ಧರ್ಮಶಾಲಾ : ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರ ಮಾವ, ಮಾಜಿ ಸಚಿವ,ಗುಲಾಬ್ ಸಿಂಗ್ ಠಾಕೂರ್ ಅವರು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಪಕ್ಷೇತರರಾಗಿ ಸ್ಪರ್ಧಿಸಿದ, ಸೌದಿಯ ಎನ್‌ಆರ್‌ಐ, ಪ್ರಕಾಶ್ ರಾಣಾ ಎದುರು ಪರಾಜಿತರಾಗಿದ್ದು ಈ ಸೋಲನ್ನು ಹೈಪ್ರೊಫೈಲ್ ಸೋಲು ಎಂದೇ ತಿಳಿಯಲಾಗಿದೆ. ಅಂತೆಯೇ ಈ ವರೆಗೂ ಅಜ್ಞಾತರಾಗಿದ್ದ ಪ್ರಕಾಶ್ ರಾಣಾ ಅವರೀಗ ಈ ವಿಜಯದೊಂದಿಗೆ ಏಕಾಏಕಿ ಪ್ರಸಿದ್ಧಿಗೆ ಬಂದಿದ್ದಾರೆ.
ಪ್ರಕಾಶ್ ರಾಣಾ ಮೂಲತಃ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಗುಲ್ವಾನ್ ಎಂಬ, ಯಾರಿಗೂ ಅಷ್ಟಾಗಿ ಗೊತ್ತೇ ಇಲ್ಲದ, ಗ್ರಾಮದವರು. ಇವರ ತಂದೆ ಪ್ರೇಮ್ ರಾಣಾ ಸೇನೆಯಲ್ಲಿದ್ದವರು.
30 ವರ್ಷಗಳ ಹಿಂದೆ ಪ್ರಕಾಶ್ ರಾಣಾ ಸೌದಿ ಅರೇಬಿಯಕ್ಕೆ ಹೋಗಿ ಅಲ್ಲಿ ಉದ್ಯಮ ನಡೆಸಿ ಕೋಟ್ಯಂತರ ಸಂಪಾದಿಸಿದರು. ಆದರೆ ತನ್ನ ತಂದೆಯ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಕಾಶ್ ರಾಣಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಾಗಿಯೇ ಇತ್ತೀಚೆಗೆ ಊರಿಗೆ ಬಂದರು. ಪಕ್ಷೇತರನಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಚ್ಚರಿಯ ಗೆಲವನ್ನು ಸಾಧಿಸಿದರು.
ಪ್ರಕಾಶ್ ರಾಣಾ ಜೋಗಿಂದರ್‌ನಗರ ಕ್ಷೇತ್ರದಿಂದ ಸ್ಪರ್ಧಿಸಿ ಗುಲಾಬ್ ಸಿಂಗ್ ಠಾಕೂರ್ ಎದುರು 6,625 ಮತಗಳ ಭಾರೀ ಮತಗಳ ಅಂತರದಿಂದ ಅನಿರೀಕ್ಷಿತ ಜಯ ಸಾಧಿಸಿದರು. ಗುಲಾಬ್ ಸಿಂಗ್ ಅವರ ಸೋಲು ಕಾಂಗ್ರೆಸ್ ಪಾಲಿಗೆ ಮಾಜಿ ಸಿಎಂ ಪ್ರೇಮ್ ಕುಮಾರ್ ಧುಮಾಲ್ ಅವರ ಸೋಲಿನಷ್ಟೇ ಮಹತ್ವದ್ದಾಗಿದೆ.