Advertisement

ಕೊಳವೆ ಬಾವಿ ದುರ್ಘ‌ಟನೆ: ಬಾಲಕಿಯ ರಕ್ಷಣೆಗೆ ಮುಂದುವರಿದ ಯತ್ನ

03:45 AM Apr 24, 2017 | Team Udayavani |

ಝಂಜರವಾಡ (ಅಥಣಿ): ವಿಫಲ ಕೊಳವೆ ಬಾವಿಗೆ ಬಿದ್ದಿರುವ ಆರು ವರ್ಷದ ಮುದ್ದು ಕಂದ ಕಾವೇರಿಯ ರಕ್ಷಣೆಗೆ ಶತಾಯಗತಾಯ ಪ್ರಯತ್ನ ನಡೆದಿದೆ.

Advertisement

ಝಂಜರವಾಡ ಪುನರ್ವಸತಿ ಕೇಂದ್ರದ ಅನತಿ ದೂರದಲ್ಲಿ ಶನಿವಾರ ಸಂಜೆ 5:30ರ ಸುಮಾರಿಗೆ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದು, ಭಾನುವಾರ ರಾತ್ರಿಯೂ ಮೇಲೆತ್ತಲು ಸಾಧ್ಯವಾಗದೇ ರಕ್ಷಣಾ ಕಾರ್ಯ ಮುಂದುವರಿದಿದೆ. ಪಕ್ಕದಲ್ಲೇ ಇನ್ನೊಂದು ಕೊಳವೆ ಬಾವಿ ಕೊರೆದು ಆ ಮೂಲಕ ರಕ್ಷಿಸುವ ಪ್ರಯತ್ನ ನಡೆಸಲಾಗುತ್ತಿದೆ.

ಕಟ್ಟಿಗೆ ಕಟ್ಟಲು ತಂದಿದ್ದ ಹಗ್ಗದಿಂದ ಮೇಲೆತ್ತಲು ತಾಯಿ ಮೊದಲ ಪ್ರಯತ್ನ ಮಾಡಿ ವಿಫಲವಾಗಿದ್ದಾಳೆ. ಬಳಿಕ ಸುದ್ದಿ ತಿಳಿದು ಜಿಲ್ಲಾಡಳಿತದ ಕೋರಿಕೆ ಮೇರೆಗೆ ಶನಿವಾರ ರಾತ್ರಿ 9 ಗಂಟೆಗೆ ಬೆಳಗಾವಿಯಿಂದ ಮರಾಠಾ ಸೇನಾ ಲಘು ಪದಾತಿ ದಳ ಬಂದಿದ್ದರೆ, ಬೆಳಗಾವಿ-ಸಾಂಗ್ಲಿಯ ಬಸವರಾಜ ಹಿರೇಮಠ ನೇತೃತ್ವದ ಕರ್ನಾಟಕ ತುರ್ತು ನಿರ್ವಹಣಾ ಖಾಸಗಿ ಸಂಸ್ಥೆಯ ತಜ್ಞರು ಕಾರ್ಯಾಚರಣೆ ಆರಂಭಿಸಿದರು. ಕೆಲವೇ ಕ್ಷಣದಲ್ಲಿ ಪುಣೆಯಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕದ ಎರಡು ತಂಡ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಹಟ್ಟಿ ಚಿನ್ನದ ಗಣಿ ಸುರಂಗ ತಜ್ಞರು ಭಾಗಿಯಾಗಿದ್ದಾರೆ.

