Advertisement

ರತ್ನಮಂಜರಿ ಹಾಡು-ಹರಟೆ : ವಿದೇಶಿ ಕನ್ನಡಿಗರ ಸಿನಿಪ್ರೇಮ

09:10 AM Apr 27, 2019 | Team Udayavani |

‘ರತ್ನಮಂಜರಿ…’ -ಇದು ಎನ್‌.ಆರ್‌.ಐ. ಕನ್ನಡಿಗರು ಸೇರಿ ಪ್ರೀತಿಯಿಂದ ನಿರ್ಮಿಸಿದ ಚಿತ್ರ. ನಿರ್ದೇಶಕ ಪ್ರಸಿದ್ಧ್ ಚಿತ್ರ ಮುಗಿಸಿ, ಇದೀಗ ಬಿಡುಗಡೆ ಹಂತಕ್ಕೆ ತಂದಿದ್ದಾರೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಸಾಕ್ಷಿಯಾದರು. ಹಂಸಲೇಖ ಅವರ ದೇಸಿ ಕಾಲೇಜಿನಲ್ಲಿ ಕಲಿತ ಹುಡುಗ ಚಿತ್ರಕ್ಕೆ ಸಂಗೀತ ನಿರ್ದೇಶಕನಾದರೆ, ಟೆಂಟ್‌ ಶಾಲೆಯಲ್ಲಿ ತರಬೇತಿ ಪಡೆದವರು ಈ ಚಿತ್ರದ ನಾಯಕ, ನಾಯಕಿ. ಹಾಗಾಗಿ ತಮ್ಮ ಶಿಷ್ಯಂದಿರ ಚಿತ್ರವಾದ್ದರಿಂದ ಇಬ್ಬರೂ ಚಿತ್ರಕ್ಕೆ ಶುಭಹಾರೈಸಿ, ಎಲ್ಲರಿಗೂ ಗೆಲುವು ಸಿಗಲಿ ಎಂದರು.

Advertisement

ನಿರ್ದೇಶಕ ಪ್ರಸಿದ್ಧ್ ಎಂದಿಗಿಂತಲೂ ಖುಷಿಯಲ್ಲಿದ್ದರು. ಕಾರಣ, ಚಿತ್ರದ ಆಡಿಯೋ ಬಿಡುಗಡೆಗೆ ಬಂದಿದ್ದ ಇಬ್ಬರು ದಿಗ್ಗಜರು. ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರ. ಹೊಸಬರೇ ಚಿತ್ರದ ಹೈಲೈಟ್‌. ಹೊಸಬರೇಕೆ, ಸ್ವಲ್ಪ ಗೊತ್ತಿರುವ ಹೀರೋಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಅಂತ ನಿರ್ಮಾಪಕರು ಹೇಳಿದ್ದರು. ಆದರೆ, ನಾನು ರಿಸ್ಕ್ ಆದರೂ ಪರವಾಗಿಲ್ಲ ಅಂತ ಚಾಲೆಂಜ್‌ ಮಾಡಿ ಈ ಚಿತ್ರ ಮಾಡಿದ್ದೇನೆ. ಈಗ ಸಿನಿಮಾ ಮಾಡಿದ್ದಕ್ಕೂ ತೃಪ್ತಿ ಎನಿಸಿದೆ. ಚಿತ್ರ ನಾವಂದುಕೊಂಡಿದ್ದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ’ ಮಾಧ್ಯಮ ಬೆಂಬಲ ಕೊಟ್ಟು, ಹೊಸಬರನ್ನು ಹರಸಬೇಕು’ ಎಂದರು.

