ವರದಿ: ದತ್ತು ಕಮ್ಮಾರ
ಕೊಪ್ಪಳ: ಕೊರೊನಾ 2ನೇ ಅಲೆ ನಿಯಂತ್ರಣದ ಬೆನ್ನಲ್ಲೇ 3ನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ತೀವ್ರ ಅಪೌಷ್ಟಿಕ ಮಕ್ಕಳ ಮೇಲೆ ಹೆಚ್ಚು ನಿಗಾ ಇರಿಸಿದೆ.
ಕೋವಿಡ್ ಕೇರ್‌ಗಳ ಮಾದರಿಯಲ್ಲೇ ನ್ಯೂಟ್ರಿಶಿಯನ್ ರಿಹ್ಯಾಬಿಲಿಟೇಷನ್ ಸೆಂಟರ್(ಎನ್ ಆರ್‌ಸಿ) ಆರಂಭಿಸಿ ಅಂತಹ ಮಕ್ಕಳ ಆರೈಕೆಗೂ ಯೋಜನೆ ರೂಪಿಸಿದೆ. 2ನೇ ಅಲೆಯಲ್ಲಿ ಆಗಿರುವ ಲೋಪಗಳನ್ನು 3ನೇ ಅಲೆ ಉಲ್ಬಣಿಸುವ ಮೊದಲೇ ಸರಿಪಡಿಸಲು ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳುತ್ತಿದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಜಿಲ್ಲಾದ್ಯಂತ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ತಪಾಸಣೆ ಕೈಗೊಳ್ಳುತ್ತಿದೆ.
ಕೋವಿಡ್ ಸೇರಿದಂತೆ ಇತರೆ ಸೋಂಕಿನಿಂದ ಮಗು ಬಳಲುತ್ತಿದ್ದರೆ ಅಂತಹ ಮಕ್ಕಳ ಪಟ್ಟಿ ಮಾಡುವುದು, ಆ ಮಕ್ಕಳ ಚಿಕಿತ್ಸೆಗೆ ಸಲಹೆ ನೀಡುವ ಕೆಲಸದಲ್ಲಿ ತೊಡಗಿದೆ. ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಮೊದಲಿಂದಲೂ ಇದ್ದೇ ಇದೆ. ಪ್ರಸ್ತುತ ಇಲಾಖೆಯಡಿ 0-6 ವರ್ಷದೊಳಗಿನ 1,65,555 ಮಕ್ಕಳಿದ್ದು, ಇವರಲ್ಲಿ 1,33,957 ಮಕ್ಕಳು ಆರೋಗ್ಯವಾಗಿದ್ದಾರೆ. 30,844 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದರೆ, 754 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಲಾಖೆಯು ಈ ಎಲ್ಲ ಮಕ್ಕಳ ಮೇಲೂ ಹೆಚ್ಚು ನಿಗಾ ವಹಿಸುತ್ತಿದೆ.
ಎನ್‌ಆರ್‌ಸಿ ಆರಂಭಕ್ಕೆ ಸಿದ್ಧತೆ: ಸರ್ಕಾರ ಕೋವಿಡ್ ಕೇರ್ ಸೆಂಟರ್ ಮಾದರಿಯಲ್ಲೇ ಮಕ್ಕಳ ಆರೈಕೆಗಾಗಿ ಅಪೌಷ್ಟಿಕ ಮಕ್ಕಳ ಆರೈಕೆ ಕೇಂದ್ರ(ಎನ್‌ಆರ್‌ಸಿ) ಆರಂಭಿಸಲು ಯೋಜನೆ ಹಾಕಿಕೊಂಡಿದೆ. ಮೂರನೇ ಅಲೆಯಲ್ಲಿ ಮಕ್ಕಳು ಸೋಂಕಿಗೆ ತುತ್ತಾದರೆ ಅವರನ್ನು ಕೋವಿಡ್ ಕೇರ್‌ಗೆ ಕರೆ ತನ್ನಿ ಎಂದರೆ ಪಾಲಕರು ಆತಂಕಕ್ಕೆ ಒಳಗಾಗುತ್ತಾರೆ. ಆದ್ದರಿಂದ ನ್ಯೂಟ್ರಿಶಿಯನ್ ರಿಹ್ಯಾಬಿಲಿಟೇಷನ್ ಸೆಂಟರ್ ಆರಂಭಿಸುವ ಕುರಿತು ಜಿಲ್ಲಾಡಳಿತ ಸಮಾಲೋಚನೆ ನಡೆಸಿದೆ. ಪೆಡಿಯಾಟ್ರಿಕ್ ಆಸ್ಪತ್ರೆ ಜತೆಗೆ ಕೇಂದ್ರಗಳನ್ನು ಆರಂಭದ ಕುರಿತಂತೆ ಚರ್ಚಿಸಿದೆ. ಇಲ್ಲಿ ತಜ್ಞ ವೈದ್ಯರು, ಸಿಬ್ಬಂದಿ ವರ್ಗ ಸೇರಿದಂತೆ ಕೆಲವೊಂದು ವ್ಯವಸ್ಥೆ ಮಾಡಿಕೊಳ್ಳುವ ಕುರಿತಂತೆ ಯೋಜನೆ ಮಾಡಿದ್ದು, ಜಿಲ್ಲೆಯಲ್ಲಿ ಎಷ್ಟು ಕೇಂದ್ರ ಆರಂಭಿಸಬೇಕು ಎನ್ನುವುದನ್ನು ಶೀಘ್ರದಲ್ಲೇ ಘೋಷಣೆ ಮಾಡುವ ಸಾಧ್ಯತೆಯಿದೆ.
ಅಪೌಷ್ಟಿಕ ಮಕ್ಕಳ ಪಾಲಕರಿಗೆ ಲಸಿಕೆ: ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ತಾಗಿದರೆ ಅವರಿಗೆ ಲಸಿಕೆ ಹಾಕಲು ಸರ್ಕಾರ ಇನ್ನೂ ಮಾರ್ಗಸೂಚಿ ಹೊರಡಿಸಿಲ್ಲ. ಹೀಗಾಗಿ ಮಕ್ಕಳ ಆರೈಕೆ ದೃಷ್ಟಿಯಿಂದ ಅವರ ಪಾಲಕರಿಗೆ ಮೊದಲು ಲಸಿಕೆ ಹಾಕಿಸಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕುರಿತಂತೆ ಸರ್ಕಾರ ಮುಂದಾಗಿದೆ. 754 ಮಕ್ಕಳ ಪಾಲಕರಿಗೆ ಲಸಿಕೆ ಹಾಕಿಸಲು ತಹಶೀಲ್ದಾರ್‌ಗಳಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸೂಚನೆ ನೀಡಿದೆ.