ಭಾನುವಾರ ಬೆಳಗಿನ ಹಂತದವರೆಗೆ ಒಂದೆಡೆ ಕೊಳವೆ ಬಾವಿಯಲ್ಲಿರುವ ಬಾಲಕಿಯ ಉಸಿರಾಟಕ್ಕೆ ಆಮ್ಲಜನಕ ಪೂರೈಕೆೆ ಮಾಡುತ್ತಲೇ ಕೊಳವೆ ಬಾವಿಯಲ್ಲಿ ಎಷ್ಟು ಆಳದಲ್ಲಿದ್ದಾಳೆ ಎಂದು ಪತ್ತೆ ಹಚ್ಚುವ ಕಾರ್ಯ ನಡೆಯಿತು. ಮತ್ತೂಂದೆಡೆ ಕೊಳವೆ ಬಾವಿಯ ನಾಲ್ಕಾರು ಅಡಿ ದೂರದಲ್ಲಿ ಉತ್ತರ ದಿಕ್ಕಿನಿಂದ ಸುರಂಗ ಕೊರೆಯುವ ಕಾರ್ಯವೂ ಮುಂದುವರಿಯಿತು.

ಗೋಚರಿಸಿದ ಕೈಗಳು:
ಮಗಳನ್ನು ರಕ್ಷಿಸುವ ಹಂತದಲ್ಲಿ ತಾಯಿ ಹೆಣಗಾಡಿದ ಕಾರಣ 22 ಅಡಿ ಆಳದಲ್ಲಿ ಸಿಲುಕಿಕೊಂಡಿರುವ ಬಾಲಕಿ ಕಾವೇರಿ ತಲೆಯ ಮೇಲೆ ಸುಮಾರು 3 ಅಡಿ ಮಣ್ಣು ಬಿದ್ದಿದೆ. ತಲೆ ಮೇಲಿದ್ದ ಮಣ್ಣನ್ನು ವ್ಯಾಕ್ಯೂಮ್‌ ಮೂಲಕ ಹೊರ ತೆಗೆಯುವ ವೇಳೆಗೆ ಸುಮಾರು 20 ಗಂಟೆ ಗತಿಸಿದ್ದು, ತದನಂತರ ಬಾಲಕಿಯ ಕೈಗಳು ಗೋಚರಿಸಿವೆ.

Advertisement

ಕೂಡಲೇ ಕಾವೇರಿ ತೊಟ್ಟಿರುವ ಬಟ್ಟೆಗೆ ಹುಕ್‌ ಹಾಕಿ ಆಕೆಯನ್ನು ಹೊರ ತೆಗೆಯುವ ಪ್ರಯತ್ನ ನಡೆಸಲಾಯಿತಾದರೂ ಫ‌ಲಿಸಲಿಲ್ಲ. ಇನ್ನು ಸುರಂಗ ಕೊರೆಯುವ ಹಂತದಲ್ಲಿ ಗಟ್ಟಿ ಕಲ್ಲುಗಳು ಕಾಣಿಸಿಕೊಂಡಿದ್ದು, ಕಾರ್ಯಾಚರಣೆಗೆ ಅಡೆತಡೆಯಾಗಿದೆ. ಸುರಂಗ ಕೊರೆಯುವ ಕಾರ್ಯಾಚರಣೆಯಿಂದ 300 ಅಡಿ ಆಳ ಇರುವ ಕೊಳವೆ ಬಾವಿಗೆ ಬಾಲಕಿ ಮತ್ತೆ ಕುಸಿಯುವ ಸಾಧ್ಯತೆ ಇತ್ತು. ಹೀಗಾಗಿ ಮಧ್ಯಾಹ್ನದ ವೇಳೆಗೆ ಕೇವಲ 5 ಅಡಿ ಸುರಂಗ ಕೊರೆದು, ಕಾರ್ಯಾಚರಣೆ ನಿಲ್ಲಿಸಲಾಯಿತು. ಜತೆಗೆ ಬಾಲಕಿ ಕೈಗೆ ಬೆಲ್ಟ್ ಬಿಗಿದು ಸ್ಥಿರವಾಗಿವಂತೆ ಮಾಡಲಾಯಿತು.