ನಾಯಕ ರಾಜ್‌ ಚರಣ್‌ ಅವರಿಲ್ಲಿ ಎನ್‌ಆರ್‌ಐ ಕನ್ನಡಿಗನಾಗಿ ಕಾಣಿಸಿಕೊಂಡಿದ್ದಾರಂತೆ. ಒಂದು ಕಾರಣದ ಮೇಲೆ ಭಾರತಕ್ಕೆ ಬರುವ ಪಾತ್ರ ಅದಾಗಿರುವುದರಿಂದ ಅಲ್ಲೊಂದು ವಿಶೇಷತೆ ಇದೆ. ಅದನ್ನು ಸಿನಿಮಾದಲ್ಲೇ ನೋಡಬೇಕು. ವಿದೇಶದಲ್ಲಿರುವ ಕನ್ನಡಿಗರು ಕನ್ನಡವನ್ನೇ ಮರೆತಿದ್ದಾರೆ ಎಂಬ ಆರೋಪವಿದೆ. ಅದು ಸುಳ್ಳು. ಅವರೆಲ್ಲರಿಗೂ ಕನ್ನಡ ಮೇಲೆ ಎಷ್ಟು ಪ್ರೀತಿ, ಗೌರವ ಇದೆ ಎಂಬುದಕ್ಕೆ “ರತ್ನಮಂಜರಿ’ ಸಾಕ್ಷಿ’ ಎಂದರು ರಾಜ್‌ ಚರಣ್‌.

ಚಿತ್ರದ ನಾಯಕಿ ಅಖೀಲಾ ಪ್ರಕಾಶ್‌ ಅವರಿಲ್ಲಿ ಫ್ಯಾಶನ್‌ ಡಿಸೈನರ್‌ ಆಗಿ ನಟಿಸಿದ್ದಾರಂತೆ. ಮೂಲತಃ ಮಡಿಕೇರಿಯವರಾದ ಅವರಿಗೆ ಮಡಿಕೇರಿ ಅಷ್ಟೊಂದು ಚೆನ್ನಾಗಿದೆ ಅಂತ ಗೊತ್ತಾಗಿದ್ದು ಚಿತ್ರೀಕರಣದಲ್ಲೇ ಅಂತೆ. ನಿರ್ದೇಶಕರು ಒಳ್ಳೆಯ ಚಿತ್ರ ಮಾಡಿದ್ದು, ಇದು ಎಲ್ಲರಿಗೂ ಹೊಸ ಇಮೇಜ್‌ ಕಲ್ಪಿಸಿಕೊಡುತ್ತದೆ ಎಂಬುದು ಅವರ ಮಾತು. ಹಂಸಲೇಖ ಅವರಿಗೆ ಚಿತ್ರದ ಬಗ್ಗೆ ನಿರೀಕ್ಷೆ ಇದೆಯಂತೆ. ಒಳ್ಳೆಯ ತಂಡ ಒಳ್ಳೆಯ ಚಿತ್ರ ಮಾಡಿದೆ. ಒಂದು ಕಾಲದಲ್ಲಿ “ರತ್ನಮಂಜರಿ’ ಸೂಪರ್‌ ಹಿಟ್‌ ಆಗಿತ್ತು. ಅದೇ ಹೆಸರಿನ ಈ ಚಿತ್ರಕ್ಕೂ ಗೆಲುವು ಕೊಡಲಿ ಎಂದರು.

ನಿರ್ಮಾಪಕರಲ್ಲೊಬ್ಬರಾದ ಸಂದೀಪ್‌ ಕುಮಾರ್‌ ಅವರಿಗೆ ಇದು ಮೊದಲ ಚಿತ್ರ. “ರತ್ನಮಂಜರಿ’ ಮಾಡಿದ್ದಕ್ಕೆ ಖುಷಿ ಹೆಚ್ಚಿದೆ. ಸುಮಾರು 80 ಜನರ ತಂಡ ಕಟ್ಟಿಕೊಂಡು ಕೂರ್ಗ್‌, ಅಮೆರಿಕಾ ಸೇರಿದಂತೆ ಇತರೆಡೆ ಚಿತ್ರೀಕರಿಸಲಾಗಿದೆ. ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ ಎಂದು ವಿವರ ಕೊಟ್ಟರು ಅವರು. ಹರ್ಷವಧನ್‌ ರಾಜ್‌ ಸಂಗೀತ ನೀಡಿದ್ದಾರೆ. ಕೆ.ಕಲ್ಯಾಣ್‌ ಎರಡು ಹಾಡುಗಳನ್ನು ಬರೆದಿದ್ದಾರೆ.ನಟಿ ಪಲ್ಲವಿರಾಜು, ವಸಿಷ್ಟಸಿಂಹ, ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮ.ಹರೀಶ್‌, ರಾಕೇಶ್‌ ಅಡಿಗ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next