ಹಾಸನ: ರಾಜ್ಯದಲ್ಲಿ ಪಾಳೇಗಾರಿಕೆ ರಾಜಕಾರಣವನ್ನು ಬುಡ ಸಹಿತ ಕಿತ್ತು ಹಾಕುತ್ತೇವೆ. ಅದಕ್ಕಾಗಿಯೇ ಭಾರೀ ಹೋರಾಟದ ಮೂಲಕ ಬಿಜೆಪಿ ಸರ್ಕಾರ ರಚನೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಹೇಳಿದರು.
ನಗರದಲ್ಲಿ ಭಾನುವಾರ ನಡೆದ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಎಚ್.ಕೆ.ಸುರೇಶ್ ಅವರ ಪದಗ್ರಹಣ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಅವರು ಮಾತ ನಾಡಿ ದರು. ಸಮಾನ ನಾಗರಿಕ ಸಂಹಿತೆ ಜಾರಿಗೆ ಬರಬೇಕು ಎಂದು ಕಳೆದ 40 ವರ್ಷಗಳಿಂದಲೂ ಹೇಳುತ್ತಲೇ ಬಂದಿದ್ದೇವೆ.
ದೇಶದಲ್ಲಿ ಸಮಾನ ನಾಗರಿಕ ಸಂಹಿತೆ, ಎನ್‌ಆರ್‌ಸಿ ಜಾರಿಗೆ ಈಗಿನದಕ್ಕಿಂತ ಒಳ್ಳೆಯ ಕಾಲ ಪ್ರಧಾನಿ ನರೇಂದ್ರ ಮೋದಿ ಆವರಿಗೆ ಸಿಗುವುದಿಲ್ಲ. ಹಾಗಾಗಿ, ಸಮಾನ ನಾಗರಿಕ ಸಂಹಿತೆ, ಎನ್‌ಆರ್‌ಸಿಯನ್ನು ಜಾರಿಗೊಳಿಸಬೇಕು. ಇದು ಬಿಜೆಪಿಯ ಹೊಣೆಗಾರಿಕೆಯೂ ಹೌದು ಎಂದರು.
ಪೌರತ್ವ ಕಾಯ್ದೆ ತಿದ್ದುಪಡಿಯನ್ನು ಬಿಜೆಪಿ ಸರ್ಕಾರ ಬಿಟ್ಟು ಇನ್ಯಾರೂ ಜಾರಿಗೆ ತರಲು ಸಾಧ್ಯವಿಲ್ಲ. 3 ದೇಶಗಳ 6 ಸಮುದಾಯದ ನಿರಾಶ್ರಿತರಿಗೆ ಭಾರತವಲ್ಲದೇ ಇನ್ಯಾವ ದೇಶ ಅಶ್ರಯ ಕೊಡಲು ಸಾಧ್ಯ?. ಇದು ಮಾನವೀಯ ಧರ್ಮವಷ್ಟೇ ಅಲ್ಲ. ರಾಜಕೀಯ ಕರ್ತವ್ಯವೂ ಹೌದು.
ಅಸ್ಸಾಂನಲ್ಲಿ ಜಾರಿಯಲ್ಲಿರುವ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತಂದರೆ ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳಿಗೇನು ಸಂಕಟ?. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ದೇಶದ ಹಿತಾಸಕ್ತಿ ಹಾಳಾಗುತ್ತದೆ ಎಂಬ ಭಯವಿಲ್ಲ. ಎನ್‌ಆರ್‌ಸಿ ಜಾರಿಯಾದರೆ ಅವರ ಓಟ್‌ಬ್ಯಾಂಕ್ ಕಡಿಮೆಯಾಗುತ್ತದೆ ಎಂಬ ಭಯವಷ್ಟೇ ಎಂದು ವ್ಯಂಗ್ಯವಾಡಿದರು.