ಸ್ಥಳೀಯರ ಸಹಕಾರ:
ಈ ಹಂತದಲ್ಲೇ ಸ್ಥಳೀಯರು ಕೊಳವೆ ಬಾವಿ ಪಕ್ಕದಲ್ಲೇ ಬೋರ್‌ವೆಲ್‌ ಯಂತ್ರದ ಮೂಲಕ ಗುಂಡಿಗಳನ್ನು ತೋಡಿ ಸುರಂಗ ಕೊರೆಯುವ ಕಾರ್ಯಾಚರಣೆಗೆ ಸಹಕಾರಿ ಆಗುವ ಸಲಹೆ ನೀಡಿದ್ದಾರೆ. ಹೀಗಾಗಿ ಸಂಜೆ 4 ಗಂಟೆ ಸುಮಾರಿಗೆ ಬೋರ್‌ವೆಲ್‌ ಯಂತ್ರ ತರಿಸಲಾಯಿತು. ಬಾಲಕಿ ಬಿದ್ದಿರುವ ಕೊಳವೆ ಬಾವಿ ಪಕ್ಕದಲ್ಲಿ ಕೊರೆಯಲಾಗಿದ್ದ 12 ಅಡಿ ಸುರಂಗದ ಸ್ಥಳದಲ್ಲೇ 12 ಅಡಿ ಆಳದಲ್ಲಿ ಸಾಲಾಗಿ 20 ಗುಂಡಿಗಳನ್ನು ತೋಡುವುದು ಹಾಗೂ ತೋಡಿ ಗುಂಡಿಗಳಿಂದ ಹಿಟಾಚಿ ಯಂತ್ರಗಳನ್ನು ಬಳಸಿ ನೇರವಾಗಿ 24 ಅಡಿಗೆ ಸುರಂಗ ಕೊರೆದು ಬಾಲಕಿ ರಕ್ಷಿಸುವ ಕಾರ್ಯಾಚರಣೆ ನಡೆದಿದೆ.

ರಾತ್ರಿ 9.30ರ ನಂತರವೂ ಸುರಂಗ ಕೊರೆಯುವ ಹಾಗೂ ಬಾಲಕಿಯನ್ನು ರಕ್ಷಿಸುವ ಕಾರ್ಯಚರಣೆ ನಡೆದಿತ್ತು.

ಹಿರಿಯ ಗಣಿ ಸುರಂಗ ತಜ್ಞ ವಿಜ್ಞಾನಿ ಮಡಿ ಅಲಗನ್‌ ನೇತೃತ್ವದಲ್ಲಿ ಸ್ಥಳಕ್ಕೆ ಬಂದಿರುವ ಹಟ್ಟಿ ಚಿನ್ನದ ಗಣಿ ಕಂಪನಿಯ 7 ಜನರ ನಮ್ಮ ತಂಡ ಸುರಂಗ ಕೊರೆಯುವ ಕಾರ್ಯದಲ್ಲಿ ತೊಡಗಿದೆ. ಕಾರ್ಯಾಚರಣೆಗೆ ಗಟ್ಟಿಯಾದ ಕಲ್ಲು ಅಡ್ಡಿ ಉಂಟು ಮಾಡುತ್ತಿದೆ. ಬಾಲಕಿ ಆಳದಲ್ಲಿ ಸಿಲುಕಿರುವ ಕಾರಣ ಸುರಂಗ ಕೊರೆಯುವಲ್ಲಿ ಆತುರ ಪಡುವಂತಿಲ್ಲ. ಹೀಗಾಗಿ ನಮ್ಮ ಚಿಕ್ಕ ರಾಕ್‌ ಡ್ರಿಲ್‌ ಮಶಿನ್‌ಗಿಂತ ಬೋರ್‌ವೆಲ್‌ ಯಂತ್ರದ ಮೂಲಕವೇ ಸುರಂಗ ಕೊರೆಯಲು 12 ಅಡಿಗಳ 20 ಗುಂಡಿ ತೋಡುತ್ತಿದ್ದೇವೆ.
– ಮಧುಸೂಧನ, ಕ್ಯಾಪ್ಟನ್‌, ಹಟ್ಟಿ ಚಿನ್ನದ ಗಣಿ ತಜ್ಞರ ತಂಡ

