ಆಳಂದ: ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇರುವ ತಾಲೂಕಿನ ಕಡಗಂಚಿ ಗ್ರಾಮ ಪಂಚಾಯಿತಿ ಪ್ರದೇಶ ಈಗ ಭೂಪಟದಲ್ಲಿ ಶೈಕ್ಷಣಿಕ ಕ್ಷೇತ್ರವಾಗಿ ಮಿಂಚುತ್ತಿದೆ.
ವಾಗರಿ-ರಿಬ್ಬನಪಲ್ಲಿ ಹೆದ್ದಾರಿಯ ಜಿಲ್ಲಾ ಕೇಂದ್ರ ಕಲಬುರಗಿ, ತಾಲೂಕು ಕೇಂದ್ರ ಆಳಂದ ಮಾರ್ಗ ಮಧ್ಯದಲ್ಲಿ ಇರುವ ಈ ವಿಶ್ವವಿದ್ಯಾಲಯ ಕಡಗಂಚಿ ಗ್ರಾಮಕ್ಕೆ ಹೊಂದಿಕೊಂಡಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ರೈತರು ಸುಮಾರು 600 ಎಕರೆ ನಿವೇಶನ ನೀಡಿದ್ದಾರೆ. ಇಲ್ಲಿನ ಗ್ರಾಪಂನಿಂದ ವಿಶ್ವ ವಿದ್ಯಾಲಯಕ್ಕೆ ಉದ್ಯೋಗ ಖಾತ್ರಿ ಯೋಜನೆಗಳಿಂದ ಆರಂಭದಲ್ಲಿ ಅರಣ್ಯೀಕರಣಕ್ಕೆ ಸಾಥ್ ನೀಡಿದ ಹೆಗ್ಗಳಿಕೆಯೂ ಇದೆ.
ಧರ್ಮವಾಡಿ ಮತ್ತು ಬಸವಂತವಾಡಿ ಗ್ರಾಮಗಳು ಕಡಗಂಚಿ ವ್ಯಾಪ್ತಿಗೆ ಬರುತ್ತವೆ. ಇಲ್ಲಿನ ಬಹುತೇಕ ಜನರು ಕೃಷಿಕರು. ಹೆಚ್ಚು ಶಿಕ್ಷಣ ಪಡೆದು ಸರ್ಕಾರಿ ಹುದ್ದೆಯಲ್ಲಿ ಇದ್ದವರು ಇಲ್ಲಿದ್ದಾರೆ. ಅಲ್ಲದೇ ಎಸ್.ಎಸ್. ಪಾಟೀಲ ಅವರಂತ ದೇಶದ ದೊಡ್ಡ ಉದ್ಯಮಿಯನ್ನು ಪಡೆದ ಗ್ರಾಮ ಎನ್ನುವ ಹೆಗ್ಗಳಿಕೆಯೂ ಇದೆ. ಈ ಗ್ರಾಮದಲ್ಲಿ ದುಡಿಯುವ ಕೂಲಿ ಕಾರ್ಮಿಕರು ಇದ್ದಾರೆ. ಕೊರೊನಾ ಕರ್ಫ್ಯೂ, ಲಾಕ್‌ಡೌನ್‌ದಿಂದ ಈ ಕಾರ್ಮಿಕರು ಕೆಲಸವಿಲ್ಲದೇ ಕಂಗಾಲಾಗಿರುವ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಕೆಲಸ ಕೈಹಿಡಿದು ಬದುಕಿಗೆ ಆರ್ಥಿಕ ಆಶ್ರಯ ನೀಡಿದೆ.
ಗ್ರಾಪಂನಿಂದ ಒಟ್ಟು 1.80 ಕೋಟಿ ರೂ. ಕಾಮಗಾರಿ ಕೈಗೊಳ್ಳುವ ಗುರಿ ಹೊಂದಲಾಗಿದೆ. ಆದರೆ ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಾಮಗಾರಿಗೆ ತಾತ್ಕಾಲಿಕವಾಗಿ ತಡೆಯೊಡ್ಡಿದ್ದರಿಂದ ಸದ್ಯ 39 ಲಕ್ಷ ರೂ. ವೆಚ್ಚದಲ್ಲಿ ಬದು ನಿರ್ಮಾಣ, 15 ಲಕ್ಷ ರೂ.ಗಳಲ್ಲಿ ಗ್ರಾಮದ ಒಂದು ಕೆರೆಯನ್ನು ಐದು ಭಾಗವಾಗಿ ಹೂಳೆತ್ತಲಾಗಿದೆ. ಅಲ್ಲದೇ ನಾಲಾ ಹೂಳೆತ್ತಿದ್ದು, ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಯಿಂದ ರೈತರಿಗೆ, ಕಾರ್ಮಿಕರಿಗೆ ಅನುಕೂಲವಾಗಿದೆ.
ಒಟ್ಟು ಮಹಿಳೆಯರು ಮತ್ತು ಪುರುಷರು ಸೇರಿ 2024 ಮಂದಿ ಕಾರ್ಮಿಕರು ಕಾಮಗಾರಿಯಲ್ಲಿ ತೊಡಗಿದ್ದಾರೆ. ಈಗಾಗಲೇ ಕೈಗೊಂಡ ಕಾಮಗಾರಿಯಲ್ಲಿ ದುಡಿದವರಿಗೆ 39 ಲಕ್ಷ ರೂ. ಕೂಲಿ ಪಾವತಿಯಾಗಿದೆ. ಕಾಮಗಾರಿಯಲ್ಲಿ 14676 ಮಾನವ ದಿನಗಳನ್ನು ಸೃಜಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 28 ಲಕ್ಷ ರೂ. ವೆಚ್ಚದಲ್ಲಿ ಗ್ರಾಪಂ ಕಟ್ಟಡ ಕಾಮಗಾರಿಗೆ ಅನುಮೋದನೆ ದೊರೆತಿದೆ.
ತ್ಯಾಜ್ಯವಸ್ತುಗಳ ವಿಲೇವಾರಿ ಘಟಕ ಸ್ಥಾಪನೆ ಕಾಮಗಾರಿಯನ್ನು ಕೊರೊನಾ ಲಾಕ್‌ಡೌನ್ ನಿಯಂತ್ರಣದ ಸಾಧಕ-ಬಾಧಕ ನೋಡಿ ಆರಂಭಿಸುವ ಕುರಿತು ಸಿದ್ಧತೆ ನಡೆದಿದೆ ಎನ್ನುತ್ತಾರೆ ಕಡಗಂಚಿ ಉಪಾಧ್ಯಕ್ಷೆ ಇಂದುಮತಿ ದತ್ತಪ್ಪಾ ಮಾದಗೊಂಡ.
-ಮಹದೇವ ವಡಗಾಂವ