಪ್ರತೀ ವರ್ಷ ಜನವರಿ 9ರಂದು ಪ್ರವಾಸಿ ಭಾರತೀಯ ದಿವಸ್ ಎಂದು ಆಚರಿಸಲಾಗುತ್ತಿದೆ. ಸಾಗರೋತ್ತರ ಭಾರತ ಸಂಜಾತರು ತಮ್ಮ ಮಾತೃ ದೇಶಕ್ಕೆ ನೀಡುವ ಮಹತ್ತರ ಕಾಣಿಕೆಗಳನ್ನು ಈ ಸಂದರ್ಭದಲ್ಲಿ ಕೊಂಡಾಡಲಾಗುತ್ತದೆ.
“ನೀವು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ವಾಸವಾಗಿದ್ದೀರಿ. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಭಾರತ ಕುರಿತ ವಿಶ್ವ ಪರಿಕಲ್ಪನೆ ಹೇಗೆ ಬದಲಾಗಿದೆ ಎಂಬುದು ನಿಮಗೂ ಗೊತ್ತಾಗಿರಬಹುದು. ಜಾಗತಿಕವಾಗಿ ಭಾರತದವನ್ನು ಈಗ ಬೆಳಕಿಗೆ ತರಲಾಗುತ್ತಿದೆ; ಭಾತಕ್ಕೆ ಹಿಂದೆಂದಿಗಿಂತಲೂ ಅಧಿಕ ಮಹತ್ವವನ್ನು ನೀಡಲಾಗುತ್ತಿದೆ’ ಎಂದು ಪ್ರಧಾನಿ ಮೋದಿ ಹೇಳಿದರು.
ಭಾರತ ಸಂಜಾತ ಪೌರರು ತಾವು ವಾಸವಾಗಿರುವ ಇತರ ದೇಶಗಳ ಅಭಿವೃದ್ಧಿಗೆ ನೀಡುತ್ತಿರುವ ಮಹತ್ವದ ಕಾಣಿಕೆಯನ್ನು ಪ್ರಧಾನಿ ಮೋದಿ ಮುಕ್ತ ಕಂಠದಿಂದ ಪ್ರಶಂಸಿಸಿದರು.
ಎನ್‌ಆರ್‌ಐಗಳು ಮತ್ತು ಪಿಐಓಗಳು ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮಹತ್ವದ ಕಾಣಿಕೆಯನ್ನು ನೀಡಬಹುದಾಗಿದೆ; ಆ ಸಾಮರ್ಥ್ಯ, ಬದ್ಧತೆ ನಿಮ್ಮಲ್ಲಿದೆ ಎಂದು ಮೋದಿ ಹೇಳಿದರು.