ಕೊಳವೆ ಬಾವಿ 3-4 ನೂರು ಅಡಿ ಆಳದಲ್ಲಿದೆ. ಬಾಲಕಿ 22 ಅಡಿಯಲ್ಲಿ ಸಿಲುಕಿದ್ದು, ಪತ್ತೆಯಾಗಿದೆ. ಶಕೀಲ್‌ ಅವರ ನೇತೃತ್ವದಲ್ಲಿ ಬಂದಿರುವ 35 ಸದಸ್ಯರ ನಮ್ಮ ತಂಡ ಕುಡಿಯುವ ನೀರಿಗೂ ನಿರೀಕ್ಷೆ ಇಲ್ಲದೇ ಬಾಲಕಿಯ ರಕ್ಷಣೆಗೆ ಮುಂದಾಗಿದೆ. ಬಾಲಕಿ ತಲೆ ಮೇಲೆ ಮಣ್ಣು ಕುಸಿದಿದ್ದು, ವ್ಯಾಕ್ಯೂಮ್‌ನಿಂದ ಸ್ವತ್ಛಗೊಳಿಸುವ ಕಾರ್ಯ ಹಾಗೂ ಕೈಗಳಿಗೆ ಬೆಲ್ಟ್ ಹಾಕಿ ಆಕೆಯನ್ನು ಸ್ಥಿರವಾಗಿ ಇರಿಸಲಾಗಿದೆ. ಇದೀಗ ಸುರಂಗ ಕೊರೆಯಲು ಸ್ಥಳೀಯರ ಸಲಹೆ ಮೇರೆಗೆ ಬೋರ್‌ವೆಲ್‌ ಯಂತ್ರದ ಗುಂಡಿಗಳನ್ನು ತೊಡುವ ಕೆಲಸ ನಡೆದಿದೆ. ಕಾರ್ಯಾಚರಣೆ ಸ್ಥಳದಲ್ಲಿ ಕಲ್ಲುಗಳ ಕಾಣಿಸಿಕೊಂಡಿರುವ ಕಾರಣ ಕಾರ್ಯಾಚರಣೆ ಮುಕ್ತಾಯಗೊಳ್ಳುವ ಕುರಿತು ನಿಖರವಾಗಿ ಹೇಳಲು ಸಾಧ್ಯವಿಲ್ಲ.
-ವಿಶಾಲ, ಸದಸ್ಯ, ಎನ್‌ಡಿಆರ್‌ಎಫ್‌ಪುಣೆ    

ಬೋರ್‌ವೆಲ್‌ ಮೂಲಕ ಗುಂಡಿಗಳನ್ನು ತೋಡುವ ವಿಚಾರ ನೀಡಿದ ನಾನೇ ಖುದ್ದಾಗಿ ಬೋರ್‌ವೆಲ್‌ ತರಿಸಿದ್ದೇನೆ. ಈ ಭಾಗದಲ್ಲಿ ಹಲವು ರೀತಿಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿರುವ ನಾನು ಈ ಸಂಕಷ್ಟದ ಸಂದರ್ಭದಲ್ಲಿ ಮಾನವೀಯತೆ ಮೆರೆಯಲು ಮುಂದಾಗಿ, ಬೋರ್‌ವೆಲ್‌ ತರಿಸಿದ್ದೇನೆ.
-ಎಸ್‌.ಬಿ.ರಾಠೊಡ, ಗುತ್ತಿಗೆದಾರ, ತುಂಗಳ ಗ್ರಾಮ.

ಬಾಲಕಿಯನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆ. ಬಳಿಕ ಘಟನೆಯ ಕುರಿತು ಪ್ರಕರಣ ದಾಖಲಿಸುವ ಹಾಗೂ ವಿಫಲ ಬೋರ್‌ವೆಲ್‌ ಮಾಲೀಕನನ್ನು ಬಂಧಿಧಿಸುವ ವಿಚಾರ ನಂತರದ್ದು.
-ರವಿಕಾಂತೇಗೌಡ, ಎಸ್ಪಿ ಬೆಳಗಾವಿ

Advertisement

Udayavani is now on Telegram. Click here to join our channel and stay updated with the latest news.

Next